ಒಂದೇ ಓವರ್‌ನಲ್ಲಿ 3 ಸಿಕ್ಸರ್: ಭಾರತ ಪರ ಕುಡ್ಲದ ಕುವರಿಯ ದಾಖಲೆ

0
PC: BCCI Women/Twitter

ಕಾಟುನಾಯಕೆ(ಶ್ರೀಲಂಕಾ), ಸೆಪ್ಟೆಂಬರ್ 19: ಭಾರತ ಮಹಿಳಾ ಕ್ರಿಕೆಟ್ ತಂಡದ ಪರ ಆಡುತ್ತಿರುವ ಮಂಗಳೂರು ಮೂಲದ ಆಟಗಾರ್ತಿ ಜೆಮಿಮಾ ರಾಡ್ರಿಗ್ಸ್, ಅಂತರಾಷ್ಟ್ರೀಯ ಕ್ರಿಕೆಟ್‌ನ ಒಂದೇ ಓವರ್‌ನಲ್ಲಿ 3 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.
ಆತಿಥೇಯ ಶ್ರೀಲಂಕಾ ವಿರುದ್ಧ ಬುಧವಾರ ನಡೆದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜೆಮಿಮಾ ಈ ದಾಖಲೆ ಬರೆದರು. ಶ್ರೀಲಂಕಾದ ಮಧ್ಯಮ ವೇಗಿ ನಿಲಾಕ್ಷಿ ಡಿ ಸಿಲ್ವಾ ಎಸೆದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಜೆಮಿಮಾ ರಾಡ್ರಿಗ್ಸ್ ಸತತ 3 ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ಭಾರತ ತಂಡ 13 ರನ್‌ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಂಪಾದಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಜೆಮಿಮಾ 15 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ಗಳ ಸಹಿತ 36 ರನ್ ಸಿಡಿಸಿದರೆ, ವಿಕೆಟ್ ಕೀಪರ್ ತಾನಿಯಾ ಭಾಟಿಯಾ 35 ಎಸೆತಗಳಲ್ಲಿ 46 ರನ್, ಅನುಜಾ ಪಾಟೀಲ್ 29 ಎಸೆತಗಳಲ್ಲಿ 36 ರನ್ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ 15 ಎಸೆತಗಳಲ್ಲಿ ಅಜೇಯ 21 ರನ್ ಸಿಡಿಸಿದರು.
ನಂತರ ಗುರಿ ಬೆನ್ನಟ್ಟಿದ ಶ್ರೀಲಂಕಾ ವನಿತೆಯರು 19.3 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡರು.

Brief score
India women: 168/8 in 20 overs (Jemimah Rodrigues 36, Tania Bhatia 46, Anuja Patil 36, Veda Krishnamurthy 21 not out; Prabodhani 2/18, Chamari Atapattu 2/23).
Sri Lanka women: 155 all out in 19.3 overs (Yasoda Mendis 32, Eshani Kaushalya 45; Poonam Yadav 4/26, Radha Yadav 2/15, Harmapreet Kaur 2/19).

LEAVE A REPLY

Please enter your comment!
Please enter your name here

fourteen − 7 =