ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ನಿಶ್ಚಲ್, ಶರತ್ ಆಸರೆ

0
D. Nischal (left) and Sharath BR. PC: Facebook

ನಾಗ್ಪುರ, ನವೆಂಬರ್ 13: ಯುವ ಆಟಗಾರರಾದ ಡಿ.ನಿಶ್ಚಲ್ (ಅಜೇಯ 66) ಮತ್ತು ಬಿ.ಆರ್ ಶರತ್ (ಅಜೇಯ 46) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ, ವಿದರ್ಭ ವಿರುದ್ಧದ ರಣಜಿ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.

ಇಲ್ಲಿನ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ತನ್ನ ಮೊದಲ ಪಂದ್ಯದ 2ನೇ ದಿನದಾಟದಲ್ಲಿ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ವಿದರ್ಭ ತಂಡವನ್ನು ಪ್ರಥಮ ಇನ್ನಿಂಗ್ಸ್ ನಲ್ಲಿ 307 ರನ್ನಿಗೆ ಕಟ್ಟಿ ಹಾಕಿದ ಕರ್ನಾಟಕ ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿತು. ಡಿ.ನಿಶ್ಚಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅನುಭವಿ ಬ್ಯಾಟ್ಸ್ ಮನ್ ಆರ್.ಸಮರ್ಥ್ (1) 2ನೇ ಓವರ್ ನಲ್ಲೇ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಭರವಸೆಯ ಬ್ಯಾಟ್ಸ್ ಮನ್ ಕೆ.ವಿ ಸಿದ್ದಾರ್ಥ್ (19) ತಮ್ಮ ಪದಾರ್ಪಣೆಯ ರಣಜಿ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ಎಡವಿ ಸ್ಪಿನ್ನರ್ ಅಕ್ಷಯ್ ವಾಖರೆ ದಾಳಿಯಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದರು.

4ನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದ ಮತ್ತೊಬ್ಬ ಅನುಭವಿ ಆಟಗಾರ ಕರುಣ್ ನಾಯರ್ (15) ಮತ್ತು 5ನೇ ಕ್ರಮಾಂಕದಲ್ಲಿ ಆಡಲಿಳಿದ ಅನುಭವಿ ಅಲ್ರೌಂಡರ್ ಸ್ಟುವರ್ಟ್ ಬಿನ್ನಿ (20) ತಂಡದ ನೆರವಿಗೆ ನಿಲ್ಲಲಿಲ್ಲ. ಅನುಭವಿಗಳ ವೈಫಲ್ಯದಿಂದಾಗಿ ಕರ್ನಾಟಕ ತಂಡ ಒಂದು ಹಂತದಲ್ಲಿ ಕೇವಲ 87 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಗೂಡಿದ ನಿಶ್ಟಲ್ ಮತ್ತು ಶ್ರೇಯಸ್ ಗೋಪಾಲ್ (30) ಜೋಡಿ 5ನೇ ವಿಕೆಟ್ ಗೆ 62 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು.

ಶ್ರೇಯಸ್ ಗೋಪಾಲ್ ಔಟಾದ ನಂತರ ಅಂಗಣಕ್ಕಿಳಿದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬಿ.ಆರ್ ಶರತ್ ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೇ ಭರವಸೆಯ ಆಟ ಪ್ರದರ್ಶಿಸಿದರು. ನಿಶ್ಚಲ್ ಜೊತೆ ಮುರಿಯದ 6ನೇ ವಿಕೆಟ್ ಗೆ 59 ರನ್ ಸೇರಿಸಿರುವ ಶರತ್, ಅರ್ಧಶತಕದತ್ತ ಮುನ್ನಡೆದಿದ್ದಾರೆ. ಮತ್ತೊಂದೆಡೆ ತಾಳ್ಮೆಯ ಆಟ ಪ್ರದರ್ಶಿಸಿದ ನಿಶ್ಚಲ್ 209 ಎಸೆತಗಳನ್ನೆದುರಿಸಿ 66 ರನ್ ಗಳಿಸಿದ್ದು, ಶತಕದತ್ತ ದಾಪುಗಾಲಿರಿಸಿದ್ದಾರೆ. ಇನ್ನಿಂಗ್ಸ್ ಮುನ್ನಡೆ ಪಡೆಯಲು ಕರ್ನಾಟಕ ತಂಡ ಉಳಿದಿರುವ 5 ವಿಕೆಟ್ ನೆರವಿನಿಂದ ಇನ್ನೂ 100 ರನ್ ಗಳಿಸಬೇಕಿದೆ.

Brief scores (Day 2): Vidharbha (O/N 245/8) I innings: 307 all out in 102.2 overs (Shrikanth Wagh 57, Akshay Wakhare 35) vs Karnataka (I innings): 208/5 in 72 overs (D. Nischal 66 batting (209b, 4×4), Sharath BR 46 batting, Aditya Sarwate 2/44, Akshay Wakhare 2/55).

 

LEAVE A REPLY

Please enter your comment!
Please enter your name here

15 − one =