ಪಾನಿಪೂರಿ ಮಾರಿದ, ಟೆಂಟ್‌ನಲ್ಲಿ ಮಲಗಿದ… ಆ ಹುಡುಗ ಈಗ ಟೀಮ್ ಇಂಡಿಯಾ ಸ್ಟಾರ್..!

0
PC: ACC

ಬೆಂಗಳೂರು, ಅಕ್ಟೋಬರ್ 8: ಉತ್ತರ ಪ್ರದೇಶದಿಂದ ಮುಂಬೈಗೆ ಬಂದ 10 ವರ್ಷದ ಆ ಹುಡುಗ ಬಳಿ ಏನೂ ಇರಲಿಲ್ಲ. ಕೈಯಲ್ಲಿ ದುಡ್ಡಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ. ಇನ್ನು ಉಳಿದುಕೊಳ್ಳಲು ಮನೆ ಎಲ್ಲಿಂದ ಬರಬೇಕು. ಆದರೆ ಆ ಹುಡುಗನ ಗುರಿ ಸ್ಪಷ್ಟವಾಗಿತ್ತು. ಆ ಗುರಿ ಮುಟ್ಟುವುದಕ್ಕಾಗಿ ಆತ ಮುಂಬೈನ ಆಜಾದ್ ಮೈದಾನದ ಪಕ್ಕದಲ್ಲಿದ್ದ ಟೆಂಟ್‌ನಲ್ಲೇ ಮಲಗಿದ, ಬೀದಿಯಲ್ಲಿ ಪಾನಿಪೂರಿ ಮಾರಿ ಜೀವನ ನಡೆಸಿದ.
ಇದು ಯಾವುದೇ ಸಿನಿಮಾ ಕಥೆಯಲ್ಲ. 19 ವರ್ಷದೊಳಗಿನವರ ಏಷ್ಯಾ ಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಯಶಸ್ವಿ ಜೈಸ್ವಾಲ್ ಎಂಬ ಯುವ ಕ್ರಿಕೆಟಿಗನ ಜೀವನದ ಕಥೆಯಿದು.

ಮೊನ್ನೆಯಷ್ಟೇ ಬಾಂಗ್ಲಾದೇಶದಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಕಿರಿಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಅದ್ಭುತವಾಗಿ ಆಡಿದ್ದ 16 ವರ್ಷದ ಯಶಸ್ವಿ ಬಾಂಗ್ಲಾದೇಶ ವಿರುದ್ಧದ ಫೈನಲ್‌ನಲ್ಲಿ 85 ರನ್ ಸೇರಿದಂತೆ 3 ಪಂದ್ಯಗಳಲ್ಲಿ 214 ರನ್ ಗಳಿಸಿ ಮಿಂಚಿದ್ದ. ಅದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಎರಡು ಶತಕಗಳನ್ನೂ ಬಾರಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದ.
ಭಾರತ ಅಂಡರ್ 19 ತಂಡದ ಸ್ಟಾರ್ ಆಟಗಾರನಾಗಿ ಬೆಳೆದು ನಿಂತಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಬದುಕು ಅತ್ಯಂತ ಕರುಣಾಜನಕವಾಗಿದೆ.

ಯಶಸ್ವಿ ಜೈಸ್ವಾಲ್ ತಂದೆ ಉತ್ತರ ಪ್ರದೇಶದಲ್ಲೊಂದು ಪುಟ್ಟ ಅಂಗಡಿಯನ್ನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಪುಟ್ಟ ಬಾಲಕ ಯಶಸ್ವಿಗೆ ದೊಡ್ಡ ಕ್ರಿಕೆಟಿಗನಾಗುವ ಕನಸು. ನೀನು ಇಲ್ಲೇ ಇದ್ದರೆ ಕ್ರಿಕೆಟಿಗನಾಗಲು ಸಾಧ್ಯವೇ ಇಲ್ಲ, ಮುಂಬೈಗೆ ಹೋಗು ಎಂದು ಅಲ್ಲಿದ್ದ ಹಿರಿಯ ಕ್ರಿಕೆಟಿಗರು ಯಶಸ್ವಿಗೆ ಹೇಳಿದರು. ಅಷ್ಟೇ, ತಂದೆಯನ್ನು ಕರೆದುಕೊಂಡು ಯಶಸ್ವಿ ಮುಂಬೈಗೆ ಬಂದೇ ಬಿಟ್ಟ.

