
ಬೆಂಗಳೂರು, ಸೆಪ್ಟೆಂಬರ್ 27: ಹಸಿರು ಮತ್ತು ಬಿಳಿ ಬಣ್ಣದ ಜರ್ಸಿಯಲ್ಲಿ ಮಿಂಚಲಿರುವ ಕಿಕ್ಸ್ಟಾರ್ಟ್ ಎಫ್ಸಿ ಕರ್ನಾಟಕ ತಂಡ ಬೆಂಗಳೂರು ಫುಟ್ಬಾಲ್ ಮೈದಾನದಲ್ಲಿ ಭಾನುವಾರ ಸೂಪರ್ ಡಿವಿಜನ್ಗೆ ಪದಾರ್ಪಣೆ ಮಾಡಲಿದೆ.
ಭಾನುವಾರ ನಡೆಯುವ ತನ್ನ ಚೊಚ್ಚಲ ಪಂದ್ಯದಲ್ಲಿ ಕಿಕ್ಸ್ಟಾರ್ಟ್ ಎಫ್ಸಿ ತಂಡ, ಬೆಂಗಳೂರು ಇಂಡಿಪೆಂಡೆಂಟ್ಸ್ ವಿರುದ್ಧ ಆಡಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಗುರುವಾರ ಕಿಕ್ಸ್ಟಾರ್ಟ್ ಎಫ್ಸಿ ತಂಡದ ಜರ್ಸಿಯನ್ನು ಆನಾವರಣಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಕಿಕ್ಸ್ಟಾರ್ಟ್ ಎಫ್ಸಿ ಕ್ಲಬ್ನ ಸಿಇಒ ಹಾಗೂ ತಂಡದ ಸಹಾಯಕ ಕೋಚ್ ಲಕ್ಷ್ಮಣ್ ಭಟ್ಟಾರಾಯ್, ‘‘ ಇದಕ್ಕಾಗಿ ನಾವು ಕಳೆದ ಎರಡು ವರ್ಷಗಳಿಂದ ಶ್ರಮ ವಹಿಸಿದ್ದೇವೆ. ಕರ್ನಾಟಕದ ಯುವ ಪ್ರತಿಭೆಗಳನ್ನು ಗುರುತಿಸುವುದು ನಮ್ಮ ಮೂಲ ಉದ್ದೇಶ. 2018-19ನೇ ಸಾಲಿಗೆ ನಮ್ಮ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿರುವ ಹೆಚ್ಚಿನ ಆಟಗಾರರು 20 ವರ್ಷಕ್ಕಿಂತ ಕೆಳಗಿನವರು. ಇವರೊಂದಿಗೆ ಅನುಭವಿ ಆಟಗಾರರೂ ಇದ್ದಾರೆ, ’’ ಎಂದರು.

‘‘ ಅನುಭವಿ ಆಟಗಾರರ ಪೈಕಿ ಜಿ.ವಿಘ್ನೇಶ್ ಮತ್ತು ಸುನಿಲ್ ಕುಮಾರ್ ತಂಡದಲ್ಲಿದ್ದಾರೆ. ವಿಘ್ನೇಶ್ ಮತ್ತು ಸುನಿಲ್ ಕುಮಾರ್, ಸಂತೋಷ್ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿದ್ದ ಕರ್ನಾಟಕ ತಂಡದ ನಾಯಕ ಮತ್ತು ಉಪನಾಯಕರಾಗಿದ್ದರು. ಭಾರತ ತಂಡದ ಮಾಜಿ ಆಟಗಾರ ಕುಟ್ಟಿ ಮಣಿ ಮತ್ತು ಮಿಡ್ಫೀಲ್ಡರ್ ದೀಪಕ್ ಪ್ರಕಾಶ್ ಅವರ ಬಲವೂ ತಂಡಕ್ಕಿದೆ,’’ ಎಂದು ಲಕ್ಷ್ಮಣ್ ತಿಳಿಸಿದರು.
ಬೆಂಗಳೂರಿನ ಖ್ಯಾತ ಸೆಲೆಬ್ರಿಟಿ ಟ್ರೈನರ್ ಜೀತ್ ದೇವಯ್ಯ, ಕಿಕ್ಸ್ಟಾರ್ಟ್ ಎಫ್ಸಿ ತಂಡದ ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.