ಬದುಕು ರೂಪಿಸಿದ ತಂದೆಗೆ ಚೊಚ್ಚಲ ಟೆಸ್ಟ್ ಶತಕ ಅರ್ಪಣೆ

0
PC: Prithvi Shaw/Twitter

ರಾಜ್‌ಕೋಟ್, ಅಕ್ಟೋಬರ್ 05: ಪದಾರ್ಪಣೆಯ ಟೆಸ್ಟ್‌ನಲ್ಲೇ ಶತಕ ಬಾರಿಸಿ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಠಿಸಿರುವ ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ, ತಮ್ಮ ಚೊಚ್ಚಲ ಶತಕವನ್ನು ತಂದೆಗೆ ಅರ್ಪಿಸಿದ್ದಾರೆ.
ಇದಕ್ಕೆ ಕಾರಣವೂ ಇದೆ. ಏಕೆಂದರೆ ಪೃಥ್ವಿ ಶಾ ಅವರನ್ನು ಇಂದು ಕ್ರಿಕೆಟ್ ಆಟಗಾರನನ್ನಾಗಿ ರೂಪಿಸಿರುವುದೇ ತಂದೆ ಪಂಕಜ್ ಶಾ.

ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಶತಕ ಬಾರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ತಂದೆ ತನಗಾಗಿ ಮಾಡಿದ ತ್ಯಾಗವನ್ನು ನೆನಪು ಮಾಡಿಕೊಂಡರು.‘‘ಈ ಶತಕವನ್ನು ತಂದೆಗೆ ಅರ್ಪಿಸುತ್ತೇನೆ. ಅವರು ನನಗಾಗಿ ಮಾಡಿರುವ ತ್ಯಾಗ ತುಂಬಾ ದೊಡ್ಡದು. ಅದನ್ನು ವರ್ಣಿಸಲು ಸಾಧ್ಯವಿಲ್ಲ. ನನಗಾಗಿ ತಂದೆ ಮಾಡಿರುವ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ ಇರುತ್ತೇನೆ. ತಂದೆಯ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಶತಕ ಬಾರಿಸಿದಾಗಲೆಲ್ಲಾ ತಂದೆಯನ್ನು ನೆನಪು ಮಾಡಿಕೊಳ್ಳುತ್ತೇನೆ. ನನ್ನ ಮೊದಲ ಟೆಸ್ಟ್ ಶತಕ ಅವರಿಗೆ ಅರ್ಪಣೆ,’’ ಎಂದು ಪೃಥ್ವಿ ಶಾ ಹೇಳಿದ್ದಾರೆ.

                   

 ತಾಯಿ ಇಲ್ಲದ ತಬ್ಬಲಿಯನ್ನು ಸಲಹಿದ್ದ ತಂದೆ: ಪೃಥ್ವಿ ಶಾ 3 ವರ್ಷದ ಹುಡುಗನಾಗಿದ್ದಾಗ ತಾಯಿ ಕಾಯಿಲೆಯಿಂದ ತೀರಿಕೊಂಡಿದ್ದರು. ಅಂದಿನಿಂದ ಪೃಥ್ವಿಗೆ ತಂದೆ-ತಾಯಿ ಎಲ್ಲಾ ಪಂಕಜ್ ಅವರೇ ಆಗಿದ್ದಾರೆ. ಪೃಥ್ವಿ ಶಾ ದೊಡ್ಡ ಕ್ರಿಕೆಟ್ ಆಟಗಾರನಾಗಬೇಕೆಂಬುದು ತಾಯಿಯ ಕನಸಾಗಿತ್ತು. ಹೀಗಾಗಿ ಪತ್ನಿ ಮೃತಪಟ್ಟ ನಂತರ ಪಂಕಜ್ ಶಾ, ಪತ್ನಿಯ ಕನಸನ್ನು ನನಸು ಮಾಡಲು ಪಣತೊಟ್ಟರು. ಪೃಥ್ವಿಯ ಪ್ರತಿ ಹೆಜ್ಜೆಯಲ್ಲಿ ಹೆಜ್ಜೆ ಹಾಕುತ್ತಾ ಅವನ ಕ್ರಿಕೆಟ್ ಪ್ರೀತಿಗೆ ನೀರೆರೆಯುತ್ತಾ ಬಂದರು.
ಬೆಳಗ್ಗೆ 3.30ಕ್ಕೆ ಏಳುತ್ತಿದ್ದ ಪಂಕಜ್ ಶಾ, ಮಗನಿಗೆ ಬ್ರೇಕ್ ಫಾಸ್ಟ್ ರೆಡಿ ಮಾಡುತ್ತಿದ್ದರು. ಮುಂಬೈನ ವಿರಾರ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಬಾಂದ್ರಾದ ಎಂಐಜಿ ಮೈದಾನಕ್ಕೆ ಮಗನನ್ನು ಕರೆದೊಯ್ಯಬೇಕಿತ್ತು. ಹೀಗಾಗಿ ಬೆಳಗ್ಗೆ 4.30ಕ್ಕೆ ಮನೆ ಬಿಡುತ್ತಿದ್ದರು ತಂದೆ-ಮಗ.

