ಈಶಾನ್ಯ ರಾಜ್ಯಗಳಿಗೆ ಕನ್ನಡಿಗರು, ಗೋವಾಗೆ ಅಮಿತ್ ವರ್ಮಾ ವಲಸೆ

0
ಬೆಂಗಳೂರು, ಸೆಪ್ಟೆಂಬರ್ 5: ಕರ್ನಾಟಕದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್ ಅಮಿತ್ ವರ್ಮಾ, 2018-19ನೇ ಸಾಲಿನಿಂದ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರ ಆಡಲಿದ್ದಾರೆ. ಅದೇ ರೀತಿ ರಾಜ್ಯದ ಮತ್ತೊಬ್ಬ ಬ್ಯಾಟ್ಸ್‌ಮನ್ ಕೆ.ಬಿ ಪವನ್ ಮತ್ತು ಆರ್.ಜೊನಾಥನ್ ನಾಗಾಲ್ಯಾಂಡ್ ತಂಡಗಳ ಪರ ಆಡಲಿದ್ದಾರೆ.
ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್ ಸಹಿತ ಹಲವು ರಾಜ್ಯಗಳಿಗೆ ಈ ಬಾರಿ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ. ಇದು ಕರ್ನಾಟಕ ತಂಡದಲ್ಲಿ ಅವಕಾಶ ವಂಚಿತರಾಗಿರುವ ರಾಜ್ಯದ ಕೆಲ ಆಟಗಾರರಿಗೆ ವರವಾಗಿ ಪರಿಣಮಿಸಿದೆ. ಇಲ್ಲಿ ಅವಕಾಶ ಸಿಗದಿರುವವರು ಈಶಾನ್ಯ ರಾಜ್ಯಗಳ ತಂಡಗಳಿಗೆ ವಲಸೆ ಹೋಗುತ್ತಿದ್ದಾರೆ.

ಅಮಿತ್ ವರ್ಮಾ, ಕೆ.ಬಿ ಪವನ್, ಆರ್.ಜೊನಾಥನ್ ಮತ್ತು ಸಿನಾನ್ ಅಬ್ದುಲ್ ಖಾದರ್ ಬೇರೆ ರಾಜ್ಯಗಳ ಪರ ಆಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆದಿದ್ದಾರೆ. ಅವರು ಯಾವ ರಾಜ್ಯಗಳ ಪರ ಆಡಲಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಚಾರ.
– ಆರ್.ಸುಧಾಕರ್ ರಾವ್, ಕೆಎಸ್‌ಸಿಎ ಹಂಗಾಮಿ ಕಾರ್ಯದರ್ಶಿ

ಕೇರಳ ಹಾಗೂ ಅಸ್ಸಾಂ ತಂಡಗಳ ಪರ ಆಡಿದ್ದ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ ಹಾಗೂ ಲೆಗ್‌ಸ್ಪಿನ್ನರ್ ಅಮಿತ್ ವರ್ಮಾ ಕಳೆದ ಬಾರಿ ಕರ್ನಾಟಕಕ್ಕೆ ವಾಪಸ್ಸಾಗಿ ರಾಜ್ಯ ತಂಡದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಕರ್ನಾಟಕ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಈ ವರ್ಷವೂ ರಾಜ್ಯ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಇಲ್ಲದಿರುವುದನ್ನು ಮನಗಂಡಿರುವ ಅಮಿತ್ ವರ್ಮಾ, ಗೋವಾ ಪರ ಆಡಲಿದ್ದಾರೆ.

