ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಕೈತಪ್ಪಿದ ಶತಕ

0

ಮೆಲ್ಬರ್ನ್, ಡಿಸೆಂಬರ್ 26: ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಟೆಸ್ಟ್ ಪದಾರ್ಪಣೆಯಲ್ಲೇ ಶತಕ ವಂಚಿತರಾಗಿ ನಿರಾಸೆ ಅನುಭವಿಸಿದ್ದಾರೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ 76 ರನ್ ಗಳಿಸಿ ಔಟಾದರು.
3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಮಯಾಂಕ್ ಉತ್ತಮ ಆರಂಭ ಒದಗಿಸಿದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆತ್ಮವಿಶ್ವಾಸದ ಆಟವಾಡಿದ ಬಲಗೈ ಬ್ಯಾಟ್ಸ್ ಮನ್ ಮಯಾಂಕ್, ಆಂಧ್ರಪ್ರದೇಶದ ಜೊತೆಗಾರ ಹನುಮ ವಿಹಾರಿ ಜೊತೆ ಮೊದಲ ವಿಕೆಟ್ ಗೆ 40 ರನ್ ಸೇರಿಸಿದರು.

PC:BCCI

ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಯಾಂಕ್, ಮುಖ್ಯವಾಗಿ ಆಫ್ ಸ್ಪಿನ್ನರ್ ನೇಥನ್ ಲಯಾನ್ ವಿರುದ್ಧ ಉತ್ತಮ ಪಾದಚಲನೆಯೊಂದಿಗೆ ಸರಾಗವಾಗಿ ರನ್ ಕಲೆ ಹಾಕಿದರು. ಡೀಪ್ ಮಿಡ್ ವಿಕೆಟ್ ನಲ್ಲಿ ಸಿಕ್ಸರ್ ಕೂಡ ಬಾರಿಸಿದರು.
ಅರ್ಧಶತಕ ಗಳಿಸಿ ಮುನ್ನಡೆದ ಮಯಾಂಕ್ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಶತಕಕ್ಕೆ 24 ರನ್ ಬೇಕಿದ್ದ ಸಂದರ್ಭದಲ್ಲಿ ವೇಗಿ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಟಿಮ್ ಪೇಯ್ನ್ ಗೆ ಕ್ಯಾಚಿತ್ತು ಔಟಾದರು. 161 ಎಸೆತಗಳನ್ನು ಎದುರಿಸಿದ ಮಯಾಂಕ್ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಗಮನ ಸೆಳೆದರು.

PC: BCCI

ಪಂದ್ಯ ಆರಂಭಕ್ಕೂ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದರು. ಭಾರತದ 295ನೇ ಹಾಗೂ ಕರ್ನಾಟಕದ 26ನೇ ಟೆಸ್ಟ್ ಆಟಗಾರನಾಗಿ ಮಯಾಂಕ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.

ಕರ್ನಾಟಕದ ಟೆಸ್ಟ್ ಆಟಗಾರರ ಪಟ್ಟಿ: ಪಾಲಿಯಾ, ಮುದ್ದಯ್ಯ, ಬುದಿ ಕುಂದೆರನ್, ಎರಾಪಳ್ಳಿ ಪ್ರಸನ್ನ, ಬಿ.ಎಸ್ ಚಂದ್ರಶೇಖರ್, ವಿ.ಸುಬ್ರಮಣ್ಯ, ಜಿ.ಆರ್ ವಿಶ್ವನಾಥ್, ಬ್ರಿಜೇಶ್ ಪಟೇಲ್, ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ರಘುರಾಮ್ ಭಟ್, ಸದಾನಂದ ವಿಶ್ವನಾಥ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ವಿಜಯ್ ಭಾರದ್ವಾಜ್, ಅಭಿಮನ್ಯು ಮಿಥುನ್, ಆರ್.ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ, ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್.

LEAVE A REPLY

Please enter your comment!
Please enter your name here

eleven − seven =