ಮುಂಬೈನ ಲೋಕಲ್ ಟ್ರೈನ್‌ನಲ್ಲಿ ತಂದೆಯ ತೋಳಿನಲ್ಲಿ ನಿದ್ರಿಸುತ್ತಾ ಪೃಥ್ವಿ ಮೈದಾನ ತಲುಪುತ್ತಿದ್ದ. ಇಡೀ ದಿನ ಪೃಥ್ವಿ ಅಭ್ಯಾಸ ನಡೆಸುತ್ತಿದ್ದರೆ, ತಂದೆ ಪಂಕಜ್ ಶಾ ಮರದ ನೆರಳಿನಲ್ಲಿ ನಿಂತು ಮಗನ ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಕೆಲವೊಮ್ಮ ಸ್ಥಳೀಯ ಮಾರ್ಕೆಟ್‌ಗಳಿಗೆ ತೆರಳಿ ಮಗನಿಗೆ ಕ್ರಿಕೆಟ್ ಕಿಟ್‌ಗಳನ್ನು ತರುತ್ತಿದ್ದರು. ದಿನವಿಡೀ ಅಭ್ಯಾಸ ನಡೆಸಿದ ನಂತರ ಸಂಜೆ ಮನೆಗೆ ಮರಳುತ್ತಿದ್ದ ತಂದೆ-ಮಗ ಬೇಗನೆ ಊಟ ಮುಗಿಸಿ 9.30ಕ್ಕೆ ಮಲುಗುತ್ತಿದ್ದರು. ಪೃಥ್ವಿ ಶಾ ಮೊದಲ ಸ್ಕಾಲರ್‌ಷಿಪ್ ಪಡೆಯುವವರೆಗೆ ಈ ದಿನಚರಿ ಮುಂದುವರಿದಿತ್ತು.

