ಮೇಘಾಲಯ ತಂಡಕ್ಕೆ ಕೋಚ್ ಆದ ರಾಜ್ಯದ ರಂಗಭೂಮಿ ಕಲಾವಿದ!

0
Mukunda G. PC: Hubli Tigers

ಬೆಂಗಳೂರು, ಸೆಪ್ಟೆಂಬರ್ 17: ರಂಗಭೂಮಿ ಕಲಾವಿದನೊಬ್ಬ ಕ್ರಿಕೆಟ್ ಕೋಚ್ ಆಗಿದ್ದಾನೆ ಎಂದರೆ ಹಲವರು ಹುಬ್ಬೇರಿಸುವುದು, ಅಚ್ಚರಿ ಪಡುವುದು ಸಹಜ. ಹೀಗೆ ಅಚ್ಚರಿ ಪಡುವಂತೆ ಮಾಡಿದವರು ಬೇರಾರೂ ಅಲ್ಲ, ಕರ್ನಾಟಕ ಕ್ರಿಕೆಟ್ ಅಕಾಡೆಮಿ ಹಾಗೂ ಕರ್ನಾಟಕದ ಕಿರಿಯರ ಕ್ರಿಕೆಟ್ ತಂಡಗಳ ತರಬೇತುದಾರ, ಮೇಘಾಲಯ ತಂಡದ ಕೋಚ್ ಆಗಿ ನೇಮಕಗೊಂಡಿರುವ ಜಿ.ಮುಕುಂದ್.
ದೇಶೀಯ ಕ್ರಿಕೆಟ್‌ನಲ್ಲಿ ಅಷ್ಟೇನೂ ಚಿರಪರಿಚಿತರಲ್ಲದ ಮುಕುಂದ್ ಕರ್ನಾಟಕ ಕ್ರಿಕೆಟ್‌ನಲ್ಲಿ ಚಿರಪರಿಚಿತ ವ್ಯಕ್ತಿ. ಪರಿಶ್ರಮಕ್ಕೆ ಹೆಸರಾಗಿರುವ ಮುಕುಂದ್, ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಈಶಾನ್ಯ ರಾಜ್ಯ ಮೇಘಾಲಯ ತಂಡದ ಕೋಚ್ ಆಗಿ ನೇಮಕೊಂಡಿದ್ದಾರೆ.
ದೇಶೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿರುವ ಮೇಘಾಲಯ ಕ್ರಿಕೆಟ್ ಸಂಸ್ಥೆ, ಕರ್ನಾಟಕದ ಖ್ಯಾತ ಕೋಚ್ ಕೆ.ಸನತ್ ಕುಮಾರ್ ಅವರನ್ನು ತನ್ನ ಕೋಚ್ ಆಗಿ ನೇಮಕಗೊಳಿಸಿದೆ. ಆದರೆ ಸನತ್ ಸದ್ಯ ಭಾರತದ 19 ವರ್ಷದೊಳಗಿನವರ ಕೋಚ್ ಆಗಿದ್ದು, ಲಖನೌನಲ್ಲಿ ನಡೆಯುತ್ತಿರುವ ಚತುಷ್ಕೋನ ಸರಣಿಯಲ್ಲಿ ತಂಡದೊಂದಿಗಿದ್ದಾರೆ. ಅಲ್ಲದೆ ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಗೂ ತಂಡದೊಂದಿಗೆ ತೆರಳಲಿದ್ದಾರೆ. ಹೀಗಾಗಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಮೇಘಾಲಯ ತಂಡದ ಕೋಚ್ ಆಗಿ ಮುಕುಂದ್ ಅವರ ಹೆಸರನ್ನು ಸನತ್ ಶಿಫಾರಸು ಮಾಡಿದ್ದರು.

