ಬೆಲ್ ಬಾರಿಸಿದ ಅಜರುದ್ದೀನ್: ಬಿಸಿಸಿಐ ವಿರುದ್ಧ ಗಂಭೀರ್ ಆಕ್ರೋಶ

0
ಬೆಂಗಳೂರು, ನವೆಂಬರ್ 5: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದರೆ ಪಂದ್ಯಕ್ಕೂ ಮುನ್ನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬೆಲ್ ಬಾರಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದೆ.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವ ಅಂತರಾಷ್ಟ್ರೀಯ ಪಂದ್ಯಗಳಿಗೆ ಮುನ್ನ ಬೆಲ್ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡುವುದು ಸಂಪ್ರದಾಯ. ಅದರಂತೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ಬೆಲ್ ಬಾರಿಸುವ ಅವಕಾಶ ಕಲ್ಪಿಸಿತ್ತು.
ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ಅಜರುದ್ದೀನ್ ಅವರಿಗೆ ಬೆಲ್ ಬಾರಿಸಲು ಅವಕಾಶ ಕಲ್ಪಿಸಿದ್ದಕ್ಕೆ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಜರುದ್ದೀನ್ ಬೆಲ್ ಬಾರಿಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಗಂಭೀರ್ ಗಂಭೀರ್, ‘’ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ತಂಡ ಗೆದ್ದಿರಬಹುದು. ಆದರೆ ಬಿಸಿಸಿಐ, ಸಿಒಎ ಮತ್ತು ಸಿಎಬಿ ಸೋತಿದೆ. ಭ್ರಷ್ಟಾಚಾರ ವಿರುದ್ಧದ ನೋ ಟಾಲರೆನ್ಸ್ ಪಾಲಿಸಿ ಬಹುಶಃ ಭಾನುವಾರ ರಜೆ ತೆಗೆದುಕೊಂಡಿರುವ ರೀತಿ ಕಾಣುತ್ತಿದೆ. ಅವರಿಗೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಆದರೆ ಇದು ನಿಜಕ್ಕೂ ಆಘಾತಕಾರಿ. ಬೆಲ್ ಶಬ್ದ ಮಾಡುತ್ತಿದೆ. ಹಾಗೆಯೇ ಅಧಿಕಾರದಲ್ಲಿರುವವರೂ ಇದನ್ನೂ ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಭಾವಿಸುತ್ತೇನೆ” ಎಂದು ಗಂಭೀರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
https://twitter.com/GautamGambhir/status/1059161185411579904

LEAVE A REPLY

Please enter your comment!
Please enter your name here

18 − 6 =