ಮಗನಿಗಾಗಿ ಉದ್ಯಮವನ್ನೇ ತೊರೆದ ತಂದೆ: ಪೃಥ್ವಿ ಅವರ ತಂದೆ ಪಂಕಜ್ ಶಾ ಬಟ್ಟೆ ವ್ಯಾಪಾರಸ್ಥ. ಅವರಿಗೆ ಗುಜರಾತ್‌ನ ಸೂರತ್ ಹಾಗೂ ಬರೋಡಗಳಲ್ಲೂ ಗಿರಾಕಿಗಳಿದ್ದರು. ಆದರೆ ಮಗನ ಕ್ರಿಕೆಟ್ ಅಭ್ಯಾಸವನ್ನು ನೋಡಿಕೊಳ್ಳುವ ಜೊತೆಗೆ ಉದ್ಯಮವನ್ನೂ ನೋಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಒಂದರ ಮೇಲೆ ಗಮನ ಹರಿಸಿದರೆ ಮತ್ತೊಂದರ ಮೇಲೆ ಗಮನ ಕಡಿಮೆಯಾಗುತ್ತದೆ. ಮಗನನ್ನು ದೊಡ್ಡ ಕ್ರಿಕೆಟ್ ಆಟಗಾರನನ್ನಾಗಿ ಮಾಡಲೇಬೇಕೆಂಬ ದೃಢ ಸಂಕಲ್ಪ ಮಾಡಿದ್ದ ಪಂಕಜ್ ಇದಕ್ಕಾಗಿ ಉದ್ಯಮವನ್ನೇ ತೊರೆದು ಮಗನ ಜೊತೆ ನಿಂತರು. ಇದ್ದ ಅಲ್ಪ ಸ್ವಲ್ಪ ದುಡ್ಡಿನಲ್ಲಿ ಜೀವನ ಸಾಗಲಾರಂಭಿಸಿತು. ವೃತ್ತಿಯನ್ನು ತೊರೆದ ಪಂಕಜ್, ತಮ್ಮ ಜೀವನವನ್ನೇ ಮಗನ ಕ್ರಿಕೆಟ್‌ಗಾಗಿ ಮುಡಿಪಾಗಿಟ್ಟರು.

ಹಬ್ಬ-ಹರಿದಿನಗಳಿಲ್ಲ, ಅಭ್ಯಾಸವೇ ಎಲ್ಲ!: ಪೃಥ್ವಿಗೆ ಬಾಲ್ಯದಲ್ಲಿ ಬೇರೆ ಮಕ್ಕಳಂತೆ ಹಬ್ಬ-ಹರಿದಿನಗಳಿರಲಿಲ್ಲ, ಬರ್ತ್ ಡೇ ಪಾರ್ಟಿಗಳಿರಲಿಲ್ಲ. ಕ್ರಿಕೆಟ್ ಅಭ್ಯಾಸವೇ ಅವನ ಜೀವನವಾಗಿತ್ತು. ತಂದೆ-ಮಗ ಒಂದೇ ಒಂದು ದಿನ ರಜೆ ಹಾಕಿ ಸುತ್ತಾಡಲು ಹೋದವರಲ್ಲ. ಮಗನ ಹುಟ್ಟುಹಬ್ಬದ ದಿನ ಅಥವಾ ಆತ ಚೆನ್ನಾಗಿ ಆಡಿದ ದಿನ ಪೃಥ್ವಿಯನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು ಪಂಕಜ್ ಶಾ.
ತನಗಾಗಿ ತಂದೆ ಮಾಡಿದ ತ್ಯಾಗ ವ್ಯರ್ಥವಾಗಲು ಪೃಥ್ವಿ ಬಿಡಲಿಲ್ಲ. ಕಠಿಣ ಅಭ್ಯಾಸದ ಲವಾಗಿ ಶಾಲಾದಿನಗಳಲ್ಲೇ ಶತಕಗಳ ಮೇಲೆ ಶತಕಗಳನ್ನು ಬಾರಿಸಿ ಸದ್ದು ಮಾಡಿದ್ದ ಪೃಥ್ವಿ ಭಾರತದ 19 ವರ್ಷದೊಳಗಿನ ತಂಡದ ನಾಯಕನಾಗಿ ಈ ವರ್ಷ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ. ಆಡಿದ ಮೊದಲ ರಣಜಿ ಪಂದ್ಯ, ದುಲೀಪ್ ಟ್ರೋಫಿ ಪಂದ್ಯ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿ ಮುಂದಿನ ದಿನಗಳಲ್ಲಿ ಕ್ರಿಕೆಟ್ ಜಗತ್ತನ್ನು ಆಳುವ ಮುನ್ಸೂಚನೆ ನೀಡಿದ್ದಾನೆ.

LEAVE A REPLY

Please enter your comment!
Please enter your name here

2 × five =