ಈ ಬಾರಿಯ ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ಪರ ಆಡಲಿದ್ದು, ಅಲ್ಲಿನ ಕ್ರಿಕೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಕೆಎಸ್‌ಸಿಎನಿಂದ ಎನ್‌ಒಸಿಯನ್ನೂ ಪಡೆದಿದ್ದು, ಅದನ್ನು ಗೋವಾ ಕ್ರಿಕೆಟ್ ಸಂಸ್ಥೆಗೆ ಸಲ್ಲಿಸಿದ್ದೇನೆ.
– ಅಮಿತ್ ವರ್ಮಾ, ಕ್ರಿಕೆಟಿಗ

ಕಿರಿಯರ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನು ಪ್ರತಿನಿಸಿರುವ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿರುವ ಲೆಗ್‌ಸ್ಪಿನ್ನರ್ ಸಿನಾನ್ ಅಬ್ದುಲ್ ಖಾದರ್ ಮಿಜೋರಾಂ ತಂಡದ ಪರ ಆಡಲು ಅಲ್ಲಿನ ಕ್ರಿಕೆಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈಗಾಗಲೇ ಮಿಜೋರಾಂ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಸಿನಾನ್ ಭಾಗವಹಿಸಿದ್ದು, ಈ ಸಾಲಿನಲ್ಲಿ ಮಿಜೋರಾಂ ತಂಡದ ಪರ ಆಡಲಿದ್ದಾರೆ.
ಸಿನಾನ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅಜಿತ್ ಲಾಲ್‌ಚಂದ್ ರಜಪೂತ್ ಮತ್ತು 2008ರ 19 ವರ್ಷದೊಳಗಿನವವರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಪಂಜಾಬ್‌ನ ತರುವರ್ ಕೊಹ್ಲಿ ಕೂಡ ಮಿಜೋರಾಂ ತಂಡವನ್ನು ಪ್ರತಿನಿಸಲಿದ್ದಾರೆ.

ಮಿಜೋರಾಂ ತಂಡದ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದು, ಕೆಎಸ್‌ಸಿಎನಿಂದ ಪಡೆದಿರುವ ಎನ್‌ಒಸಿಯನ್ನು ಅಲ್ಲಿನ ಕ್ರಿಕೆಟ್ ಸಂಸ್ಥೆಗೆ ಸಲ್ಲಿಸಿದ್ದೇನೆ. ಮಿತೋರಾಂ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾತುಕತೆಯ ನಂತರ ಅಲ್ಲಿಗೆ ತೆರಳಿ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದೆ. ನನ್ನ ಬೌಲಿಂಗ್ ಕೌಶಲದ ಬಗ್ಗೆ ಅವರಿಗೆ ತೃಪ್ತಿಯಾಗಿದ್ದು, ನನ್ನ ರಣಜಿ ಕ್ರಿಕೆಟ್ ಪಯಣ ಮಿಜೋರಾಂ ತಂಡದೊಂದಿಗೆ ಆರಂಭವಾಗಲಿದೆ.
– ಸಿನಾನ್ ಅಬ್ದಲ್ ಖಾದರ್, ಕ್ರಿಕೆಟಿಗ

ರಾಜ್ಯದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕಳೆದ ವರ್ಷ ಕರ್ನಾಟಕ ತಂಡವನ್ನು ತೊರೆದು ಸೌರಾಷ್ಟ್ರ ಪರ ಆಡಿದ್ದರು. ಈ ಬಾರಿ ರಾಜ್ಯ ತಂಡಕ್ಕೆ ವಾಪಸ್ಸಾಗುವ ರಾಬಿನ್ ಅವರ ಆಸೆಗೆ ಕೆಎಸ್‌ಸಿಎ ತಣ್ಣೀರೆರಚಿದ್ದು, ಮತ್ತೆ ಅವರು ಸೌರಾಷ್ಟ್ರ ಅಥವಾ ಬೇರೆ ಯಾವುದಾದರೂ ತಂಡದ ಪರ ಆಡಲಿದ್ದಾರೆ ಎಂದು ಕೆಎಸ್‌ಸಿಎ ಮೂಲಗಳು ಸ್ಪೋರ್ಟ್ಸ್ ಸೀಮ್.ಕಾಮ್‌ಗೆ ತಿಳಿಸಿವೆ.

LEAVE A REPLY

Please enter your comment!
Please enter your name here

four × five =