PC: India Today

ತಂದೆಯೊಂದಿಗೆ ಮುಂಬೈಗೆ ಬಂದಿಳಿದಾಗ, ಇಲ್ಲಿ ಹೇಗೆ ಜೀವನ ಸಾಗಿಸುವುದು, ಎಲ್ಲಿ ಉಳಿದುಕೊಳ್ಳುವುದು ಅಂತ ತಂದೆ ಚಿಂತೆಗೊಳಗಾಗಿದ್ದರು. ನಾನು ನನ್ನ ಮಾವನ ಜೊತೆ ಇರುತ್ತೇನೆ ಅಂತ ಹೇಳಿದೆ. ನನ್ನ ಮಾವ ನನ್ನನ್ನು ಹಾಲಿನ ಡೈರಿ ಅಂಗಡಿಯೊಂದಕ್ಕೆ ಸೇರಿಸಿದರು. ಅಲ್ಲಿ ನಾನು ಕೆಲಸ ಮಾಡುತ್ತಾ ಅಲ್ಲೇ ಉಳಿದುಕೊಳ್ಳಬಹುದಾಗಿತ್ತು. ಹಾಲಿನ ಡೈರಿಯಲ್ಲಿ ಯಶಸ್ವಿ ಬೆಳಗ್ಗೆ ಬೆಳಗ್ಗೆ 5 ಗಂಟೆಗೆ ಡೈರಿಯನ್ನು ಶುಚಿಗೊಳಿಸಬೇಕಿತ್ತು. ನಂತರ ಕ್ರಿಕೆಟ್ ಅಭ್ಯಾಸ.
ಅಭ್ಯಾಸದಿಂದ ಮರಳಿದ ನಂತರ ಮತ್ತೆ ಡೈರಿಯಲ್ಲಿ ಕೆಲಸ ಮಾಡುವಂತೆ ಹೇಳುತ್ತಿದ್ದರು. ಆದರೆ ತುಂಬಾ ಬಳಲಿರುತ್ತಿದ್ದ ಕಾರಣ ಅದನ್ನು ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಅವರು ನನ್ನನ್ನು ಅಂಗಡಿಯಿಂದ ಹೊರ ಹಾಕಿದರು. ಮುಂಬೈನಲ್ಲಿ ನಾನು ಇದ್ದಕ್ಕಿದ್ದಂತೆ ಏಕಾಂಗಿಯಾದೆ. ನನಗೆ ಆಗ ದೊಡ್ಡ ಆಘಾತವೇ ಆಗಿತ್ತು.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

ಯಾವ ಕರುಣೆಯನ್ನೂ ತೋರದೆ ಆಸರೆಯಾಗಿದ್ದ ಹಾಲಿನ ಡೈರಿಯಿಂದ ಮಾವನೇ ಯಶಸ್ವಿಯನ್ನು ಹೊರ ಹಾಕಿದ. ತಿನ್ನಲು, ಮಲಗಲು ಇದ್ದ ಆಸರೆಯೇ ಇಲ್ಲವಾಯಿತು.ಮಾಯಾನಗರಿ ಮುಂಬೈನಲ್ಲಿ ಬದುಕುವುದು ಹೇಗೆ, ಮುಂದೇನು ಅಂತ ಯಶಸ್ವಿಗೆ ತಿಳಿಯಲಿಲ್ಲ.

ಡೈರಿಯಿಂದ ಹೊರ ಹಾಕಿದ ನಂತರ ನಾನು ಮೊದಲು ಮಾಡಿದ ಕೆಲಸವೇನೆಂದರೆ ನನ್ನ ಬ್ಯಾಗ್ ಎತ್ತಿಕೊಂಡು ಆಜಾದ್ ಮೈದಾನಕ್ಕೆ ಹೋದೆ. ಅಲ್ಲೊಂದು ಕ್ಲಬ್ ಇತ್ತು. ಅದರ ಹೆಸರು ಮುಸ್ಲಿಂ ಯುನೈಟೆಡ್ ಕ್ಲಬ್.ಇಲ್ಲಿ ಇಮ್ರಾನ್ ಸರ್ ಅಂತ ಒಬ್ಬರಿದ್ದರು. ಅವರಲ್ಲಿ ಆಶ್ರಯ ಕೇಳಿದೆ. ಅವರು ಮೊದಲು ಒಂದು ಮ್ಯಾಚ್ ಆಡು ಅಂದ್ರು. ಆ ಪಂದ್ಯದಲ್ಲಿ ನೀನು ಉತ್ತಮವಾಗಿ ಆಡಿದ್ರೆ, ಮೈದಾನದಲ್ಲಿರುವ ಟೆಂಟ್‌ನಲ್ಲಿ ನಿನಗೆ ಆಶ್ರಯ ಕೊಡುತ್ತೇವೆ ಅಂದ್ರು. ನಾನು ಆ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರಿಂದ ಟೆಂಟ್‌ನಲ್ಲಿ ಇರಲು ಅವಕಾಶ ಕಲ್ಪಿಸಿದರು.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

