ಒಂದು ಎಕರೆ ಭೂಮಿ, ಅಣ್ಣನ ತ್ಯಾಗ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ಪದಕ!

0
PC: RajyavardhanRathore/Twitter
ಬೆಂಗಳೂರು, ಸೆಪ್ಟೆಂಬರ್ 3: ಒಂದು ಎಕರೆ ಭೂಮಿ… ಬಡ ರೈತನ ಮಗ… ತಮ್ಮನಿಗಾಗಿ ಬಾಕ್ಸಿಂಗ್‌ಗೆ ಗುಡ್‌ಬೈ ಹೇಳಿದ ಅಣ್ಣ. ಜಕಾರ್ತ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದು ದೇಶಕ್ಕೆ ಕೀರ್ತಿ ತಂದ ಹರ್ಯಾಣದ ಬಾಕ್ಸರ್ ಅಮಿತ್ ಪಂಘಾಲ್ ಅವರ ಜೀವನದ ಕಥೆಯನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು.
PC: RajyavardhanRathore/Twitter
ಅಮಿತ್ ಪಂಘಾಲ್ ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು. ಅಭ್ಯಾಸಕ್ಕಾಗಿ ಗ್ಲೌಸ್ ತೆಗೆದುಕೊಳ್ಳಲೂ ದುಡ್ಡು ಹೊಂದಿಸಲು ಸಾಧ್ಯವಾಗದಿರುವಷ್ಟು ಬಡ ಕುಟುಂಬ. ಹರ್ಯಾಣದ ರೋಹ್ಟಕ್ ಜಿಲ್ಲೆಯ ಮೈನಾ ಎಂಬ ಹಳ್ಳಿ ಅಮಿತ್ ಅವರ ಹುಟ್ಟೂರು. ತಂದೆ ವಿಜೇಂದರ್ ಸಿಂಗ್ ರೈತ. ಇರುವ ಒಂದು ಎಕರೆ ಭೂಮಿಯೇ ಜೀವನಕ್ಕೆ ಆಧಾರ. ಅಲ್ಲಿ ಬೆಳೆಯುವ ರಾಗಿ ಮತ್ತು ಗೋಯಿಂದ ಬರುವ ಅಲ್ಪ ಸ್ವಲ್ಪ ಆದಾಯ ಕುಟುಂಬವನ್ನು ಸಲಹುವುದಕ್ಕೂ ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಕ್ಸಿಂಗ್ ಅನ್ನು ವೃತ್ತಿಪರ ಕ್ರೀಡೆಯನ್ನಾಗಿ ತೆಗೆದುಕೊಂಡು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಅಸಾಮಾನ್ಯವೇ ಸರಿ.
ಅಮಿತ್ ಅವರ ಅಣ್ಣ ಅಜಯ್ ಪಂಘಾಲ್ ಕೂಡ ಉದಯೋನ್ಮುಖ ಬಾಕ್ಸರ್ ಆಗಿದ್ದವರು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದ ಕಾರಣ, ತಮ್ಮನ್ನು ಕನಸನ್ನು ನನಸು ಮಾಡುವ ಉದ್ದೇಶದಿಂದ ಬಾಕ್ಸಿಂಗ್‌ಗೆ ಎಳ್ಳು ನೀರು ಬಿಟ್ಟ ಅಜಯ್ ಭಾರತೀಯ ಸೇನೆ ಸೇರಿದರು. ತಮ್ಮ ಕನಸನ್ನು ತ್ಯಾಗ ಮಾಡಿದ ಅಜಯ್, ಆರ್ಮಿಯಲ್ಲಿದ್ದುಕೊಂಡು ತಮ್ಮನ ಸಾಧನೆಗೆ ಬೆಂಗಾವಲಾಗಿ ನಿಂತರು. ಅದರ ಲವೇ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ.
PC: RajyavardhanRathore/Twitter

2011ರವರೆಗೂ ನಮ್ಮ ಅರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿತ್ತು. ಜಮೀನಿನ ಇಳುವರಿಯೂ ಉತ್ತಮವಾಗಿರಲಿಲ್ಲ. ಅಲ್ಲಿಂದ ಬರುವ ಆದಾಯ ಕುಟುಂಬಕ್ಕೂ ಸಾಕಾಗುತ್ತಿರಲಿಲ್ಲ. ನಾನೂ ಕೂಡ ಬಾಕ್ಸರ್ ಆಗಿದ್ದೆ. ಬಾಕ್ಸಿಂಗ್‌ನಲ್ಲಿ ಉನ್ನತ ಸಾಧನೆ ಮಾಡುವ ಗುರಿಯೊಂದಿಗೆ ಕೋಚ್ ಅನಿಲ್ ಧಂಕರ್ ಅವರ ಬಳಿ ತರಬೇತಿ ಪಡೆಯುತ್ತಿದ್ದೆ. ಆದರೆ ಕುಟುಂಬದ ಪರಿಸ್ಥಿತಿ ನಾನು ಬಾಕ್ಸಿಂಗ್ ತೊರೆಯುವಂತೆ ಮಾಡಿತು. ಬಾಕ್ಸಿಂಗ್ ಬಿಟ್ಟು 2011ರಲ್ಲಿ ಭಾರತೀಯ ಸೇನೆ ಸೇರಿದೆ. ಅಲ್ಲಿಂದ ನಮ್ಮ ಸ್ಥಿತಿ ಸ್ವಲ್ಪ ಸುಧಾರಿಸಿತು. ನಾನು ಬಾಕ್ಸಿಂಗ್ ಬಿಟ್ಟರೂ ಅಮಿತ್ ತನ್ನ ಕನಸನ್ನು ಬಿಟ್ಟುಕೊಡುವುದು ನನಗೆ ಇಷ್ಟವಿರಲಿಲ್ಲ. ಏಕೆಂದರೆ ದೊಡ್ಡ ಮಟ್ಟದ ಸಾಧನೆ ಮಾಡುವ ಸಾಮರ್ಥ್ಯ ಆತನಲ್ಲಿದೆ ಎಂಬುದು ನನಗೆ ತಿಳಿದಿತ್ತು.
– ಅಜಯ್ ಪಂಘಾಲ್, ಅಮಿತ್ ಪಂಘಾಲ್ ಅವರ ಸಹೋದರ.

