‘ದಾದಾ’ ಗಂಗೂಲಿ ದಾಖಲೆ ಮುರಿದ ‘ಕಿಂಗ್’ ಕೊಹ್ಲಿ

0

ಮೆಲ್ಬರ್ನ್, ಡಿಸೆಂಬರ್ 30: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಂಗಾಳದ ಹುಲಿ ಸೌರವ್ ಗಂಗೂಲಿ ಅವರ ದಾಖಲೆಯೊಂದನ್ನು ಪುಡಿಗಟ್ಟಿದ್ದಾರೆ.

ವಿದೇಶದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಭಾರತೀಯ ನಾಯಕರ ಪೈಕಿ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಮೀರಿಸಿದ್ದಾರೆ. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು 137 ರನ್ ಗಳಿಂದ ಗೆಲ್ಲುವ ಮೂಲಕ ಕಿಂಗ್ ಕೊಹ್ಲಿ ಈ ದಾಖಲೆ ಬರೆದರು.

ದಾದಾ ಖ್ಯಾತಿಯ ಸೌರವ್ ಗಂಗೂಲಿ ವಿದೇಶದಲ್ಲಿ 28 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 11 ಗೆಲುವು ಕಂಡಿದ್ದಾರೆ. ವಿರಾಟ್ ಕೊಹ್ಲಿ 24 ಪಂದ್ಯಗಳಲ್ಲಿ 11 ಗೆಲುವು ಕಂಡಿದ್ದಾರೆ.

ವಿರಾಟ್ ಕೊಹ್ಲಿ ಒಟ್ಟು 45 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು 26 ಗೆಲುವು, 10 ಸೋಲು ಹಾಗೂ 9 ಡ್ರಾ ಫಲಿತಾಂಶಗಳನ್ನು ಕಂಡಿದ್ದಾರೆ. ಸೌರವ್ ಗಂಗೂಲಿ 49 ಪಂದ್ಯಗಳಲ್ಲಿ 21 ಗೆಲುವು, 13 ಸೋಲು ಹಾಗೂ 15 ಡ್ರಾ ಫಲಿತಾಂಶಗಳನ್ನು ಕಂಡಿದ್ದಾರೆ. ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ದಾಖಲೆ ಎಂ.ಎಸ್ ಧೋನಿ ಹೆಸರಲ್ಲಿದೆ.

ಧೋನಿ 60 ಪಂದ್ಯಗಳಿಂದ 27 ಗೆಲುವು, 18 ಸೋಲು ಮತ್ತು 15 ಡ್ರಾ ಫಲಿತಾಂಶಗಳನ್ನು ಕಂಡಿದ್ದು, ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನು ಎರಡು ಗೆಲುವುಗಳ ಅವಶ್ಯಕತೆಯಿದೆ.

LEAVE A REPLY

Please enter your comment!
Please enter your name here

5 × one =