ಮುಂಬೈ ಲಾಬಿಗೆ ಬಲಿಯಾದ ಕನ್ನಡಿಗ ಮಯಾಂಕ್ ಅಗರ್ವಾಲ್

0
ಬೆಂಗಳೂರು: ಭಾರತೀಯ ಕ್ರಿಕೆಟ್‌ನಲ್ಲಿ ಮುಂಬೈ ಲಾಬಿ ಇಂದು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಮುಂಬೈ ಲಾಬಿಯ ಬಿಸಿ ಕರ್ನಾಟಕದ ಹಲವಾರು ಪ್ರತಿಭಾವಂತ ಕ್ರಿಕೆಟಿಗರಿಗೆ ತಟ್ಟಿದೆ. ಇದಕ್ಕೆ ಮತ್ತೊಂದು ಸೇರ್ಪಡೆ ಮಯಾಂಕ್ ಅಗರ್ವಾಲ್.
ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ 4 ಹಾಗೂ 5ನೇ ಟೆಸ್ಟ್ ಪಂದ್ಯಗಳಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಅನುಭವಿ ಮುರಳಿ ವಿಜಯ್ ಅವರನ್ನು ಕೈಬಿಟ್ಟು, ಮುಂಬೈನ 18 ವರ್ಷದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಗೆ ಸ್ಥಾನ ನೀಡಲಾಗಿದೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 14 ಪಂದ್ಯಗಳಿಂದ 7 ಶತಕಗಳ ಸಹಿತ 56.72ರ ಬ್ಯಾಟಿಂಗ್ ಸರಾಸರಿ ಹೊಂದಿರುವ ಪೃಥ್ವಿ ಶಾ ಪ್ರತಿಭಾವಂತ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ದೇಶೀಯ ಕ್ರಿಕೆಟ್, ಭಾರತ ‘ಎ’ ತಂಡದ ಪರ ರನ್ ಹೊಳೆಯನ್ನೇ ಹರಿಸಿರುವ ಮಯಾಂಕ್ ಅಗರ್ವಾಲ್ ಕೂಡ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹ ಆಟಗಾರ ಎಂಬುದೂ ಕೂಡ ಎಷ್ಟೇ ಸತ್ಯ. ಪೃಥ್ವಿಗೂ ಮೊದಲು 27 ವರ್ಷದ ಮಯಾಂಕ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಬೇಕಿತ್ತು ಎಂದು ಕ್ರಿಕೆಟ್ ಪ್ರಿಯರೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಅನುಭವಿ ಮಯಾಂಕ್ ಅಗರ್ವಾಲ್ ಅವರನ್ನು ಹಿಂದಿಕ್ಕಿ ಯುವ ಪ್ರತಿಭಾವಂತ ಪೃಥ್ವಿ ಶಾ ಆಯ್ಕೆಯಾಗಲು ಕಾರಣ ಮುಂಬೈ ಲಾಬಿ. ಭಾರತ ತಂಡದ ಕೋಚ್ ರವಿ ಶಾಸ್ತ್ರಿ ಮುಂಬೈನವರಾಗಿರುವುದು ಪೃಥ್ವಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದ ಮಯಾಂಕ್ ಅಗರ್ವಾಲ್ ಅವರಿಗೆ ಮತ್ತೆ ನಿರಾಸೆಯಾಗಿದೆ.
PC: BCCI

2141 ರನ್‌ಗಳಿಗಿಲ್ಲ ಬೆಲೆ!

