ರಣಜಿ ಟ್ರೋಫಿ: ಗುಜರಾತ್ 216ಕ್ಕೆ ಆಲೌಟ್, ಕರ್ನಾಟಕ 45/2

0
PC: Facebook

ಸೂರತ್, ಡಿಸೆಂಬರ್ 14: ಬೌಲಿಂಗ್ ಪಡೆ ತೋರಿದ ಸಂಘಟಿತ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ, ಗುಜರಾತ್ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯರನ್ನು 216 ರನ್ ಗಳಿಗೆ ಕಟ್ಟಿ ಹಾಕಿದೆ.

ಲಾಲ್ ಭಾಯ್ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ ಮೊದಲ ದಿನವಾದ ಶುಕ್ರವಾರ ಟಾಸ್ ಗೆದ್ದ ಆತಿಥೇಯ ಗುಜರಾತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಪ್ರಿಯಾಂಕ್ ಪಾಂಚಾಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಕಥಮ್ ಪಟೇಲ್(13) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಆಫ್ ಸ್ಪಿನ್ನರ್ ಕೆ.ಗೌತಮ್ ಕರ್ನಾಟಕಕ್ಕೆ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭಾರ್ಗವ್ ಮೆರಾಯ್(4) ಅವರನ್ನು ನಾಯಕ ಆರ್.ವಿನಯ್ ಕುಮಾರ್ ಪೆವಿಲಿಯನ್ ಗಟ್ಟಿದರೆ, ರುಜುಲ್ ಭಟ್(12), ವೇಗಿ ರೋನಿತ್ ಮೋರೆಗೆ ಬಲಿಯಾದರು. ಮನ್ಪ್ರೀತ್ ಜುನೇಜಾ(15) ವಿಕೆಟ್ ಪಡೆದ ಎಡಗೈ ವೇಗಿ ಪ್ರತೀಕ್ ಜೈನ್ ಕರ್ನಾಟಕದ ಮೇಲುಗೈಗೆ ಕಾರಣರಾದರು. ಕರ್ನಾಟಕದ ಸಂಘಟಿತ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 149 ರನ್ನಿಗೆ 7 ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ಗೆ ನಾಯಕ ಪ್ರಿಯಾಂಕ್ ಪಾಂಚಾಲ್(74) ಮತ್ತು ಪಿಯೂಷ್ ಚಾವ್ಲಾ(34) ಆಸರೆಯಾದರು. ಆದರೆ ಇವರಿಬ್ಬರು ಔಟಾಗುತ್ತಿದ್ದಂತೆ ಕುಸಿದ ಗುಜರಾತ್ 216 ರನ್ನಿಗೆ ಆಲೌಟಾಯಿತು.

ಕರ್ನಾಟಕ ಪರ ನಾಯಕ ಆರ್.ವಿನಯ್ ಕುಮಾರ್(3/32), ಪ್ರತೀಕ್ ಜೈನ್(2/28), ರೋನಿತ್ ಮೋರೆ, (2/63), ಕೆ.ಗೌತಮ್(2/58) ಮತ್ತು ಶ್ರೇಯಸ್ ಗೋಪಾಲ್(2/21) ತಲಾ ಎರಡು ವಿಕೆಟ್ ಉರುಳಿಸಿದರು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿದೆ. ಆರಂಭಿಕರಾದ ಮಯಾಂಕ್ ಅಗರ್ವಾಲ್(25) ಮತ್ತು ಡಿ.ನಿಶ್ಚಲ್(12) ಔಟಾಗಿದ್ದಾರೆ.

ಈ ಪಂದ್ಯದ ಮೂಲಕ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಮತ್ತು ಪ್ರತೀಕ್ ಜೈನ್ ರಣಜಿ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ವೇಗಿ ಅಭಿಮನ್ಯು ಮಿಥುನ್ ಗಾಯಗೊಂಡಿದ್ದರಿಂದ ಪ್ರತೀಕ್ ಜೈನ್ ಸ್ಥಾನ ಪಡೆದರೆ, ಬಿ.ಆರ್ ಶರತ್ ಅವರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಶರತ್ ಶ್ರೀನಿವಾಸ್ ಆಡುವ ಬಳಗದಲ್ಲಿ ಕಾಣಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಗುಜರಾತ್: 69.4 ಓವರ್ ಗಳಲ್ಲಿ 216ಕ್ಕೆ ಆಲೌಟ್ (ಪ್ರಿಯಾಂಕ್ ಪಾಂಚಾಲ್ 74, ಪಿಯೂಷ್ ಚಾವ್ಲಾ 34; ಆರ್.ವಿನಯ್ ಕುಮಾರ್3/32, ಪ್ರತೀಕ್ ಜೈನ್2/28, ರೋನಿತ್ ಮೋರೆ 2/63 ಕೆ.ಗೌತಮ್ 2/58 ಶ್ರೇಯಸ್ ಗೋಪಾಲ್ 2/21).

ಕರ್ನಾಟಕ: 14.5 ಓವರ್ ಗಳಲ್ಲಿ 45/2 (ಮಯಾಂಕ್ ಅಗರ್ವಾಲ್ 25, ಡಿ.ನಿಶ್ಚಲ್ 12, ಆರ್.ಸಮರ್ಥ್ ಔಟಾಗದೆ 7; ನಾಗಸ್ವಾಲಾ 1/9).

 

LEAVE A REPLY

Please enter your comment!
Please enter your name here

one × 3 =