ತನಗಾಗಿ ತನ್ನ ಕನಸನ್ನೇ ಬಿಟ್ಟುಕೊಟ್ಟ ಅಣ್ಣನಿಗೆ ಅಮಿತ್ ನಿರಾಸೆಯನ್ನುಂಟು ಮಾಡಲಿಲ್ಲ. ಅಪಾರ ಬದ್ಧತೆಯೊಂದಿಗೆ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡರು. ಆದರೆ ಕೈಯಲ್ಲಿ ದುಡ್ಡಿರದಿದ್ದ ಕಾರಣ ಆರು ತಿಂಗಳ ಕಾಲ ಬರಿಗೈಯಲ್ಲೇ ತರಬೇತಿ ನಡೆಸುವಂತಾಯಿತು. ಇದ್ದ ಒಂದು ಬಾಕ್ಸಿಂಗ್ ಗ್ಲೌಸ್ ಹಾಳಾಗಿದಿದ್ದರಿಂದ ಹೊಸದನ್ನು ಖರೀದಿಸಲೂ ಹಣವಿರಲಿಲ್ಲ.
PC: RajyavardhanRathore/Twitter

ಆರು ತಿಂಗಳುಗಳ ಕಾಲ ಗ್ಲೌಸ್ ಇಲ್ಲದೆ ಅಮಿತ್ ಅಭ್ಯಾಸ ನಡೆಸಿದ್ದ. ಹೊಸ ಗ್ಲೌಸ್ ಖರೀದಿಸಲು ಕನಿಷ್ಠ 3 ಸಾವಿರ ರೂಪಾಯಿ ಬೇಕು. ಅಷ್ಟು ಹಣ ನನ್ನಲ್ಲಾಗಲೀ, ಅವನಲ್ಲಾಗಲೀ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಆತ ಬಿಟ್ಟು ಕೊಡಲಿಲ್ಲ. ದೃಢವಾಗಿ ಬದ್ಧತೆಯೊಂದಿಗೆ ಬರಿಗೈಯಲ್ಲೇ ತರಬೇತಿ ಪಡೆಯಲಾರಂಭಿಸಿದ.
– ಅಜಯ್ ಪಂಘಾಲ್, ಅಮಿತ್ ಪಂಘಾಲ್ ಅವರ ಸಹೋದರ.

2006ರಲ್ಲಿ ಬಾಕ್ಸಿಂಗ್ ಆರಂಭಿಸಿ ಇಷ್ಟೆಲ್ಲಾ ಕಷ್ಟ ಪಟ್ಟಿದ್ದ ಅಮಿತ್ ಅವರ ಪರಿಶ್ರಮಕ್ಕೆ ಈಗ ದೊಡ್ಡ ಯಶಸ್ಸು ಸಿಕ್ಕಿದೆ. ಅಣ್ಣನಂತೆ ಭಾರತೀಯ ಸೇನೆಯಲ್ಲಿ ಕೆಲಸವೂ ಸಿಕ್ಕಿದೆ. ಇದೀಗ ತಮ್ಮ ಪುತ್ರ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಕನಸು ತಂದೆ ವಿಜೇಂದರ್ ಸಿಂಗ್ ಅವರದ್ದು.

ಸಾಧನೆಯ ಶಿಖರವೇರುವ ಆತನ ಹಾದಿಯಲ್ಲಿ ಏಷ್ಯನ್ ಗೇಮ್ಸ್ ಪದಕ ಕೇವಲ ಮೆಟ್ಟಿಲು ಮಾತ್ರ. ಒಲಿಂಪಿಕ್ಸ್ ಪದಕಕ್ಕಾಗಿ ನಾವೆಲ್ಲಾ ಆತನಿಗಾಗಿ ತ್ಯಾಗ ಮಾಡಿದ್ದೇವೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಕೇವಲ ಆತನ ಕನಸಷ್ಟೇ ಅಲ್ಲ, ನಮ್ಮ ಕನಸು ಕೂಡ.
– ವಿಜೇಂದರ್ ಸಿಂಗ್, ಅಮಿತ್ ಪಂಘಾಲ್ ತಂದೆ.

LEAVE A REPLY

Please enter your comment!
Please enter your name here

five × one =