ಕ್ರಿಕೆಟ್ ಕಿಚ್ಚಿನ ಕಿಚ್ಚನಿಗೆ ಜನ್ಮದಿನದ ಸಂಭ್ರಮ… ಹ್ಯಾಪಿ ಬರ್ತ್ ಡೇ ಸುದೀಪ್

0

ಬೆಂಗಳೂರು, ಸೆಪ್ಬೆಂಬರ್ 2: ಕಿಚ್ಚ ಸುದೀಪ್. ಈ ಹೆಸರಲ್ಲೇ ಅದೇನೋ ಕಿಚ್ಚಿದೆ. ಅದು ಕರ್ನಾಟಕದ ಕಿಚ್ಚು ಮಾತ್ರವಲ್ಲ. ಜಗದುದ್ದಗಲದಲ್ಲಿ ಕರ್ನಾಟಕದ ಹೆಸರು ರಾರಾಜಿಸುವಂತೆ ಮಾಡಿದ ಕಿಚ್ಚು. ಆ ಕಿಚ್ಚಿಗೆ ಇಂದು 45ನೇ ಹುಟ್ಟುಹಬ್ಬದ ಸಂಭ್ರಮ. ಜನ್ಮದಿನದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಅವರ ಕ್ರಿಕೆಟ್ ಕಿಚ್ಚು ಕನ್ನಡ ಚಲನಚಿತ್ರ ಕಪ್ ಟೂರ್ನಿಯ ಮೂಲಕ ದೇಶದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ.

KCC Stars with Rebel Star Ambarish

ಭಾರತೀಯ ಚಿತ್ರರಂಗದ ಮಾಣಿಕ್ಯ, ಅಭಿಮಾನಿಗಳ ನೆಚ್ಚಿನ ಅಭಿನಯ ಚಕ್ರವರ್ತಿ ಸುದೀಪ್ ಈಗ ನಟನಾಗಿ ಮಾತ್ರ ಉಳಿದಿಲ್ಲ. ಅವರೊಬ್ಬ ಅಪ್ಪಟ ಕ್ರಿಕೆಟ್ ಪ್ರೇಮಿ. ಯೌವ್ವನದಲ್ಲಿ ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಂಡರೂ ನನಸಾಗಲಿಲ್ಲ. ನಂತರ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಕಿಚ್ಚನೊಳಗಿನ ಕ್ರಿಕೆಟ್ ಕಿಚ್ಚು ಆರಿರಲಿಲ್ಲ. ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್), ಕರ್ನಾಟಕ ಪ್ರೀಮಿಯರ್ ಲೀಗ್(ಕೆಸಿಸಿ) ಮೂಲಕ ಉನ್ನತ ಮಟ್ಟದ, ಗುಣಮಟ್ಟದ ಕ್ರಿಕೆಟ್ ಆಡುವ ಕನಸನ್ನು ನನಸಾಗಿಸಿಕೊಂಡರೂ ಸುದೀಪ್ ಅಷ್ಟಕ್ಕೇ ತೃಪ್ತರಾಗಲಿಲ್ಲ.
ಇಡೀ ಚಿತ್ರರಂಗವನ್ನು ಸೇರಿಸಿ ದೊಡ್ಡ ಮಟ್ಟದ ಕ್ರಿಕೆಟ್ ಟೂರ್ನಿಯೊಂದನ್ನು ಆರಂಭಿಸಬೇಕೆಂದು ಯೋಚಿಸುತ್ತಿರುವಾಗಲೇ ಹೊಳೆದದ್ದು ಕನ್ನಡ ಚಲನಚಿತ್ರ ಕಪ್(ಕೆಸಿಸಿ). ಹೌದು. ಇಂದು ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ಕರ್ನಾಟಕದತ್ತ ನೋಡುವಂತೆ ಮಾಡಿರುವ ಕೆಸಿಸಿ ಟೂರ್ನಿ ಕಿಚ್ಚ ಸುದೀಪ್ ಅವರ ಕನಸಿನ ಕೂಸು.

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಯಶ್, ಚಿತ್ರರಂಗದ ಕಲಾವಿದರು, ತಂತ್ರಜ್ಞರು, ಕರ್ನಾಟಕದ ವೃತ್ತಿಪರ ಕ್ರಿಕೆಟ್ ಆಟಗಾರರು, ಪತ್ರಕರ್ತರನ್ನು ಒಂದೆಡೆ ಸೇರಿಸಿ ಮೊದಲ ಆವೃತ್ತಿಯ ಕೆಸಿಸಿ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿರುವ ಸುದೀಪ್, ಇದೀಗ ಸೀಸನ್-2 ಕೆಸಿಸಿ ಟೂರ್ನಿಯನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲು ಸಜ್ಜಾಗಿದ್ದಾರೆ.


