ತ್ರಿಶತಕಕ್ಕೂ ಬೆಲೆ ಇಲ್ಲವೇ? ಕನ್ನಡಿಗ ಕರುಣ್‌ಗೆ ಇದೆಂಥಾ ಅನ್ಯಾಯ?

0
PC: Karun Nair/Twitter

ಬೆಂಗಳೂರು, ಸೆಪ್ಟೆಂಬರ್ 30: ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಖ್ಯಾತಿಯ ಕರುಣ್ ನಾಯರ್‌ಗೆ ಟೀಮ್ ಇಂಡಿಯಾದಲ್ಲಿ ಘೋರ ಅನ್ಯಾಯವಾಗಿದೆ. ಅವಕಾಶವನ್ನೇ ನೀಡದೆ ಕರುಣ್ ನಾಯರ್ ಅವರನ್ನು ಭಾರತ ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸುವುದು ಸುಲಭದ ಮಾತಲ್ಲ. ಎದು ಎಲ್ಲರಿಗೂ ಸಾಧ್ಯವೂ ಇಲ್ಲ. ವೀರೇಂದ್ರ ಸೆಹ್ವಾಗ್ ಅವರ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಭಾರತದ ಮೊದಲ ಬಾಟ್ಸ್‌ಮನ್ ನಮ್ಮ ಕರುಣ್ ನಾಯರ್. ಹೀಗೆ ಜಗತ್ತೇ ಮೆಚ್ಚುವ ಸಾಧನೆ ಮಾಡಿ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದ ಕನ್ನಡಿಗನಿಗೆ ಈಗ ಆಗಿರುವುದು ಅಂತಿಂಥ ಅನ್ಯಾಯವಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿರುವ ತಂಡದಲ್ಲಿ ಕರುಣ್ ನಾಯರ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಇದಕ್ಕೆ ಆಯ್ಕೆ ಸಮಿತಿ ಏನೇ ಕಾರಣಗಳನ್ನು ನೀಡಬಹುದು. ಆದರೆ ಅವರು ಕರುಣ್ ನಾಯರ್‌ಗೆ ಅನ್ಯಾಯ ಮಾಡಿರುವುದಂತೂ ಸತ್ಯ.
ಕಳೆದ ಇಂಗ್ಲೆಂಡ್ ಪ್ರವಾಸದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದಲ್ಲಿದ್ದ ಕರುಣ್ ನಾಯರ್ ಅವರಿಗೆ ಒಂದೂ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲೂ ಕರುಣ್ ಟೀಮ್ ಇಂಡಿಯಾದಲ್ಲಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.
ಹೀಗೆ ಸತತ ಆರು ಟೆಸ್ಟ್‌ಗಳಲ್ಲಿ ಬೆಂಚ್ ಕಾಯಿಸಿದ್ದ ಕರುಣ್ ಅವರಿಗೆ ಅವಕಾಶವನ್ನೇ ನೀಡದೆ ಈಗ ತಂಡದಿಂದ ಹೊರಗಿಟ್ಟಿರುವುದು ಎಷ್ಟು ಸರಿ?
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ಅವರನ್ನು ಬದಿಗೊತ್ತಿ ಆಂಧ್ರದ ಹನುಮ ವಿಹಾರಿ ಅವರನ್ನು ಆಡಿಸಲಾಗಿತ್ತು. ಅವಕಾಶವನ್ನು ಬಳಸಿಕೊಂಡ ಹನುಮ ತಮ್ಮ ಚೊಚ್ಚಲ ಟೆಸ್ಟ್‌ನಲ್ಲೇ ಅರ್ಧಶತಕ ಮತ್ತು 2 ವಿಕೆಟ್ ಪಡೆದಿದ್ದರು. ಆಂಧ್ರದವರೇ ಆದದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ತಮ್ಮ ಕಾರ್ಯಾವಧಿ ಮುಕ್ತಾಯದ ಹಂತದಲ್ಲಿರುವಾಗ ತಮ್ಮ ರಾಜ್ಯದ ಒಬ್ಬ ಆಟಗಾರನನ್ನು ಟೀಮ್ ಇಂಡಿಯಾ ಪರ ಆಡಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಅದೇ ಪ್ರಭಾವವನ್ನು ಬಳಸಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಹನುಮ ವಿಹಾರಿಗೆ ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಅನ್ಯಾಯವಾಗಿರುವುದು ಮಾತ್ರ ಕರುಣ್ ನಾಯರ್‌ಗೆ.

