ಅಣ್ತಮ್ಮಾಸ್ ಕ್ರಿಕೆಟ್ ಪ್ರೀತಿ: ಚಿಕ್ಕನಹಳ್ಳಿಯಲ್ಲಿ ದೊಡ್ಡ ಕ್ರೀಡಾಂಗಣ

0

ಬೆಂಗಳೂರು, ಫೆಬ್ರವರಿ 16: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ದೊಡ್ಡಾಲದಮರ ಬಳಿ ಚಿಕ್ಕನಹಳ್ಳಿ ಎಂಬ ಊರಿದೆ. ಹೆಸರಿಗೆ ತಕ್ಕಂತೆ ಅದೊಂದು ಚಿಕ್ಕ ಹಳ್ಳಿ. ಆದರೆ ಆ ಚಿಕ್ಕ ಹಳ್ಳಿ ಇದೀಗ ದೊಡ್ಡ ಸದ್ದು ಮಾಡುತ್ತಿದೆ. ರಾಜ್ಯದ, ದೇಶದ ಖ್ಯಾತ ಕ್ರಿಕೆಟ್ ತಾರೆಗಳು ಈ ಹಳ್ಳಿಗೆ ಬರುತ್ತಿದ್ದಾರೆ. ಏಕೆಂದರೆ ಇಲ್ಲೊಂದು ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಮೈದಾನವಿದೆ. ಆ ಮೈದಾನದಲ್ಲಿ ಆಡಿದ ಪ್ರತಿಯೊಬ್ಬರು ಕ್ರೀಡಾಂಗಣದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

ಚಿಕ್ಕ ಹಳ್ಳಿಯಲ್ಲಿ ಕ್ರೀಡಾಂಗಣವನ್ನು ನಿರ್ಮಿಸಿ ಕ್ರಿಕೆಟ್ ತಾರೆಗಳನ್ನು ಚಿಕ್ಕನಹಳ್ಳಿಗೆ ಸೆಳೆಯುವಂತೆ ಮಾಡಿದ ಹಿರಿಮೆ ಬೆಂಗಳೂರಿನ ಉದ್ಯಮಿಗಳಾದ ಆರ್.ಕುಮಾರ್ ಹಾಗೂ ಆರ್.ಕಿರಣ್ ಎಂಬ ಸಹೋದರರಿಗೆ ಸಲ್ಲುತ್ತದೆ.

ಕುಮಾರ್ ಹಾಗೂ ಕಿರಣ್ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದವರು. ಇವರ ಕ್ರಿಕೆಟ್ ಪ್ರೀತಿಯಿಂದಾಗಿ ಬೆಂಗಳೂರಿನ ಹೃದಯ‘ಾಗದಲ್ಲಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ 32 ಕಿ.ಮೀ. ದೂರದ ಚಿಕ್ಕನಹಳ್ಳಿಯಲ್ಲಿ ಕಿನಿ ಕ್ರಿಕೆಟ್ ಗ್ರೌಂಡ್ ತಲೆ ಎತ್ತಿ ನಿಂತಿದೆ.  ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಮಾಲೀಕರಾಗಿರುವ ಆರ್.ಕುಮಾರ್ ಹಾಗೂ ಅವರ ತಮ್ಮ ಕಿರಣ್ ಅವರ ಶ್ರಮದಿಂದ ಕ್ರಿಕೆಟಿಗರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಮೈದಾನದಲ್ಲಿ ಆಡುವ ಅವಕಾಶ ಸಿಗುತ್ತಿದೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕ್ರಿಕೆಟಿಗರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಒದಗಿಸಿದೆ.

ಕುಮಾರ್ ಅವರ ಪುತ್ರ ರೋಹಿತ್ ಹಾಗೂ ಕಿರಣ್ ಅವರ ಪುತ್ರಿ ರೋಶನಿ ಕಿರಿಯರ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಗಳನ್ನು ಪ್ರತಿನಿಸಿದ್ದಾರೆ. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್‌ಮನ್ ಆಗಿರುವ ರೋಹಿತ್ ಇತ್ತೀಚೆಗೆ ಕೆಪಿಎಲ್-7 ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ಪರ ಪದಾರ್ಪಣೆ ಮಾಡಿ ಭರವಸೆ ಮೂಡಿಸಿದ್ದಾರೆ. ಇನ್ನು ಬಲಗೈ ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ರೋಶನಿ, 16 ವರ್ಷದೊಳಗಿನವರ ಕರ್ನಾಟಕದ ಬಾಲಕಿಯರ ತಂಡವನ್ನು ಪ್ರತಿನಿಸಿದ್ದು, ಇತ್ತೀಚೆಗೆ ದಕ್ಷಿಣ ವಲಯದಲ್ಲಿ ಚಾಂಪಿಯನ್ ಆಗಿ ಇತಿಹಾಸ ಬರೆದ ಕರ್ನಾಟಕ ತಂಡದ ಉಪನಾಯಕಿಯಾಗಿದ್ದಾರೆ. ಅಲ್ಲದೆ 19 ವರ್ಷದೊಳಗಿನವರ ಸಂಭಾವ್ಯ ತಂಡದಲ್ಲಿದ್ದಾರೆ.

ಅಣ್ಣನ ಮಗ ರೋಹಿತ್ ಕ್ರಿಕೆಟ್ ಆಡುವುದನ್ನು ನೋಡಿ ನನ್ನ ಮಗಳಿಗೆ ಕ್ರಿಕೆಟ್‌ನತ್ತ ಆಸಕ್ತಿ ಬೆಳೆಯಿತು. ಮಗಳು ಕ್ರಿಕೆಟ್ ಆಡಲು ಶುರು ಮಾಡಿದಾಗ ಒಳ್ಳೆಯ ಮೈದಾನಗಳು ಇರಲಿಲ್ಲ. ಕಲ್ಲು-ಮಣ್ಣಿನ ಮೈದಾನಗಳಲ್ಲಿ ಆಡಿ ಮುಖಕ್ಕೆ, ದೇಹಕ್ಕೆ ಗಾಯವಾಗುತ್ತಿತ್ತು. ಮಗಳಂತೆ ಇತರ ಹುಡುಗಿಯರಿಗೂ ಈ ಸಮಸ್ಯೆಗಳು ಎದುರಾಗುತ್ತಿದ್ದವು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಹೀಗಾಗಿ ನಾನೇ ಏಕೆ ಹಸಿರು ಹುಲ್ಲುಹಾಸಿನ ಒಂದು ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಬಾರದು ಎಂದು ಯೋಚಿಸಿದೆ. ನಾನು ಹಾಗೂ ಸಹೋದರ ಆರ್.ಕುಮಾರ್ ಸೇರಿಕೊಂಡು ಈ ಕ್ರೀಡಾಂಗಣವನ್ನು ನಿರ್ಮಿಸಿದೆವು.

— ಆರ್.ಕಿರಣ್, ಕಿನಿ ಕ್ರಿಕೆಟ್ ಗ್ರೌಂಡ್‌ನ ಮಾಲೀಕ.

6 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಕಿನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಕರ್ಷಕ ಪೆವಿಲಿಯನ್, 80 ಯಾರ್ಡ್ ವಿಸ್ತೀರ್ಣದ ಮೈದಾನ, 8 ಟರ್ಫ್ ವಿಕೆಟ್ಸ್, 2 ಆಸ್ಟ್ರೋಟರ್ಫ್  ವಿಕೆಟ್ಸ್, 7 ಒಳಾಂಗಣ ನೆಟ್ಸ್, ಸ್ವಿಮ್ಮಿಂಗ್ ಪೂಲ್… ಹೀಗೆ ಎಲ್ಲಾ ಸೌಲಭ್ಯಗಳಿವೆ. ಸುಸಜ್ಜಿತ ರೂಮ್‌ಗಳ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ ಎನ್ನುತ್ತಾರೆ ಕಿರಣ್.

