ಮತ್ತೆ ಸೌರಾಷ್ಟ್ರ ಪರ ಆಡಲಿರುವ ಕೊಡಗಿನ ಕಲಿ ರಾಬಿನ್ ಉತ್ತಪ್ಪ

0

ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್, ಕೊಡಗಿನ ಕಲಿ ರಾಬಿನ್ ಉತ್ತಪ್ಪ 2018-19ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ತಂಡದ ಪರ ತಮ್ಮ ಆಟ ಮುಂದುವರಿಸಲಿದ್ದಾರೆ.
ಕಳೆದ ಸಾಲಿನಲ್ಲಿ ಕರ್ನಾಟಕವನ್ನು ತೊರೆದು ಸೌರಾಷ್ಟ್ರಕ್ಕೆ ವಲಸೆ ಹೋಗಿದ್ದ ಉತ್ತಪ್ಪ, ತಮ್ಮ ಒಪ್ಪಂದವನ್ನು ಮತ್ತೆ ಒಂದು ವರ್ಷ ಅವಗೆ ಮುಂದುವರಿಸಿದ್ದಾರೆ. ”ಈ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ನಾನು ಮತ್ತೆ ಸೌರಾಷ್ಟ್ರ ತಂಡದ ಪರ ಆಡಲಿದ್ದೇನೆ,” ಎಂದು ಸ್ಪೋರ್ಟ್ಸ್‌ಸೀಮ್.ಕಾಮ್‌ಗೆ ರಾಬಿನ್ ಉತ್ತಪ್ಪ ಸ್ಪಷ್ಟಪಡಿಸಿದ್ದಾರೆ.

ಕಳೆದ ಬಾರಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಂದು ವರ್ಷದ ಒಪ್ಪಂದ ಮುಗಿದಿದ್ದ ಹಿನ್ನೆಲೆಯಲ್ಲಿ ರಾಬಿನ್ ಉತ್ತಪ್ಪ ಮತ್ತೆ ಕರ್ನಾಟಕ ತಂಡಕ್ಕೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನಿಂದ ಹೊರಗುಳಿದಿದ್ದ ರಾಬಿನ್, ಈ ಬಾರಿ ಕೆಪಿಎಲ್‌ಗೆ ವಾಪಸ್ಸಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವ ವಹಿಸಿದ್ದರು. ಉತ್ತಪ್ಪ ಸಾರಥ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಬಿಜಾಪುರ ಬುಲ್ಸ್ ವಿರುದ್ಧ ಸೋತು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
32 ವರ್ಷದ ರಾಬಿನ್ ಉತ್ತಪ್ಪ ಕಳೆದ ಬಾರಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡಿದ 9 ಇನ್ನಿಂಗ್ಸ್‌ಗಳಿಂದ 40.62ರ ಸರಾಸರಿಯಲ್ಲಿ 3 ಅರ್ಧಶತಕಗಳ ಸಹಿತ 326 ರನ್ ಕಲೆ ಹಾಕಿದ್ದರು.
ಕರ್ನಾಟಕ ತಂಡದ ಮಾಜಿ ನಾಯಕರೂ ಆಗಿರುವ ಉತ್ತಪ್ಪ ದೇಶೀಯ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿದ್ದು 136 ಪ್ರಥಮದರ್ಜೆ ಪಂದ್ಯಗಳಿಂದ 41.25ರ ಸರಾಸರಿಯಲ್ಲಿ 21 ಶತಕಗಳು ಮತ್ತು 51 ಅರ್ಧಶತಕಗಳ ಸಹಿತ 9118 ರನ್ ಗಳಿಸಿದ್ದಾರೆ.
ಕರ್ನಾಟಕ ಪರ 98 ರಣಜಿ ಪಂದ್ಯಗಳನ್ನಾಡಿರುವ ಕೊಡಗಿನ ಕಲಿ ಉತ್ತಪ್ಪ 6845 ರನ್ ಕಲೆ ಹಾಕಿದ್ದಾರೆ. ಸೌರಾಷ್ಟ್ರ ಪರ ಆಡಿರುವ 6 ಪಂದ್ಯಗಳು ಸೇರಿ ಒಟ್ಟು 104 ರಣಜಿ ಪಂದ್ಯಗಳಿಂದ 7166 ರನ್ ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಕರ್ನಾಟಕದ ಆಟಗಾರನೆಂಬ ದಾಖಲೆ ಉತ್ತಪ್ಪ ಅವರ ಹೆಸರಲ್ಲಿದೆ.
2009-10ನೇ ಸಾಲಿನಲ್ಲಿ ಕರ್ನಾಟಕ ತಂಡ ರಾಬಿನ್ ಉತ್ತಪ್ಪ ಅವರ ನಾಯಕತ್ವದಲ್ಲಿ ರಣಜಿ ಫೈನಲ್ ತಲುಪಿತ್ತು. ಆದರೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮುಂಬೈ ವಿರುದ್ಧ 6 ರನ್‌ಗಳಿಂದ ಸೋಲು ನಿರಾಸೆ ಅನುಭವಿಸಿತ್ತು.
2013-14 ಹಾಗೂ 2014-15ನೇ ಸಾಲಿನಲ್ಲಿ ಕರ್ನಾಟಕ ತಂಡ ಸತತ ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದಾಗ ರಾಬಿನ್ ಉತ್ತಪ್ಪ ಆ ಚಾಂಪಿಯನ್ ತಂಡದ ಸದಸ್ಯರಾಗಿದ್ದರು.

ರಣಜಿ ಟ್ರೋಫಿಯಲ್ಲಿ ರಾಬಿನ್ ಉತ್ತಪ್ಪ ಸಾಧನೆ
ವರ್ಷ             ಪಂದ್ಯ    ರನ್
2002-03       02       48
2003-04       02       23
2004-05       05       374
2005-06       06       278
2006-07       07       854
2007-08       05      188
2008-09       07       599
2009-10       08       382
2010-11       08       538
2011-12       08       505
2012-13       09       683
2013-14       05       374
2014-15       11       912
2015-16       08       759
2016-17       07       328
2017-18       06       321
Total            104       7166
ಅಂಕಿ ಅಂಶ : ಚನ್ನಗಿರಿ ಕೇಶವಮೂರ್ತಿ

LEAVE A REPLY

Please enter your comment!
Please enter your name here

4 × four =