ಅಡಿಲೇಡ್ ಟೆಸ್ಟ್: ಭಾರತಕ್ಕೆ ಐತಿಹಾಸಿಕ ಜಯ, ಸರಣಿಯಲ್ಲಿ 1-0 ಮುನ್ನಡೆ

0
PC: BCCI

ಅಡಿಲೇಡ್, ಡಿಸೆಂಬರ್ 10: ಭರ್ಜರಿ ಬೌಲಿಂಗ್ ಪ್ರದರ್ಶನವಿತ್ತ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 31 ರನ್ ಗಳ ಅಮೋಘ ಜಯ ದಾಖಲಿಸಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಬಳಗ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

323 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 4ನೇ ದಿನದಂತ್ಯಕ್ಕೆ 104 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.

PC: BCCI

5ನೇ ದಿನ ಆಟ ಮುಂದುವರಿಸಿದ ಆಸ್ಟ್ರೇಲಿಯಾಗೆ ವೇಗಿ ಇಶಾಂತ್ ಶರ್ಮಾ ಮೊದಲ ಆಘಾತ ನೀಡಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದ ಟ್ರಾವಿಸ್ ಹೆಡ್, ಇಶಾಂತ್ ಅವರ ಚಾಣಾಕ್ಷ ಎಸೆತಕ್ಕೆ ಔಟಾದರು. 

6ನೇ ವಿಕೆಟ್ ಗೆ ಶಾನ್ ಮಾರ್ಷ್ ಮತ್ತು ನಾಯಕ ಟಿಮ್ ಪೇಯ್ನ್ 41 ರನ್ ಸೇರಿಸಿ ಭಾರತಕ್ಕೆ ತಿರುಗೇಟು ನೀಡಿದರಾದರೂ, 60 ರನ್ ಗಳಿಸಿ ಆಡುತ್ತಿದ್ದ ಮಾರ್ಷ್, ವೇಗಿ ಜಸ್ಪ್ರೀತ್ ಬುಮ್ರಾ ಅವರ ಔಟ್ ಸ್ವಿಂಗ್ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಕ್ಯಾಚಿತ್ತರು. ಕೆಳ ಕ್ರಮಾಂಕದ ಬ್ಯಾಟ್ಸ್. ಮನ್ ಗಳ ದಿಟ್ಟ ಪ್ರತಿರೋಧದಿಂದಾಗಿ ಒಂದು ಹಂತದಲ್ಲಿ ಭಾರತ ಸೋಲಿನ ಭೀತಿ ಎದುರಿಸಿತು. ಪೇಯ್ನ್(41), ಪ್ಯಾಟೇ ಕಮಿನ್ಸ್(28), ಮಿಚೆಲ್ ಸ್ಟಾರ್ಕ್(28), ನೇಥನ್ ಲಯಾನ್(38*) ಆಸ್ಟ್ರೇಲಿಯಾವನ್ನು ಗೆಲುವಿನತ್ತ ಮುನ್ನಡೆಸುವ ಪ್ರಯತ್ನ ಮಾಡಿದರು. ಆದರೆ ಕೊನೆಯ ಆಟಗಾರ ಜೋಶ್ ಹೇಜಲ್ವುಡ್(13) ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಸೆತದಲ್ಲಿ 2ನೇ ಸ್ಲಿಪ್ ನಲ್ಲಿದ್ದ ಕೆ.ಎಲ್ ರಾಹುಲ್ ಗೆ ಕ್ಯಾಚ್ ನೀಡುತ್ತಲೇ ಭಾರತ ಗೆಲುವಿನ ಸಂಭ್ರಮ ಆಚರಿಸಿತು. 

ಪ್ರಥಮ ಇನ್ನಿಂಗ್ಸ್ ನಲ್ಲಿ 123 ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 71 ರನೇ ಸಹಿತ ಪಂದ್ಯದಲ್ಲಿ 194 ರನ್ ಗಳಿಸಿದ ಚೇತೇಶ್ವರ್ ಪೂಜಾರ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.

ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತ ದಾಖಲಿಸಿದ 6ನೇ ಹಾಗೂ ಅಡಿಲೇಡ್ ಓವಲ್ ನಲ್ಲಿ ದಾಖಲಿಸಿದ 2ನೇ ಗೆಲುವಾಗಿದೆ. 

ಸರಣಿಯ 2ನೇ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಪರ್ತ್ ನಲ್ಲಿ ಆರಂಭವಾಗಲಿದೆ. 

Brief scores 

India 250 & 307 in 106.5 overs (Pujara 71, Rahane 70, Rahul 44; Lyon 6/122) beat Australia: 235 & 291 all out in 119.5 overs (Shaun Marsh 60, Tim Paine 41; Jaspreet Bumrah 3/68, R Ashwin 3/92, Mohammed Shami 3/65, Ishant Sharma 1/48) by 31 runs.

LEAVE A REPLY

Please enter your comment!
Please enter your name here

fifteen − three =