ಮಯಾಂಕ್ ಅಗರ್ವವಾಲ್ 2017-18ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಅಕ್ಷರಶಃ ರನ್ ಹೊಳೆಯನ್ನೇ ಹರಿಸಿದ್ದ ಮಯಾಂಕ್ 25 ಪಂದ್ಯಗಳಿಂದ 8 ಶತಕಗಳ ಸಹಿತ 2141 ರನ್ ಕಲೆ ಹಾಕಿದ್ದರು. ಇದು ಭಾರತದ ದೇಶೀಯ ಕ್ರಿಕೆಟ್‌ನ ಒಂದೇ ಋತುವಿನಲ್ಲಿ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್. ಈ ಮೂಲಕ ಮಯಾಂಕ್ 2015-16ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈನ ಶ್ರೇಯಸ್ ಅಯ್ಯರ್ ಅವರ 1947 ರನ್‌ಗಳ ದಾಖಲೆಯನ್ನು ಮುರಿದಿದ್ದರು. ಮಯಾಂಕ್ ಅವರ ದಾಖಲೆಯ 2141 ರನ್‌ಗಳಲ್ಲಿ ರಣಜಿ ಟ್ರೋಫಿಯ 8 ಪಂದ್ಯಗಳಿಂದ 5 ಶತಕಗಳ ಸಹಿತ 1160 ರನ್, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ 8 ಪಂದ್ಯಗಳಿಂದ 3 ಶತಕಗಳ ಸಹಿತ 723 ರನ್ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ 9 ಪಂದ್ಯಗಳಿಂದ 258 ರನ್‌ಗಳು ಸೇರಿವೆ.
PC: Mayank Agarwal/Twitter

ಭಾರತ ‘ಎ’ ಪರ ಮಿಂಚಿನ ಆಟ

ಕರ್ನಾಟಕ ತಂಡದ ಪರ ಮಾತ್ರವಲ್ಲದೆ ಭಾರತ ‘ಎ’ ಪರ ಕೂಡ ಮಯಾಂಕ್ ಅಗರ್ವಾಲ್ ಅದ್ಭುತ ಆಟ ಪ್ರದರ್ಶಿಸುತ್ತಾ ಬಂದಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಭಾರತ ‘ಎ’ ತಂಡದ ಪರ ಆಡಿರುವ 10 ಪಂದ್ಯಗಳಿಂದ ಮಯಾಂಕ್ 4 ಶತಕ (ಇದರಲ್ಲಿ ಒಂದು ದ್ವಿಶತಕ 220) ಸೇರಿ 759 ರನ್ ಕಲೆ ಹಾಕಿ ಮಿಂಚಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಶತಕ (151*, 112, 112)ಗಳನ್ನು ಬಾರಿಸಿದ್ದ ಮಯಾಂಕ್, ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ 220 ರನ್ ಸಿಡಿಸಿದ್ದರು. ಆ ಪಂದ್ಯದಲ್ಲಿ ಮಯಾಂಕ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಪೃಥ್ವಿ ಶಾ 136 ರನ್ ಗಳಿಸಿದ್ದರು.

2900 ರನ್, 12ಶತಕ!

ಪೃಥ್ವಿ ಶಾ ಅವರಿಗೆ ಇನ್ನೂ ವಯಸ್ಸಿದೆ. ಮಯಾಂಕ್ ಅಗರ್ವಾಲ್ ಅವರ ವಯಸ್ಸು 27. ಕಳೆದ ವರ್ಷದಿಂದ ಇದುವರೆಗೆ ಕರ್ನಾಟಕ ಮತ್ತು ಭಾರತ ‘ಎ’ ತಂಡಗಳ ಪರ 12 ಶತಕಗಳು ಸೇರಿ 2900ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಮಯಾಂಕ್, ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೆಷ್ಟು ರನ್ ಗಳಿಸಬೇಕು? ಆಯ್ಕೆಗೆ ಇಷ್ಟು ರನ್‌ಗಳು ಸಾಕಾಗುವುದಿಲ್ಲವೇ ಎಂಬ ಪ್ರಶ್ನೆ ಕರ್ನಾಟಕದ ಕ್ರಿಕೆಟ್ ಪ್ರಿಯರನ್ನು ಕಾಡುತ್ತಿದೆ.

LEAVE A REPLY

Please enter your comment!
Please enter your name here

seventeen − eleven =