ರಣಜಿ ಟ್ರೋಫಿ: ನಮ್ಮವರೇ ನಮಗೆ ಕೈಕೊಟ್ಟರು..!

0

ಬೆಂಗಳೂರು, ಜನವರಿ 30: ಕರ್ನಾಟಕ ತಂಡ ದೇಶೀಯ ಕ್ರಿಕೆಟ್ ನಲ್ಲಿ ಅತ್ಯಂತ ಬಲಿಷ್ಠ, ಸಮತೋಲಿತ ತಂಡ. ಭಾರತವನ್ನು ಪ್ರತಿನಿಧಿಸಿದ ಸ್ಟಾರ್ ಆಟಗಾರರ ದಂಡೇ ಕರ್ನಾಟಕ ತಂಡದಲ್ಲಿದೆ. ಆದರೆ ಸತತ 2ನೇ ಬಾರಿಯೂ ಕರ್ನಾಟಕ ತಂಡ ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಮುಗ್ಗರಿಸಿದೆ.

ಒಂದು ತಂಡ ರಣಜಿ ಟ್ರೋಫಿ ಗೆಲ್ಲಬೇಕಾದರೆ ಅಗ್ರ ಕ್ರಮಾಂಕದ ಆಟಗಾರರಲ್ಲಿ ಕನಿಷ್ಠ ಒಬ್ಬನಾದರೂ ಸರಿ ಸುಮಾರು ಸಾವಿರ ರನ್ ಗಳಿಸಬೇಕು. ಇದಕ್ಕೆ ಕರ್ನಾಟಕವನ್ನೇ ಉದಾಹರಣೆಯಾಗಿ ನೀಡುವುದಾದರೆ, ಕರ್ನಾಟಕ ತಂಡ 2013-14ನೇ ಸಾಲಿನಲ್ಲಿ ರಣಜಿ ಟ್ರೋಫಿ ಗೆದ್ದಾಗ ಕೆ.ಎಲ್ ರಾಹುಲ್ ಸಾವಿರಕ್ಕೂ ಹೆಚ್ಚು ರನ್(1033) ಗಳಿಸಿದ್ದರು. 2014-15ನೇ ಸಾಲಿನಲ್ಲಿ ಕರ್ನಾಟಕ ಸತತ 2ನೇ ಬಾರಿ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಾಗ ರಾಬಿನ್ ಉತ್ತಪ್ಪ 912 ರನ್ ಕಲೆ ಹಾಕಿದ್ದರು. ಆ ಸಾಲಿನಲ್ಲಿ 5 ಪಂದ್ಯಗಳನ್ನಾಡಿದ್ದ ರಾಹುಲ್ 838 ರನ್ ಗಳಿಸಿ ಕರ್ನಾಟಕ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು. 

ನಂತರದ ವರ್ಷಗಳಲ್ಲಿ ಅಂದರೆ 2015-16, 2016-17 ಸಾಲಿನಲ್ಲಿ ಕರ್ನಾಟಕ ಪರ ಯಾರೂ ಕೂಡ ಕನಿಷ್ಠ 800 ರನ್ ಗಡಿಯನ್ನೂ ಮುಟ್ಟಲಿಲ್ಲ. ಇದರಿಂದಾಗಿ ಪ್ರಶಸ್ತಿ ಕೂಡ ದೂರವೇ ಉಳಿಯಿತು. ಮತ್ತು 2017-18ನೇ ಸಾಲಿನಲ್ಲಿ ಮಯಾಂಕ್ ಅಗರ್ವಾಲ್ 1160 ರನ್ ಗಳಿಸಿದರಾದರೂ ನಾಕೌಟ್ ಪಂದ್ಯಗಳಲ್ಲಿ ಮಯಾಂಕ್ ಸಂಪೂರ್ಣವಾಗಿ ವಿಫಲರಾಗಿದ್ದು ಕರ್ನಾಟಕಕ್ಕೆ ಹೊಡೆತ ನೀಡಿತ್ತು. ಹೀಗಾಗಿ ಸೆಮಿಫೈನಲ್ ಹಂತದಲ್ಲೇ ಕರ್ನಾಟಕದ ಅಭಿಯಾನ ಅಂತ್ಯಗೊಂಡಿತ್ತು.

2018-19ನೇ ಸಾಲಿನಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿರುವುದು ಈ ಬಾರಿ ರಣಜಿ ಟ್ರೋಫಿಗೆ ಕಾಲಿಟ್ಟ ಕೆ.ವಿ ಸಿದ್ಧಾರ್ಥ್. ಬಲಗೈ ಬ್ಯಾಟ್ಸ್ ಮನ್ ಸಿದ್ಧಾರ್ಥ್ 10 ಪಂದ್ಯಗಳಲ್ಲಿ 42.82ರ ಸರಾಸರಿಯಲ್ಲಿ 2 ಶತಕಗಳ ಸಹಿತ 728 ರನ್ ಗಳಿಸಿದ್ದಾರೆ.