ಇದನ್ನೂ ಓದಿ: ಭಾರತ ತಂಡದಲ್ಲಿ ಮಯಾಂಕ್‌ಗೆ ಸ್ಥಾನ, ಕರುಣ್‌ಗಿಲ್ಲ ಅವಕಾಶ

PC: Karun Nair/Twitter

ತ್ರಿಶತಕದ ನಂತರ ಆಡಿದ್ದು ನಾಲ್ಕೇ ಇನ್ನಿಂಗ್ಸ್!
2016ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ತ್ರಿಶತಕ(303*) ಸಿಡಿಸಿ ಮಿಂಚಿದ್ದರು. ಆ ತ್ರಿಶತಕದ ನಂತರ ಭಾರತ 20 ಟೆಸ್ಟ್ ಪಂದ್ಯಗಳನ್ನಾಡಿದೆ. ಇದರಲ್ಲಿ ಕರುಣ್‌ಗೆ ಎಷ್ಟು ಅವಕಾಶ ಸಿಕ್ಕಿದೆ ಎಂಬುದನ್ನು ಕೇಳಿದ್ರೆ ನಿಮಗೆ ಖಂಡಿತಾ ಅಚ್ಚರಿಯಾಗದೆ ಇರದು. ತ್ರಿಶತಕ ಬಾರಿಸಿ ಮಿಂಚಿದ ನಂತರ ಕರುಣ್ ಆಡಿರುವುದು ಕೇವಲ 3 ಟೆಸ್ಟ್, 4 ಇನ್ನಿಂಗ್ಸ್. ಇದೇ ಕರುಣ್ ಜಾಗದಲ್ಲಿ ಮುಂಬೈ ಅಥವಾ ದಿಲ್ಲಿಯ ಆಟಗಾರನೇನಾದರೂ ಇದ್ದಿದ್ದರೆ ಆತ ಒಂದೇ ಒಂದು ತ್ರಿಶತಕದ ಆಧಾರದ ಮೇಲೆ ಟೀಮ್ ಇಂಡಿಯಾದಲ್ಲಿ ಇಷ್ಟು ಹೊತ್ತಿಗೆ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿದ್ದ ಅಥವಾ ಭದ್ರ ಪಡಿಸಿಕೊಳ್ಳಲು ಅವಕಾಶ ನೀಡುತ್ತಿದ್ದರು. ಆದರೆ ಕರುಣ್ ಎಷ್ಟಾದರೂ ಕನ್ನಡಿಗನಲ್ಲವೇ? ತ್ರಿಶತಕಕ್ಕೂ ಬೆಲೆ ನೀಡದೆ ನಮ್ಮ ಹುಡುಗನನ್ನು ಪದೇ ಪದೇ ತುಳಿಯಲಾಗುತ್ತಿದೆ.
ಆಯ್ಕೆ ಸಮಿತಿ ಮುಖ್ಯಸ್ಥನ ಪಕ್ಷಪಾತ, ಟೀಮ್ ಇಂಡಿಯಾದಲ್ಲಿನ ರಾಜಕೀಯಕ್ಕೆ ಕರುಣ್ ಬಲಿಯಾಗುತ್ತಿದ್ದಾರೆ.
ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಕರುಣ್ ನಾಯರ್ ಅವರನ್ನು ಮೀಸಲು ಬ್ಯಾಟ್ಸ್‌ಮನ್ ಆಗಿ ಆಯ್ಕೆ ಸಮಿತಿ ಆಯ್ಕೆ ಮಾಡಿತ್ತಾದರೂ, ತಂಡದ ವ್ಯವಸ್ಥಾಪಕ ಮಂಡಳಿ ಮಾತ್ರ ಕರುಣ್‌ರನ್ನು ಆಡಿಸಲಿಲ್ಲ. 5ನೇ ಟೆಸ್ಟ್‌ನಲ್ಲಿ ಕರುಣ್ ಬದಲು ಹನುಮ ವಿಹಾರಿ ಅವರನ್ನು ಆಡಿಸಿದಾಗ ಮಾಜಿ ನಾಯಕ ಸುನಿಲ್ ಗವಾಸ್ಕ್‌ರ್ ಸಿಡಿದೆದ್ದಿದ್ದರು. ಟೀಮ್ ಇಂಡಿಯಾದ ವ್ಯವಸ್ಥಾಪಕ ಮಂಡಳಿಯಿಂದ ಕರುಣ್‌ಗೆ ಆಗುತ್ತಿರುವ ಅನ್ಯಾಯವನ್ನು ಗವಾಸ್ಕರ್ ಕಟು ಶಬ್ದಗಳಲ್ಲಿ ಪ್ರಶ್ನಿಸಿದ್ದರು.

                  ಕರುಣ್ ನಾಯರ್ ನಿಮ್ಮ ಫೇವರಿಟ್ ಆಟಗಾರನಲ್ಲ ಎಂಬುದು ನನಗೆ ತಿಳಿದಿದೆ.                 ಆತನನ್ನು ಆಯ್ಕೆ ಮಾಡುವುದು ನಿಮಗೆ ಬೇಕಿಲ್ಲ.
– ಸುನಿಲ್ ಗವಾಸ್ಕರ್, ಭಾರತ ತಂಡದ ಮಾಜಿ ನಾಯಕ.

ಇದೀಗ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಪಕ್ಕಕ್ಕಿರಲಿ, ಹನುಮ ವಿಹಾರಿ ಆಗಮನದೊಂದಿಗೆ ತಂಡದಲ್ಲೇ ಕರುಣ್ ಸ್ಥಾನ ಕಳೆದುಕೊಂಡಿದ್ದಾರೆ. ಅವಕಾಶ ನೀಡಿ ಉತ್ತಮ ಪ್ರದರ್ಶನ ತೋರದೆ ತಂಡದಿಂದ ಕೈಬಿಟ್ಟಿದ್ದರೆ ಅದರಲ್ಲಿ ಅರ್ಥವಿರುತ್ತಿತ್ತು. ಆದರೆ ಅವಕಾಶವನ್ನೇ ನಿರಾಕರಿಸಿ ಈಗ ಮನೆಗೆ ನಡಿ ಎಂದರೆ ಅದು ನಿಜಕ್ಕೂ ಅನ್ಯಾಯವಲ್ಲದೆ ಮತ್ತಿನ್ನೇನೂ ಅಲ್ಲ.

LEAVE A REPLY

Please enter your comment!
Please enter your name here

1 × five =