ಕನ್ನಡಿಗ ಕರುಣ್ ನಾಯರ್’ಗೆ ಟೀಮ್ ಇಂಡಿಯಾ ಡೋರ್ ಕ್ಲೋಸ್?

0
PC: Karun Nair/Twitter

ಬೆಂಗಳೂರು, ಜುಲೈ21: ಕರ್ನಾಟಕದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರಿಗೆ ಮತ್ತೆ ಭಾರತ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಮತ್ತಷ್ಟು ಕ್ಷೀಣಿಸಿವೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ, ಟಿ20 ಸರಣಿ ಹಾಗೂ ಏಕದಿನ ಸರಣಿಗೆ ಭಾರತ ತಂಡಗಳನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಆಟಗಾರರಾದ ಕೆ.ಎಲ್ ರಾಹುಲ್, ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದಾರೆ. ಕೆ.ಎಲ್ ರಾಹುಲ್ ಟೆಸ್ಟ್, ಏಕದಿನ ಮತ್ತು ಟಿ20 ಹೀಗೆ ಮೂರೂ ತಂಡಗಳಲ್ಲಿ ಸ್ಥಾನ ಪಡೆದರೆ, ಮನೀಶ್ ಪಾಂಡೆ ಏಕದಿನ ಮತ್ತು ಟಿ20, ಮಯಾಂಕ್ ಅಗರ್ವಾಲ್ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್’ಮನ್ ಕರುಣ್ ನಾಯರ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಿರುವುದರಿಂದ ಕರುಣ್ ನಾಯರ್ ಅವರ ಟೀಮ್ ಇಂಡಿಯಾ ಕರಿಯರ್ ಬಹುತೇಕ ಅಂತ್ಯಗೊಂಡಂತಾಗಿದೆ.

28 ವರ್ಷದ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ ಭಾರತದ ಕೇವಲ 2ನೇ ಆಟಗಾರನೆಂಬ ದಾಖಲೆ ಹೊಂದಿದ್ದಾರೆ. 2016ರ ಡಿಸೆಂಬರ್’ನಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಅಮೋಘ ತ್ರಿಶತಕ ಬಾರಿಸಿದ್ದರು. ಆ ತ್ರಿಶತಕದ ನಂತರ ಕರುಣ್ ನಾಯರ್ ಅವರಿಗೆ ಭಾರತ ಪರ ಆಡಲು ಸಿಕ್ಕಿದ್ದು ಬೆರಳೆಣಿಕೆಯ ಅವಕಾಶಗಳಷ್ಟೇ. ಐಪಿಎಲ್-12 ಟೂರ್ನಿಯಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕರುಣ್ ನಾಯರ್ ಅವರನ್ನು ಕಡೆಗಣಿಸಲಾಗಿತ್ತು.

ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್’ಮನ್ ಕರುಣ್ ನಾಯರ್ 2014-15ನೇ ಸಾಲಿನ ರಣಜಿ ಫೈನಲ್ ಪಂದ್ಯದಲ್ಲೂ ತಮಿಳುನಾಡು ವಿರುದ್ಧ ಭರ್ಜರಿ ಶತಕ ಬಾರಿಸಿ ಕರ್ನಾಟಕ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ ಪ್ರತಿಭಾನ್ವಿತ ಕನ್ನಡಿಗನನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣಿಸುತ್ತಲೇ ಬಂದಿದೆ.

LEAVE A REPLY

Please enter your comment!
Please enter your name here

eighteen − thirteen =