 

ಪಾಳುಬಿದ್ದಿದ್ದ ಆ ಟೆಂಟ್‌ನಲ್ಲಿ ಮೈದಾನದ ಸಿಬ್ಬಂದಿ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಆ ಟೆಂಟ್ ಹೇಗಿತ್ತಂದರೆ ಮಳೆ ಬಂದಾಗ ಟೆಂಟ್ ಒಳಗೇ ನೀರು ಬರುತ್ತಿತ್ತು. ಮಳೆ ಬಂತು ಅಂದ್ರೆ ನೀರು ನಿಲ್ಲುತ್ತಿತ್ತು. ಅವತ್ತು ರಾತ್ರಿಯೆಲ್ಲಾ ನಿದ್ದೆಯಿಲ್ಲ. ವಿದ್ಯುತ್ ವ್ಯವಸ್ಥೆಯೂ ಇರಲಿಲ್ಲ. ಟಾಯ್ಲೆಟ್ ಕೂಡ ಇರಲಿಲ್ಲ. ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ನನಗೆ ಆಗಾಗ ಹೊಡೆಯುತ್ತಿದ್ದ. ನಮಗೆಲ್ಲಾ ಅಡುಗೆ ಮಾಡು, ಇಲ್ಲವಾದರೆ ನಿನಗೆ ತಿನ್ನಲು ಏನೂ ಕೊಡುವುದಿಲ್ಲ ಅಂತ ಬೆದರಿಕೆ ಹಾಕುತ್ತಿದ್ದರು. ತುಂಬಾ ಕಷ್ಟಗಳನ್ನು ಅನುಭವಿಸಿದೆ.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

 

ಟೆಂಟ್‌ನಲ್ಲಿ ಕಳೆದ ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ ಜೈಸ್ವಾಲ್ ಕಣ್ಣಲ್ಲಿ ನೀರು ಜಿನುಗಿತು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜೈಸ್ವಾಲ್ ಪಡಬಾರದ ಕಷ್ಟ ಪಟ್ಟಿದ್ದ. ನನ್ನ ನೋವುಗಳನ್ನು ಹೇಳಿಕೊಳ್ಳಲು ಆಗ ಯಾರೂ ಇರಲಿಲ್ಲ. ರಾತ್ರಿ ಪಾನಿಪೂರಿ ಮಾರಲಾರಂಭಿಸಿದೆ. ಇದರಿಂದ ಸ್ವಲ್ಪ ದುಡ್ಡು ಸಿಗುತ್ತಿತ್ತು. ನಂತರ ಟೆಂಟ್‌ನಲ್ಲಿ ಬಂದು ಮಲಗುತ್ತಿದ್ದೆ. ನನಗೆ ಒಳ್ಳೆಯದು ಮಾಡು ಎಂದು ದೇವರಲ್ಲಿ ಸದಾ ಪ್ರಾರ್ಥಿಸುತ್ತಿದ್ದೆ.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

 

PC: ACC

ಅಭ್ಯಾಸದ ನಂತರ ಯಶಸ್ವಿ ಜೈಸ್ವಾಲ್ ದೊಡ್ಡ ವಯಸ್ಸಿನ ಹುಡುಗರೊಂದಿಗೆ ಮ್ಯಾಚ್ ಆಡುತ್ತಿದ್ದ. ಅಲ್ಲಿ ಚೆನ್ನಾಗಿ ಆಡಿದರೆ 200-300 ರೂಪಾಯಿ ಕೊಡುತ್ತಿದ್ದರು ಅಥವಾ ತಿನ್ನಲು ಏನಾದರೂ ಕೊಡುತ್ತಿದ್ದರು. ತುಂಬಾ ಸಮಸ್ಯೆಗಳನ್ನು ಎದುರಿಸಿದೆ. ಬಳಲಿದೆ. ನನ್ನಲ್ಲಿ ತಾಳ್ಮೆ ಎಂಬುದೇ ಉಳಿಯಲಿಲ್ಲ. ನಾನು ಏಕಾಂಗಿ ಎಂದು ಅನ್ನಿಸಲು ಪ್ರಾರಂಭವಾಯಿತು. ಆದ್ರೆ ಜ್ವಾಲಾ ಸಿಂಗ್ ಎಂಬ ಕೋಚ್ ಒಬ್ಬರನ್ನು ಭೇಟಿ ಮಾಡಿದ ನಂತರ ನನ್ನ ಜೀವನವೇ ಬದಲಾಯಿತು.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

