ಭಾರತ ತಂಡದಲ್ಲಿ ಮಯಾಂಕ್‌ಗೆ ಸ್ಥಾನ, ಕರುಣ್‌ಗಿಲ್ಲ ಅವಕಾಶ

0
PC: Mayank/Twitter

ಬೆಂಗಳೂರು, ಸೆಪ್ಟೆಂಬರ್ 29: ರನ್ ಹೊಳೆಯನ್ನೇ ಹರಿಸಿ ತಮ್ಮನ್ನು ಸತತವಾಗಿ ಕಡೆಗಣಿಸುತ್ತಾ ಬಂದಿದ್ದ ಆಯ್ಕೆ ಸಮಿತಿಗೆ ಬ್ಯಾಟ್‌ನಿಂದಲೇ ಉತ್ತರ ನೀಡುತ್ತಿದ್ದ ಕರ್ನಾಟಕದ ಮಯಾಂಕ್ ಅಗರ್ವಾಲ್ ಕೊನೆಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಅಕ್ಟೋಬರ್ 4ರಂದು ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಪ್ರಕಟಿಸಲಾಗಿರುವ ಟೀಮ್ ಇಂಡಿಯಾದಲ್ಲಿ ಮಯಾಂಕ್‌ಗೆ ಅವಕಾಶ ನೀಡಲಾಗಿದೆ. ಎಡಗೈ ಓಪನರ್ ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಟ್ಟು ಮಯಾಂಕ್‌ಗೆ ಸ್ಥಾನ ನೀಡಲಾಗಿದೆ.
ಕಳೆದ 11 ತಿಂಗಳಲ್ಲಿ ಮಯಾಂಕ್ 13 ಶತಕಗಳ ಸಹಿತ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಟೀಮ್ ಇಂಡಿಯಾದ ಕದ ತಟ್ಟುತ್ತಿದ್ದರು. ಅವರ ಶ್ರಮಕ್ಕೆ ಈಗ ಕೊನೆಗೂ ಲ ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧ ವಡೋದರದಲ್ಲಿ ನಡೆಯುತ್ತಿರುವ 2 ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನವಾದ ಶನಿವಾರ ಮಯಾಂಕ್ 90 ರನ್ ಗಳಿಸಿದ್ದರು.
ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಭಾರತದ 2ನೇ ಆಟಗಾರನೆಂಬ ಖ್ಯಾತಿಯ ಕರುಣ್ ನಾಯರ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಟೆಸ್ಟ್ ತಂಡದಲ್ಲಿದ್ದ ಕರುಣ್‌ಗೆ ಒಂದೂ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಕರುಣ್‌ಗೆ ಅವಕಾಶವನ್ನೇ ನೀಡದೆ ತಂಡದಿಂದ ಹೊರಗಿಡಲಾಗಿದೆ.
ಇನ್ನು ಗಾಯದಿಂದ ಚೇತರಿಸಿಕೊಳ್ಳದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವೇಗಿ ಇಶಾಂತ್ ಶರ್ಮಾ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹೈದರಾಬಾದ್‌ನ ಯುವ ವೇಗಿ ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ಹನುಮ ವಿಹಾರಿ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್,

LEAVE A REPLY

Please enter your comment!
Please enter your name here

seventeen + one =