ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಕನ್ನಡಿಗ ರಾಹುಲ್

0
PC: Twitter

ಲಂಡನ್, ಸೆಪ್ಟೆಂಬರ್ 11: ಕರ್ನಾಟಕದ ಆಕರ್ಷಕ ಶೈಲಿಯ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದ್ದಾರೆ.
ಈ ಮೂಲಕ ಕಳೆದ ಒಂದೂವರೆ ವರ್ಷದಿಂದ ಕೈತಪ್ಪುತ್ತಿದ್ದ ಟೆಸ್ಟ್ ಶತಕವನ್ನು ಇಂಗ್ಲೆಂಡ್‌ನಲ್ಲಿ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. 2016ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 199 ರನ್ ಗಳಿಸಿದ ನಂತರ ರಾಹುಲ್ ಅವರಿಗೆ ಟೆಸ್ಟ್ ಶತಕ ಮರೀಚಿಕೆಯಾಗುತ್ತಾ ಬಂದಿತ್ತು. 199 ರನ್‌ಗಳ ಇನ್ನಿಂಗ್ಸ್‌ನ ನಂತರ ರಾಹುಲ್ 10 ಅರ್ಧಶತಕಗಳನ್ನು ಬಾರಿಸಿದ್ದರು.

PC: Twitter

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ 9 ಇನ್ನಿಂಗ್ಸ್‌ಗಳಲ್ಲಿ ಸತತ ವೈಫಲ್ಯ ಎದುರಿಸಿದ್ದ ರಾಹುಲ್, ಈ ಪ್ರವಾಸದ ಕೊನೆಯ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸಬೇಕಾದ ಒತ್ತಡದಲ್ಲಿದ್ದರು. 464 ರನ್‌ಗಳ ಬೆಟ್ಟದಂತಹ ಮೊತ್ತವನ್ನು ಬೆನ್ನಟ್ಟುವ ಒತ್ತಡ ಒಂದೆಡೆಯಾದರೆ, ಶಿಖರ್ ಧವನ್, ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಅವರನ್ನು 2 ರನ್‌ಗಳ ಒಳಗೆ ಕಳೆದುಕೊಂಡ ಒತ್ತಡ ಮತ್ತೊಂದೆಡೆ.
ಈ ಎಲ್ಲಾ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಿದ ರಾಹುಲ್, ಇಂಗ್ಲೆಂಡ್‌ನ ವಿಶ್ವಶ್ರೇಷ್ಠ ಬೌಲಿಂಗ್ ಪಡೆಯನ್ನು ಬೆಂಡೆತ್ತಿದರು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿ 85ರ ಸ್ಟ್ರೈಕ್ ರೇಟ್‌ನಲ್ಲಿ ಶತಕ ದಾಖಲಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಗಳಿಸಿದ ಒಟ್ಟಾರೆ 5ನೇ ಹಾಗೂ ಇಂಗ್ಲೆಂಡ್‌ನಲ್ಲಿ ದಾಖಲಿಸಿದ ಮೊದಲ ಶತಕ.

ವಿದೇಶಿ ನೆಲದಲ್ಲಿ 4ನೇ ಶತಕ

ಕೆ.ಎಲ್ ರಾಹುಲ್ ವಿದೇಶಿ ನೆಲಗಳಲ್ಲಿ ದಾಖಲಿಸಿದ 4ನೇ ಶತಕ ಇದಾಗಿದೆ. 2014ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ತಮ್ಮ 2ನೇ ಟೆಸ್ಟ್‌ನಲ್ಲಿ ಶತಕ ಗಳಿಸಿ ಮಿಂಚಿದ್ದ ರಾಹುಲ್, ನಂತರ 2015ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ವೃತ್ತಿಜೀವನದ 2ನೇ ಶತಕ ದಾಖಲಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 2016ರಲ್ಲಿ ಕಿಂಗ್‌ಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಟೆಸ್ಟ್ ಕರಿಯರ್‌ನ 3ನೇ ಶತಕ ಗಳಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಮೂರಂಕಿಯ ಮೊತ್ತ ಗಳಿಸುವ ಮೂಲಕ ತಮ್ಮ ಒಟ್ಟು 5 ಶತಕಗಳಲ್ಲಿ ನಾಲ್ಕನ್ನು ವಿದೇಶದಲ್ಲಿ ಗಳಿಸಿದಂತಾಗಿದೆ.

PC: BCCI/Twitter

ರಾಹುಲ್ ಗಳಿಸಿರುವ ಟೆಸ್ಟ್ ಶತಕಗಳು
ಶತಕ       ವಿರುದ್ಧ            ಸ್ಥಳ         ವರ್ಷ
110     ಆಸ್ಟ್ರೇಲಿಯಾ       ಸಿಡ್ನಿ        2014
108     ಶ್ರೀಲಂಕಾ        ಕೊಲಂಬೊ   2015
158     ವೆಸ್ಟ್ ಇಂಡೀಸ್   ಕಿಂಗ್‌ಸ್ಟನ್   2016
199     ಇಂಗ್ಲೆಂಡ್           ಚೆನ್ನೈ      2016
149   ಇಂಗ್ಲೆಂಡ್          ಲಂಡನ್    2018

 

 

LEAVE A REPLY

Please enter your comment!
Please enter your name here

15 − four =