‘‘ಈ ಜವಾಬ್ದಾರಿಯ ಬಗ್ಗೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಸನತ್ ಸರ್ ಸುಳಿವು ಕೊಟ್ಟರು. ಶಿಲ್ಲಾಂಗ್‌ಗೆ ಹೊರಡುವ 3 ದಿನಗಳಿಗಗೆ ಮುನ್ನ ಅವರ ಈ ಜವಾಬ್ದಾರಿಯನ್ನು ಖಚಿತ ಪಡಿಸಿದರು,’’ ಎಂದು ಮಿಜೋರಾಂ ವಿರುದ್ಧ ಗುರುವಾರ ಗುಜರಾತ್‌ನ ನಾದಿಯಾದ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಮುಕುಂದ್ ಹೇಳಿದರು. ಅಸ್ಸಾಂನ ಮಾಜಿ ಕ್ರಿಕೆಟಿಗ ಜೇಸನ್ ಲಮಾರೆ ಮೇಘಾಲಯ ತಂಡವನ್ನು ಮುನ್ನಡೆಸಲಿದ್ದಾರೆ.
ಕೆಎಸ್‌ಸಿಎ ಅಕಾಡೆಮಿಯಲ್ಲಿ 6 ವರ್ಷಗಳ ಕಾಲ ಕೆಲಸ ಮಾಡಿರುವ ಮುಕುಂದ್, ತಮ್ಮ ಸಾಧನೆಯ ಶ್ರೇಯವನ್ನು ಕೆಎಸ್‌ಸಿಎಗೆ ಸಲ್ಲಿಸಿದ್ದಾರೆ. ‘‘2013ರಲ್ಲಿ ಬಿಸಿಸಿಐ ಲೆವೆಲ್ 1 ಕೋಚಿಂಗ್ ಪೂರ್ತಿಗೊಳಿಸಿದ್ದೆ. ಕಳೆದ ವರ್ಷ ಐಸಿಸಿ ಲೆವೆಲ್ 2 ಕೋಚಿಂಗ್ ಪೂರ್ತಿಗೊಳಿಸಿದ್ದೇನೆ. ಆ ನಂತರ ಕೆಎಸ್‌ಸಿಎ ಅಕಾಡೆಮಿಯಲ್ಲಿ ಹಲವಾರು ಹಿರಿಯ ಕೋಚ್‌ಗಳೊಂದಿಗೆ ಹಾಗೂ ಕರ್ನಾಟಕದ ಕಿರಿಯರ ತಂಡಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ. ಕೆಎಸ್‌ಸಿಎ ಅಕಾಡೆಮಿಯ ಕೋಚ್‌ಗಳು ಹಾಗೂ ಅಧಿಕಾರಿಗಳಿಗೆ ನಾನು ಸದಾ ಕೃತಜ್ಞ, ’’ ಎಂದು ಬೆಂಗಳೂರು ಮೂಲದ ಮುಕುಂದ್ ನುಡಿದರು.
ಸೆಪ್ಟೆಂಬರ್ 8ರಂದು ಮೇಘಾಲಯ ತಂಡದ ಆಟಗಾರರನ್ನು ಮುಕುಂದ್ ಭೇಟಿ ಮಾಡಿದ್ದು, ಸಿದ್ಧತೆಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿಲ್ಲ. ‘‘ ಆಟಗಾರರೆಲ್ಲಾ ಫಿಟ್ ಆಗಿದ್ದಾರೆ. ಅಲ್ಲದೆ ಎಲ್ಲರೂ ಅನುಭವಿ ಕ್ರಿಕೆಟಿಗರು. ಶಿಲ್ಲಾಂಗ್‌ನಲ್ಲಿ ಸುರಿಯುತ್ತಿರುವ ಮಳೆ ನಮ್ಮ ಸಿದ್ಧತೆಗೆ ಅಡ್ಡಿ ಪಡಿಸಿತು. ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ನಾವು ನಮ್ಮ ಫೀಲ್ಡಿಂಗ್ ಅಭ್ಯಾಸವನ್ನು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಿದೆವು, ’’ ಎಂದು ಮುಕುಂದ್ ಹೇಳಿದರು.

ಕೆಎಸ್‌ಸಿಎ ಅಕಾಡೆಮಿ ಅಲ್ಲದೆ ರಣಜಿ ಟ್ರೋಫಿ ಶಿಬಿರದ ವೇಳೆ ಕರ್ನಾಟಕ ಹಿರಿಯ ತಂಡದ ಕೋಚ್‌ಗಳಿಗೆ ಮುಕುಂದ್ ಸಹಾಯಕರಾಗಿದ್ದರು. ಅಲ್ಲದೆ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳ ಪರ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಡಿಸೆಂಬರ್‌ನಲ್ಲಿ ಕರ್ನಾಟಕದ 14 ವರ್ಷದೊಳಗಿನವರ ಕೋಚಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಬಹುಮುಖ ಪ್ರತಿಭೆಯ ಮುಕುಂದ್ ನುಗ್ಗೇಕಾಯಿ ಎಂಬ ಕನ್ನಡ ಚಲನಚಿತ್ರದಲ್ಲೂ ನಟಿಸಿದ್ದಾರೆ.

LEAVE A REPLY

Please enter your comment!
Please enter your name here

sixteen − 2 =