ಕರ್ನಾಟಕದ ಮತ್ತೊಂದು ವಿಕೆಟ್ ಪತನ, ನಾಗಾಲ್ಯಾಂಡ್‌ಗೆ ಅಬ್ರಾರ್ ಕಾಜಿ

0

ಬೆಂಗಳೂರು, ಸೆಪ್ಟೆಂಬರ್ 17: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಬೇರೆ ರಾಜ್ಯಗಳಿಗೆ ಕರ್ನಾಟಕದ ಕ್ರಿಕೆಟಿಗರ ವಲಸೆ ಮುಂದುವರಿದಿದೆ. ಕೆ.ಬಿ ಪವನ್, ಆರ್.ಜೊನಾಥನ್, ಸಿನಾನ್ ಅಬ್ದುಲ್ ಖಾದರ್, ಅಮಿತ್ ವರ್ಮಾ ಅವರ ಬೆನ್ನಲ್ಲೇ ಎಡಗೈ ಸ್ಪಿನ್ನರ್ ಅಬ್ರಾರ್ ಕಾಜಿ ಕೂಡ ಕರ್ನಾಟಕವನ್ನು ತೊರೆದು ಬೇರೆ ರಾಜ್ಯದ ಪರ ಆಡಲಿದ್ದಾರೆ.
ಈ ಸಾಲಿನಲ್ಲಿ ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ಪರ ಅಬ್ರಾರ್ ಕಾಜಿ ಆಡಲಿದ್ದಾರೆ. ರಾಜ್ಯದ ಕೆ.ಬಿ ಪವನ್ ಮತ್ತು ಕೆಎಸ್‌ಸಿಎ ಲೀಗ್ ಹಾಗೂ ಕೆಪಿಎಲ್ ಟೂರ್ನಿಗಳಲ್ಲಿ ಆಡುತ್ತಿರುವ ನಾಗಾಲ್ಯಾಂಡ್ ಮೂಲದ ಆರ್.ಜೊನಾಥನ್ ನಾಗಾಲ್ಯಾಂಡ್ ಪರ ಆಡಲಿದ್ದಾರೆ ಎಂದು ಸ್ಪೋರ್ಟ್ಸ್ ಸೀಮ್.ಕಾಮ್ ಈ ಹಿಂದೆಯೇ ವರದಿ ಮಾಡಿತ್ತು. ಒಂದು ತಂಡದಲ್ಲಿ ಮೂವರು ಹೊರ ರಾಜ್ಯದ ಆಟಗಾರರು ಆಡಬಹುದಾದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ತಂಡದ 3ನೇ ಆಟಗಾರನಾಗಿ ಅಬ್ರಾರ್ ಕಾಜಿ ಒಪ್ಪಂದ ಮಾಡಿಕೊಂಡಿದ್ದಾರೆ.
ತಮ್ಮ ಹೊಸ ಪಯಣದ ಕುರಿತು ಸ್ಪೋರ್ಟ್ಸ್ ಸೀಮ್.ಕಾಮ್‌ನೊಂದಿಗೆ ಮಾತನಾಡಿದ ಅಬ್ರಾರ್ ಕಾಜಿ, ”ಕರ್ನಾಟಕ ತಂಡ ಪ್ರತಿಭಾವಂತ ಆಟಗಾರರಿಂದ ತುಂಬಿದೆ. ಹೀಗಾಗಿ ಕರ್ನಾಟಕದ ತಂಡದಲ್ಲಿ ಆಡುವ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಬೇರೆ ತಂಡದ ಪರ ಆಡುವ ನಿರ್ಧಾರಕ್ಕೆ ಬಂದಿದ್ದೇನೆ. ಇಲ್ಲಿ ಹೆಚ್ಚು ಹೆಚ್ಚು ಪಂದ್ಯಗಳನ್ನಾಡುವ ಅವಕಾಶಗಳು ಸಿಗಲಿವೆ. ಇದು ಸಂಪೂರ್ಣ ಹೊಸ ಅನುಭವ, ಹೊಸ ಜನ, ಹೊಸ ಸ್ಥಳ. ಆರಾಮದಾಯಕ ವಲಯದಿಂದ ಹೊರ ಬಂದಿರುವುದರಿಂದ ಹೊಸತನ್ನು ಕಲಿಯುವ ಅವಕಾಶ ನನ್ನದಾಗಲಿದೆ,” ಎಂದರು.
ಕರ್ನಾಟಕ ಪರ 9 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ 28 ವರ್ಷದ ಅಬ್ರಾರ್ ಕಾಜಿ ಒಂದು ಶತಕ ಸಹಿತ 322 ರನ್ ಹಾಗೂ 14 ವಿಕೆಟ್ ಗಳಿಸಿದ್ದಾರೆ. 20 ಲಿಸ್ಟ್ ಎ ಪಂದ್ಯಗಳನ್ನಾಡಿರುವ ಈ ಆಲ್ರೌಂಡರ್ 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 4 ಟಿ20 ಪಂದ್ಯಗಳಿಂದ 2 ವಿಕೆಟ್ ಕಬಳಿಸಿದ್ದಾರೆ.
ಆಂಧ್ರ ಪ್ರದೇಶ ಹಾಗೂ ತಮಿಳುನಾಡು ತಂಡಗಳ ಪರ ಆಡಿರುವ 60 ವರ್ಷದ ಆಫ್ ಸ್ಪಿನ್ನರ್ ಕನ್ವಲ್ಜಿತ್ ಸಿಂಗ್ ನಾಗಾಲ್ಯಾಂಡ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆರ್.ಜೊನಾಥನ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

eighteen + eight =