ರಣಜಿ ಟ್ರೋಫಿ: ಕರ್ನಾಟಕ ತಂಡದಿಂದ ಕರುಣ್ ಔಟ್; ಮಯಾಂಕ್, ಗೌತಮ್ ಇನ್

0

ಬೆಂಗಳೂರು, ಡಿಸೆಂಬರ್ 13: ಗುಜರಾತ್ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮತ್ತು ಆಲ್ರೌಂಡರ್ ಕೆ.ಗೌತಮ್ ತಂಡಕ್ಕೆ ಮರಳಿದ್ದಾರೆ.

ಆದರೆ ಕೈಬೆರಳಿನ ಗಾಯಕ್ಕೊಳಗಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕರುಣ್ ನಾಯರ್ ಅವರ ಸೇವೆ ತಂಡಕ್ಕೆ ಲಭ್ಯವಿಲ್ಲ. ರಾಜ್ ಕೋಟ್ ನಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಕರುಣ್ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಕರುಣ್ ನಾಯರ್ 2 ವಾರಗಳ ವಿಶ್ರಾಂತಿ ಪಡೆಯಲಿದ್ದು, ಗಾಯದಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಮರಳಲಿದ್ದಾರೆ. ಉಳಿದಂತೆ ಸೌರಾಷ್ಟ್ರ ವಿರುದ್ಧ ಆಡಿದ ತಂಡವನ್ನೇ ಗುಜರಾತ್ ವಿರುದ್ಧದ ಪಂದ್ಯಕ್ಕೂ ಉಳಿಸಿಕೊಳ್ಳಲಾಗಿದೆ. ಈ ಪಂದ್ಯ ಶುಕ್ರವಾರ ಸೂರತ್ ನಲ್ಲಿ ಆರಂಭವಾಗಲಿದೆ.

ಮಯಾಂಕ್ ಅಗರ್ವಾಲ್ ಮತ್ತು ಕೆ.ಗೌತಮ್ ನ್ಯೂಜಿಲೆಂಡ್ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿದ್ದ ಕಾರಣ ಪ್ರಸಕ್ತ ಸಾಲಿನ ರಣಜಿ ಟೂರ್ನಿ ಮೊದಲ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಎಲೈಟ್ ಗುಂಪಿನಲ್ಲಿ ಆಡಿರುವ 4 ಪಂದ್ಯಗಳಿಂದ ಕರ್ನಾಟಕ ತಂಡ ಒಂದು ಗೆಲುವು, ಒಂದು ಸೋಲು, ಎರಡು ಡ್ರಾಗಳೊಂದಿಗೆ 12 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಗುಜರಾತ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ: ಆರ್.ವಿನಯ್ ಕುಮಾರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಡಿ.ನಿಶ್ಚಲ್, ಕೆ.ವಿ ಸಿದ್ಧಾರ್ಥ್, ಪವನ್ ದೇಶಪಾಂಡೆ, ಬಿ.ಆರ್ ಶರತ್ (ವಿಕೆಟ್ ಕೀಪರ್), ಜೆ.ಸುಚಿತ್, ಕೆ.ಗೌತಮ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ದೇವದತ್ತ್ ಪಡಿಕಲ್, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಪ್ರತೀಕ್ ಜೈನ್.

LEAVE A REPLY

Please enter your comment!
Please enter your name here

three + eleven =