ಕರ್ನಾಟಕಕ್ಕೆ ಈ ಬಾರಿ ಹಿನ್ನಡೆಯಾಗಿ ಪರಿಣಮಿಸಿರುವುದು ಆರಂಭಿಕ ಬ್ಯಾಟ್ಸ್ ಮನ್ ಆರ್.ಸಮರ್ಥ್ ಅವರ ದಯನೀಯ ವೈಫಲ್ಯ. ಭಾರತ ‘ಎ’ ತಂಡದ ಪರ ಆಡಿದ ಅನುಭವ ಹೊಂದಿರುವ ಸಮರ್ಥ್ 7 ಪಂದ್ಯಗಳಿಂದ ಕೇವಲ 12.92ರ ಸರಾಸರಿಯಲ್ಲಿ 168 ರನ್ ಮಾತ್ರ ಗಳಿಸಿದ್ದಾರೆ. ಒಬ್ಬ ನಂಬಿಕಸ್ಥ ಆರಂಭಿಕ ಆಟಗಾರನಿಂದ ಕರ್ನಾಟಕ ತಂಡ ಕನಸಿನಲ್ಲಿಯೂ ಇಂತಹ ಆಟವನ್ನು ನಿರೀಕ್ಷಿಸಿರಲಿಲ್ಲ. ಸಮರ್ಥ್ ವೈಫಲ್ಯ ಕರ್ನಾಟಕಕ್ಕೆ ಭಾರೀ ಹೊಡೆತ ನೀಡಿದೆ.

ಇನ್ನು ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ನೋಡುವುದಾದರೆ ಅನುಭವಿ ಬ್ಯಾಟ್ಸ್ ಮನ್ ಗಳಾದ ಮಯಾಂಕ್ ಅಗರ್ವಾಲ್, ಆರ್.ಸಮರ್ಥ್ ಮತ್ತು ಕರುಣ್ ನಾಯರ್ ಮೂವರೂ ಸೇರಿ ತಮ್ಮ ಒಟ್ಟು ಆರು ಇನ್ನಿಂಗ್ಸ್ ಗಳಲ್ಲಿ ಗಳಿಸಿರುವುದು ಕೇವಲ 77 ರನ್. ಮಹತ್ವದ ಪಂದ್ಯದಲ್ಲಿ ಕರ್ನಾಟಕದ ಕೈ ಹಿಡಿಯಬೇಕಿದ್ದ ಸಮರ್ಥ್(0, 5), ಮಯಾಂಕ್ ಅಗರ್ವಾಲ್(2, 46) ಮತ್ತು ಕರುಣ್ ನಾಯರ್(9, 15)  ಪರ ಯಾರೊಬ್ಬರೂ ಸೌರಾಷ್ಟ್ರ ವಿರುದ್ಧ ಅರ್ಧಶತಕವನ್ನೂ ಬಾರಿಸಲಿಲ್ಲ. 

ಸೆಮಿಫೈನಲ್ ಪಂದ್ಯದಲ್ಲಿ ಬರೋಡದ ಅಂಪೈರ್ ಸೈಯದ್ ಖಾಲಿದ್ ಹುಸೇನ್ ಅವರ ಕೊಡುಗೆಯೂ ಸೌರಾಷ್ಟ್ರ ಗೆಲುವಿನಲ್ಲಿ ಪ್ರಮಿಖ ಪಾತ್ರ ವಹಿಸಿಸತ್ತು ಎಂಬುದು ನಿಜ. 2ನೇ ಇನ್ನಿಂಗ್ಸ್ ನಲ್ಲಿ ಅಜೇಯ 131 ರನ್ ಗಳಿಸಿ ಸೌರಾಷ್ಟ್ರವನ್ನು ಗೆಲ್ಲಿಸಿದ ಚೇತೇಶ್ವರ್ ಪೂಜಾರ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ದೊಡ್ಡ ಮೊತ್ತ ಗಳಿಸುವ ಮುನ್ನವೇ ಔಟಾಗಿದ್ದರು. ಆದರೆ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಅಷ್ಟೇ ಅಲ್ಲದೆ ಸೌರಾಷ್ಟ್ರದ ಮತ್ತೊಬ್ಬ ಶತಕವೀರ ಶೆಲ್ಡನ್ ಜಾಕ್ಸನ್ ಅವರಿಗೂ ಅಂಪೈರ್ ಜೀವದಾನ ನೀಡಿದ್ದರು.

ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಪೂಜಾರ ಮತ್ತು ಜಾಕ್ಸನ್ ಗೆ ಜೀವದಾನ ನೀಡಿದಂತೆ ಮಯಾಂಕ್ ಮತ್ತು ಕರುಣ್ ಅವರಿಗೂ ಅಂಪೈರ್ಸ್ ಜೀವದಾನ ನೀಡಿದ್ದರು. ಎರಡು ತಂಡಗಳ ನಡುವಿನ ದೊಡ್ಡ ವ್ಯತ್ಯಾಸ ಅಂದ್ರೆ ಅಂಪೈರ್ ಗಳಿಂದ ಜೀವದಾನ ಪಡೆದ ಪೂಜಾರ ಮತ್ತು ಜಾಕ್ಸನ್ ಶತಕಗಳನ್ನು ಬಾರಿಸಿ ಸೌರಾಷ್ಟ್ರಕ್ಕೆ ಪಂದ್ಯ ಗೆದ್ದುಕೊಟ್ಟರು. ಆದರೆ ಅಂಪೈರ್ ಗಳು ನೀಡಿದ ಜೀವದಾನವನ್ನು ಬಳಸಿಕೊಳ್ಳುವಲ್ಲಿ ಮಯಾಂಕ್ ಮತ್ತು ಕರುಣ್ ವಿಫಲರಾದರು. ಇದು ಕರ್ನಾಟಕದ ಸೋಲಿಗೆ ಕಾರಣವಾಯಿತು. 

LEAVE A REPLY

Please enter your comment!
Please enter your name here

three × 5 =