ಟೀಮ್ ಇಂಡಿಯಾಗೆ ಆಯ್ಕೆಯಾದ ಕಾಂಪೌಂಡರ್ ಮಗ, ಈತ ದ್ರಾವಿಡ್ ಸ್ಕೂಲ್ ಆಫ್ ಕ್ರಿಕೆಟ್‌ ಸ್ಟೂಡೆಂಟ್!

0
PC: Twitter

ಬೆಂಗಳೂರು, ಸೆಪ್ಟೆಂಬರ್ 2: ಜೈಪುರದ ಟೊಂಕ್ ಎಂಬ ನಗರದ ಕ್ಲಿನಿಕ್ ಒಂದರಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪುತ್ರ ಇಂದು ಭಾರತ ಕ್ರಿಕೆಟ್ ತಂಡದ ಆಟಗಾರ. ಇದು ಸೆಪ್ಟೆಂಬರ್ 15ರಿಂದ ಯುಎಇನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ರಾಜಸ್ಥಾನದ 20 ವರ್ಷದ ಯುವ ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಅವರ ಯಶೋಗಾಥೆ.

PC: BCCI/Twitter

2016ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಭಾರತ ತಂಡದ ಆಟಗಾರ ಖಲೀಲ್ ಅಹ್ಮದ್, ಇನ್ನೊಂದು ಹೆಜ್ಜೆ ಮೇಲೇರಿದ್ದಾರೆ. ಇದೇ ಮೊದಲ ಬಾರಿ ಖಲೀಲ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ದಿಗ್ಗಜ ಎಡಗೈ ವೇಗಿ ಜಹೀರ್ ಖಾನ್ ಅವರ ನಿವೃತ್ತಿಯ ನಂತರ ಭಾರತ ತಂಡ ಎಡಗೈ ವೇಗದ ಬೌಲರ್ ಕೊರತೆ ಎದುರಿಸುತ್ತಿದೆ. ಹೀಗಾಗಿ ಬಿಸಿಸಿಐನ ಆಯ್ಕೆ ಸಮಿತಿ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿರುವ ಯುವ ಎಡಗೈ ವೇಗಿಗಳ ಮೇಲೆ ಕಣ್ಣಿಟ್ಟಿತ್ತು. ವಿವಿಧ ವಯೋಮಿತಿಯ ಕ್ರಿಕೆಟ್‌ನಲ್ಲಿ ಹಾಗೂ ದೇಶೀಯ ಟೂರ್ನಿಗಳಲ್ಲಿ ತಮ್ಮ ಉತ್ತಮ ವೇಗದ ದಾಳಿಯಿಂದ ಮಿಂಚಿರುವ ಖಲೀಲ್ ಅಹ್ಮದ್ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

’’2019ರ ವಿಶ್ವಕಪ್ ತಂಡಗಲ್ಲಿ ಎರಡರಿಂದ 3 ಸ್ಥಾನಗಳು ಇನ್ನಷ್ಟೇ ಅಂತಿಮವಾಗಬೇಕಿದೆ. ಆ ಸ್ಥಾನಗಳನ್ನು ತುಂಬುವ ಪ್ರಯತ್ನದಲ್ಲಿದ್ದು, ಮುಂಬರುವ 24 ಪಂದ್ಯಗಳಲ್ಲಿ ಅದು ಅಂತಿಮವಾಗಲಿದೆ. ಆ 3 ಸ್ಥಾನಗಳಲ್ಲಿ ಒಂದು ವೇಗದ ಬೌಲರ್‌ನ ಸ್ಥಾನವೂ ಖಾಲಿಯಿದ್ದು, ನಾವು ಎಡಗೈ ವೇಗಿಯ ಆಯ್ಕೆಯನ್ನೂ ಎದುರು ನೋಡುತ್ತಿದ್ದೇವೆ’’.  

ಎಂ.ಎಸ್.ಕೆ ಪ್ರಸಾದ್, ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ

19 ವರ್ಷದೊಳಗಿನವರ ಭಾರತ ತಂಡದಲ್ಲಿ ಹಾಗೂ ಭಾರತ ಎ ತಂಡಗಳಲ್ಲಿ ಕಾಣಿಸಿಕೊಂಡಿರುವ ಖಲೀಲ್ ಅಹ್ಮದ್, ಈ ತಂಡಗಳ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ್ದಾರೆ. ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುತ್ತಿದ್ದ ಖಲೀಲ್, ನಂತರ ರಾಜಸ್ಥಾನದ 16 ಮತ್ತು 19 ವರ್ಷದೊಳಗಿನವರ ತಂಡದಲ್ಲಿ ಕಾಣಿಸಿಕೊಂಡಿದ್ದರು. ನಂತರ ಭಾರತದ 19 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾಗಿದ್ದರು. ಯುವ ಎಡಗೈ ವೇಗದ ಬೌಲರ್‌ಗೆ ರಾಹುಲ್ ದ್ರಾವಿಡ್ ಮತ್ತು ಜಹೀರ್ ಖಾನ್ ರೋಲ್ ಮಾಡೆಲ್‌ಗಳು.

ನಾನೀಗ ಅಕ್ಷರಶಃ ನಡುಗುತ್ತಿದ್ದೇನೆ. ಭಾರತ ತಂಡದ ಭಾಗವಾಗಿದ್ದೇನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಕನಸು ನನಸಾಗಿದೆ. ನಾನು ಅತ್ಯಂತ ನರ್ವಸ್ ಕ್ರಿಕೆಟರ್ ಆಗಿದ್ದೆ. ನನ್ನನ್ನು ಆತ್ಮವಿಶ್ವಾಸದ ಬೌಲರ್ ಆಗಿ ರೂಪಿಸಿದ ರಾಹುಲ್ ದ್ರಾವಿಡ್ ಸರ್ ಅವರಿಗೆ ಕೃತಜ್ಞತೆಗಳು. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು.

– ಖಲೀಲ್ ಅಹ್ಮದ್, ಟೀಮ್ ಇಂಡಿಯಾದ ಎಡಗೈ ವೇಗದ ಬೌಲರ್

2018ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಖಲೀಲ್ ಅಹ್ಮದ್ 10 ಪಂದ್ಯಗಳಿಂದ 6.77ರ ಎಕಾನಮಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಆ ಟೂರ್ನಿಯಲ್ಲಿ ಗಂಟೆಗೆ 148 ಕಿ.ಮೀ ವೇಗದಲ್ಲಿ ಎಸೆತವೊಂದನ್ನು ಎಸೆದಿದ್ದರು. ಕಳೆದ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 3 ಕೋಟಿ ರೂ.ಗಳಿಗೆ ಖಲೀಲ್ ಅಹ್ಮದ್ ಅವರನ್ನು ಖರೀದಿಸಿತ್ತು. ಭಾರತ ಎ ತಂಡದ ಪರ 9 ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿರುವ ಖಲೀಲ್ ಅಹ್ಮದ್, ಏಷ್ಯಾ ಕಪ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಎದುರು ನೋಡುತ್ತಿದ್ದಾರೆ.

LEAVE A REPLY

Please enter your comment!
Please enter your name here

five × four =