ಏನೇ ಮಾಡಿದರೂ ಆ ಪ್ರಯತ್ನ ವಿಭಿನ್ನವಾಗಿರಬೇಕು ಎಂಬ ತತ್ವವನ್ನು ನಂಬಿರುವ ಕಿಚ್ಚ ಸುದೀಪ್ ಭಾರತೀಯ ಚಿತ್ರರಂಗ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಕೆಸಿಸಿ-2 ಟೂರ್ನಿಯನ್ನು ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಹೊಡಿ ಬಡಿಯ ಆಟದಿಂದ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ದಿಗ್ಗಜರನ್ನು ಈ ಬಾರಿಯ ಟೂರ್ನಿಗೆ ಕರೆ ತಂದಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ದಿಗ್ಗಜ ಆ್ಯಡಂ ಗಿಲ್‌ಕ್ರಿಸ್ಟ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್, ಇಂಗ್ಲೆಂಡ್‌ನ ಓವೈಸ್ ಶಾ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಲ್ಯಾನ್ಸ್ ಕ್ಲೂಸ್ನೆರ್ ಅವರಂತಹ ಘಟಾನುಘಟಿಗಳು ಕಿಚ್ಚನ ಕರೆಗೆ ಓಗೊಟ್ಟು ಕೆಸಿಸಿ-2 ಟೂರ್ನಿಯಲ್ಲಿ ಆಡಲಿದ್ದಾರೆ.

KCC International stars with Kichcha Sudeep

ಕದಂಬ ಲಯನ್ಸ್ ತಂಡದಲ್ಲಿ ಸುದೀಪ್ ಅವರೊಂದಿಗೆ ಸೆಹ್ವಾಗ್, ವಿಜಯನಗರ ಪೇಟ್ರಿಯೆಟ್ಸ್ ತಂಡದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ಆ್ಯಡಂ ಗಿಲ್‌ಕ್ರಿಸ್ಟ್, ಗಂಗಾ ವಾರಿಯರ್ಸ್ ತಂಡದಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಲ್ಯಾನ್ಸ್ ಕ್ಲೂಸ್ನೆರ್, ಹೊಯ್ಸಳ ಈಗಲ್ಸ್ ತಂಡದಲ್ಲಿ ಉಪೇಂದ್ರ ಅವರೊಂದಿಗೆ ಹರ್ಷಲ್ ಗಿಬ್ಸ್, ರಾಷ್ಟ್ರಕೂಟ ಪ್ಯಾಂಥ್ಸ್ ತಂಡದಲ್ಲಿ ಯಶ್ ಅವರೊಂದಿಗೆ ಓವೈಸ್ ಶಾ ಮತ್ತು ಒಡೆಯರ್ ಚಾರ್ಜರ್ಸ್ ತಂಡದಲ್ಲಿ ಗಣೇಶ್ ಅವರೊಂದಿಗೆ ತಿಲಕರತ್ನೆ ದಿಲ್ಶಾನ್ ಆಡಲಿದ್ದಾರೆ.


ರಾಜ್ಯ ರಣಜಿ ತಂಡದ ಆಟಗಾರ ಸಿ.ಎಂ ಗೌತಮ್, ರೋನಿತ್ ಮೋರೆ, ಕೆ.ಸಿ ಕಾರಿಯಪ್ಪ, ಜೆ.ಸುಚಿತ್, ನಿಹಾಲ್ ಉಳ್ಳಾಲ್, ವಿ.ಕೌಶಿಕ್, ಬಿ.ಆರ್ ಶರತ್, ಸ್ಟಾಲಿನ್ ಹೂವರ್, ರಿತೇಶ್ ಭಟ್ಕಳ್ ಸಹಿತ ಪ್ರತಿ ತಂಡದಲ್ಲೂ ಕರ್ನಾಟಕದ ವೃತ್ತಿಪರ ಕ್ರಿಕೆಟಿಗರಿದ್ದಾರೆ. ಕೆಸಿಸಿ-2 ಟೂರ್ನಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 8 ಮತ್ತು 9ರಂದು ನಡೆಯಲಿದೆ.

ಸ್ಯಾಂಡಲ್‌ವುಡ್‌ನ ಘಟಾನುಘಟಿಗಳು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೂಳೆಬ್ಬಿಸಿದ ದಿಗ್ಗಜರು, ಕರ್ನಾಟಕದ ಕ್ರಿಕೆಟ್ ತಾರೆಗಳನ್ನು ಒಟ್ಟುಗೂಡಿಸಿ ಇಂತಹ ಒಂದು ದೊಡ್ಡ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿರುವ ಸುದೀಪ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

 

 

 

LEAVE A REPLY

Please enter your comment!
Please enter your name here

six + fifteen =