ಕಿಂಗ್ ಕೊಹ್ಲಿ 100, 1000.! ಸಚಿನ್, ಸೆಹ್ವಾಗ್ ದಾಖಲೆ ಪುಡಿ

0
PC: BCCI

ರಾಜ್‌ಕೋಟ್, ಅಕ್ಟೋಬರ್ 5: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ ಶುಕ್ರವಾರ ಡಬಲ್ ಧಮಾಕ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ 24ನೇ ಟೆಸ್ಟ್ ಶತಕದೊಂದಿಗೆ ಅಬ್ಬರಿಸಿದ್ದಾರೆ.
ಅಲ್ಲದೆ ಸತತ 3ನೇ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾವಿರ ರನ್ ಕಲೆ ಹಾಕಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.

PC: BCCI

ವೆಸ್ಟ್ ಇಂಡೀಸ್ ವಿರುದ್ಧ ನಡಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ 2ನೇ ದಿನ ವಿರಾಟ್ ಕೊಹ್ಲಿ, ವೃತ್ತಿಜೀವನದ 24ನೇ ಟೆಸ್ಟ್ ಶತಕ ಬಾರಿಸಿದರು. ಇದು ನಾಯಕನಾಗಿ ಕೊಹ್ಲಿ ಗಳಿಸಿದ 17ನೇ ಟೆಸ್ಟ್ ಶತಕವಾಗಿದೆ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ 2ನೇ ಹಾಗೂ ಈ ವರ್ಷ ಗಳಿಸಿದ 4ನೇ ಟೆಸ್ಟ್ ಶತಕ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಂದು ಟೆಸ್ಟ್ ಶತಕ ಬಾರಿಸಿದ್ದ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿ ಎರಡು ಟೆಸ್ಟ್ ಶತಕಗಳೊಂದಿಗೆ ಮಿಂಚಿದ್ದರು.
24ನೇ ಟೆಸ್ಟ್ ಶತಕದೊಂದಿಗೆ ಕೊಹ್ಲಿ ಭಾರತ ಪರ ಗರಿಷ್ಠ ಶತಕ ಗಳಿಸಿದವರ ಸಾಲಿನಲ್ಲಿ ವೀರೇಂದ್ರ ಸೆಹ್ವಾಗ್(23) ಅವರನ್ನು ಮೀರಿ ನಿಂತಿದ್ದಾರೆ. ಅಲ್ಲದೆ ಅತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 24 ಟೆಸ್ಟ್ ಶತಕ ಗಳಿಸಿದವರ ಸಾಲಿನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 123 ಇನ್ನಿಂಗ್ಸ್‌ಗಳಲ್ಲಿ 24 ಶತಕ ಗಳಿಸಿದರೆ, ಸಚಿನ್ ತೆಂಡೂಲ್ಕರ್(125), ಸುನಿಲ್ ಗವಾಸ್ಕರ್(128) ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್(132) ನಂತರದ ಸ್ಥಾನಗಳಲ್ಲಿದ್ದಾರೆ. ಆಸೀಸ್‌ನ ದಿಗ್ಗಜ ಸರ್ ಡೊನಾಲ್ಡ್ ಬ್ರಾಡ್ಮನ್ 66 ಇನ್ನಿಂಗ್ಸ್‌ಗಳಲ್ಲಿ 24 ಟೆಸ್ಟ್ ಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here

one × one =