ಅಭ್ಯಾಸಕ್ಕೆ ಆಗಮಿಸಿದ್ದ ಭಾರತದ ಮಹಿಳಾ ತಂಡ:

ಇತ್ತೀಚೆಗೆ ಭಾರತ ಮಹಿಳಾ ಕ್ರಿಕೆಟ್ ತಂಡ ಕಿನಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ಪಂದ್ಯಗಳನ್ನಾಡಿತ್ತು. ಈ ಸಂದರ್ಭಲ್ಲಿ ತಂಡದ ಆಗಿನ ಕೋಚ್ ರಮೇಶ್ ಪೊವಾರ್, ನಾಯಕಿ ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ, ಜೆಮಿಮಾ ರಾಡ್ರಿಗ್ಸ್ ಸಹಿತ ಹಲವಾರು ಆಟಗಾರ್ತಿಯರು ಕ್ರೀಡಾಂಗಣ, ಇಲ್ಲಿನ ಸೌಲಭ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಲ್ಲದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಡಾ.ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೇರಳ ಹಾಗೂ ಹಿಮಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದ ಆತಿಥ್ಯವೂ ಈ ಮೈದಾನಕ್ಕೆ ಸಿಕ್ಕಿತ್ತು. ಕ್ರೀಡಾಂಗಣವನ್ನು ನೋಡಿ ಸಂತಸಪಟ್ಟಿದ್ದ ಕೇರಳ ಕೋಚ್ ಸೆಬಾಸ್ಟಿಯನ್, ಮಳೆಗಾಲದಲ್ಲಿ ನಮ್ಮ ತಂಡವನ್ನು ಇಲ್ಲಿಗೆ ಕರೆ ತಂದು ಅಭ್ಯಾಸ ಮಾಡಿಸುತ್ತೇವೆ ಎಂಬುದಾಗಿ ಹೇಳಿದರು ಎಂದು ಕಿರಣ್ ತಿಳಿಸಿದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯ 23 ವರ್ಷದೊಳಗಿನವರ ತಂಡ, 19 ವರ್ಷದೊಳಗಿನವರ ತಂಡಗಳು ಇಲ್ಲಿ ಅಭ್ಯಾಸ ನಡೆಸಿವೆ.

ಕ್ರೀಡಾಂಗಣದ ಹೆಸರು ಕಿನಿ. ಈ ಹೆಸರಿನ ಹಿಂದೆ ಒಂದು ಗುಟ್ಟಿದೆ. ಕಿರಣ್ ಹಾಗೂ ಅವರ ಪತ್ನಿ ನಿವೇದಿತಾ ಅವರ ಹೆಸರುಗಳ ಮೊದಲ ಎರಡು ಅಕ್ಷರಗಳನ್ನು ಸೇರಿಸಿ ಕ್ರೀಡಾಂಗಣದಲ್ಲಿ ಕಿನಿ ಎಂದು ಹೆಸರಿಡಲಾಗಿದೆ.

ಈ ಕ್ರೀಡಾಂಗಣದಲ್ಲಿ ಕಾಸ್ಮಿಕ್ ಡ್ಯಾರೆನ್ ಲೆಹ್ಮನ್ ಕ್ರಿಕೆಟ್ ಅಕಾಡೆಮಿ(ಸಿಡಿಎಲ್‌ಸಿಎ)ಯೂ ಇದ್ದು, ಯುವ ಕ್ರಿಕೆಟಿಗರಿಗೆ ತರಬೇತಿ ನೀಡಲಾಗುತ್ತಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಮತ್ತವರ ಕೋಚಿಂಗ್ ತಂಡ ಇಲ್ಲಿಗೆ ಆಗಮಿಸಿ ತರಬೇತಿ ನೀಡುತ್ತಾರೆ. ಶಾನ್ ಸೀಗ್ರೆಟ್, ಪೀಟರ್ ಮಗ್ಲೆಟನ್, ಪೀಟರ್ ಸ್ಲೀಪ್, ಆ್ಯಂಡ್ರ್ಯೂ ಜೆಸರ್ಸ್, ಯೊಹಾನ್ ಬೋಥಾ, ಮಾರ್ಕ್ ಕ್ರಾಸ್‌ಗ್ರೊವ್, ಶಾನ್ ಟೇಟ್, ಡೇನಿಯೆಲ್ ಕಿರ್ಕ್, ಸೀನ್ ಬೇಕರ್, ಆ್ಯಂಡ್ರ್ಯೂ ನಿಬ್ಲೆಟ್ ಅವರಂತಹ ಗುಣಮಟ್ಟದ, ವೃತ್ತಿಪರರಿಂದ ಕೋಚಿಂಗ್ ನೀಡಲಾಗುತ್ತದೆ.

LEAVE A REPLY

Please enter your comment!
Please enter your name here

twenty − 7 =