ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನದ ಮೇಲೆ ಬ್ರಿಜೇಶ್ ಕಣ್ಣು!

0

ಬೆಂಗಳೂರು, ಸೆಪ್ಟೆಂಬರ್ 13: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಕಾರ್ಯದರ್ಶಿಯಾಗಿ 15 ವರ್ಷಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ದೇಶದ ಅನುಭವಿ ಕ್ರಿಕೆಟ್ ಆಡಳಿತಗಾರ ಎಂದೇ ಹೆಸರು ಮಾಡಿದ್ದಾರೆ. ಇದೀಗ ಬ್ರಿಜೇಶ್ ಪಟೇಲ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ ಅಥವಾ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ 9 ವರ್ಷ ಅಧಿಕಾರದಲ್ಲಿದ್ದವರು ತಮ್ಮ ಸ್ಥಾನಗಳಲ್ಲಿ ಮುಂದುವರಿಯುವಂತಿಲ್ಲ ಎಂಬ ಲೋಧಾ ಶಿಫಾರಸಿನನ್ವಯ ಬ್ರಿಜೇಶ್ ಪಟೇಲ್ ಕಳೆದ ವರ್ಷ ಕೆಎಸ್‌ಸಿಎ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಒಂದೂವರೆ ವರ್ಷದಿಂದ ಕ್ರಿಕೆಟ್ ಆಡಳಿತದಿಂದ ಹೊರಗಿರುವ ಬ್ರಿಜೇಶ್ ಪಟೇಲ್, ಮುಂಬರುವ ಬಿಸಿಸಿಐ ಚುನಾವಣೆಯಲ್ಲಿ ಅಧ್ಯಕ್ಷ ಅಥವಾ ಕಾರ್ಯದರ್ಶಿ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ತಮಿಳುನಾಡು ಕ್ರಿಕೆಟ್ ಸಂಸ್ಥೆ, ಬಿಸಿಸಿಐ ಹಾಗೂ ಐಸಿಸಿಯ ಮಾಜಿ ಅಧ್ಯಕ್ಷ, ದೇಶದ ಪ್ರಬಲ ಕ್ರಿಕೆಟ್ ಆಡಳಿತಗಾರ ಎನ್.ಶ್ರೀನಿವಾಸನ್ ಅವರ ಆಪ್ತರಾಗಿರುವ ಬ್ರಿಜೇಶ್, ಶ್ರೀನಿವಾಸನ್ ಅವರ ಬೆಂಬಲದೊಂದಿಗೆ ಬಿಸಿಸಿಐ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಧಾ ಶಿಫಾರಸಿನ ಪ್ರಕಾರ ಕ್ರಿಕೆಟ್ ಸಂಸ್ಥೆಗಳಲ್ಲಿ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನು ಬಿಸಿಸಿಐನ ಹೊಸ ಸಂವಿಧಾನದಲ್ಲಿ ಜಾರಿಗೆ ತರಲಾಗಿದೆ. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐಯನ್ನು ಸೇರಿಸಿ ಈ 9 ವರ್ಷಗಳ ಅವಧಿಯೋ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐಗೆ ಪ್ರತ್ಯೇಕ 9 ವರ್ಷಗಳ ಅವಧಿಯೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಪ್ರತ್ಯೇಕ 9 ವರ್ಷಗಳು ಎಂಬುದಾದಲ್ಲಿ ಬಿಸಿಸಿಐ ಚುನಾವಣೆಗೆ ಸ್ಪರ್ಧಿಸಲು ಬ್ರಿಜೇಶ್ ಪಟೇಲ್ ಅರ್ಹರಾಗಿದ್ದಾರೆ. ಏಕೆಂದರೆ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ 15 ವರ್ಷಗಳ ಕಾಲ ಅಕಾರದಲ್ಲಿದ್ದ ಬ್ರಿಜೇಶ್ ಇದುವರೆಗೆ ಬಿಸಿಸಿಐ ಚುನಾವಣೆಗೆ ಸ್ಪರ್ಧಿಸಿಲ್ಲ, ಬಿಸಿಸಿಐನಲ್ಲಿ ಯಾವುದೇ ಅಧಿಕಾರವನ್ನು ಅನುಭವಿಸಿಲ್ಲ.
70 ವರ್ಷ ಮೇಲ್ಪಟ್ಟವರು ಕ್ರಿಕೆಟ್ ಆಡಳಿತದಲ್ಲಿರುವಂತಿಲ್ಲ ಎಂಬುದು ಲೋಧಾ ಶಿಫಾರಸಿನ ಮತ್ತೊಂದು ಪ್ರಮುಖ ಅಂಶ. ಬ್ರಿಜೇಶ್ ಪಟೇಲ್ ಅವರಿಗೆ ಈಗ 65 ವರ್ಷ ವಯಸ್ಸು. ಹೀಗಾಗಿ ಬಿಸಿಸಿಐನಲ್ಲಿ ಅವರು ಒಂದು ಅವಧಿ(3 ವರ್ಷ)ಗೆ ಅಧಿಕಾರದಲ್ಲಿರಬಹುದು.

LEAVE A REPLY

Please enter your comment!
Please enter your name here

17 − 13 =