 

2013ರ ಡಿಸೆಂಬರ್. ಆಗ ಟೂರ್ನಮೆಂಟ್‌ಗಳು ನಡೆಯುತ್ತಿದ್ದವು. ಒಳ್ಳೆಯ ಆಟಗಾರರು ಯಾರಾದರೂ ಇದ್ದಾರಾ ಅಂತ ಹುಡುಕುತ್ತಿದ್ದೆ. ನೆಟ್ಸ್‌ನಲ್ಲಿ ಯಶಸ್ವಿ ಎಂಬ ಸಣ್ಣ ಹುಡುಗ ಬ್ಯಾಟಿಂಗ್ ಮಾಡುತ್ತಿದ್ದುದನ್ನು ಗಮನಿಸಿದೆ. ಎಲ್ಲಿ ಉಳಿದುಕೊಂಡಿದ್ದೀಯಾ ಅಂತ ಅವನ್ನನು ಕೇಳಿದೆ. ನನಗೆ ಮನೆಯಿಲ್ಲ ಸರ್. ಮುಸ್ಲಿಂ ಯುನೈಟೆಡ್‌ನ ಟೆಂಟ್‌ನಲ್ಲಿ ಮಲಗುತ್ತೇನೆ ಅಂದ.
– ಜ್ವಾಲಾ ಸಿಂಗ್, ಯಶಸ್ವಿ ಜೈಸ್ವಾಲ್ ಕೋಚ್.

 

PC: Twitter

ಸರ್ ನನಗೆ ಸಹಾಯ ಮಾಡಿದರು. ಯಾಕಂದ್ರೆ ಅವ್ರ ಕೂಡ ಅದೇ ಹಿನ್ನೆಲೆಯಿಂದ ಬಂದವರಾಗಿದ್ರು. ಅವ್ರೂ ಕೂಡ ನನ್ನಂತೆಯೇ ಕಷ್ಟಗಳನ್ನು ಅನುಭವಿಸಿದ್ದರು. ನನ್ನಲ್ಲಿ ಬ್ಯಾಟ್ ಇರ್ಲಿಲ್ಲ. ಬೇರೆಯವ್ರ ಬಳಿ ಬ್ಯಾಟ್‌ಗಾಗಿ ಭಿಕ್ಷೆ ಬೇಡಿ ಆಡುತ್ತಿದ್ದೆ. ನಂತರ ವಸೀಂ ಜಾರ್ ಸರ್, ದಿಲೀಪ್ ವೆಂಗ್ಸರ್ಕರ್ ಸರ್ ಕೂಡ ಬ್ಯಾಟ್ ಕೊಟ್ಟರು. ಶ್ರೀಲಂಕಾಗೆ ತೆರಳುವ ಕೆಲವೇ ದಿನಗಳ ಮೊದಲು ಸಚಿನ್ ತೆಂಡೂಲ್ಕರ್ ಸರ್ ಬ್ಯಾಟ್ ಕೊಟ್ಟರು. ಅಲ್ಲದೆ ಇದೇ ಬ್ಯಾಟ್‌ನಲ್ಲಿ ಆಡು ಅಂದ್ರು.
– ಯಶಸ್ವಿ ಜೈಸ್ವಾಲ್, ಭಾರತದ 19 ವರ್ಷದೊಳಗಿನವರ ತಂಡದ ಆಟಗಾರ.

ಎಷ್ಟೇ ಕಷ್ಟಗಳು ಎದುರಾದ್ರೂ ಯಶಸ್ವಿ ಜೈಸ್ವಾಲ್ ತನ್ನ ಕನಸು ಕಮರಲು ಬಿಡಲಿಲ್ಲ. ಕಷ್ಟದಲ್ಲೇ ಬೆಳೆದು ಪರಿಶ್ರಮ ಪಟ್ಟು ಭಾರತದ ಕಿರಿಯರ ತಂಡಕ್ಕೆ ಆಯ್ಕೆಯಾಗಿ ಉತ್ತಮ ಆಟವಾಡಿದ್ದಾನೆ. ಯಶಸ್ವಿ ಜೈಸ್ವಾಲ್ ಎಂಬ ಹುಡುಗನ ಕಥೆ ನಿಜಕ್ಕೂ ಸ್ಫೂರ್ತಿ.

LEAVE A REPLY

Please enter your comment!
Please enter your name here

five − 1 =