ರಣಜಿ ಟ್ರೋಫಿ: ನಾಳೆಯಿಂದ ಕರ್ನಾಟಕಕಕ್ಕೆ ಮುಂಬೈ ಸವಾಲು

0
Karnataka captain Vinay Kumar. File Photo

ಬೆಳಗಾವಿ, ನವೆಂಬರ್ 19: 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ 41 ಬಾರಿಯ ಚಾಂಪಿಯನ್ಸ್ ಮುಂಬೈ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ನಾಳೆ ಬೆಳಗಾವಿಯಲ್ಲಿ ಆರಂಭವಾಗಲಿದೆ.

ಈಗಾಗಲೇ ಎಲೈಟ್ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ವಿದರ್ಭ ವಿರುದ್ಧ ಡ್ರಾ ಸಾಧಿಸಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿತ್ತು. ಮತ್ತೊಂದೆಡೆ ಮುಂಬೈ ತಂಡ ರೈಲ್ವೇಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿ 3 ಅಂಕ ಪಡೆದಿದೆ. ಇದೀಗ ಮುಂಬೈ ವಿರುದ್ಧ ಆರ್.ವಿನಯ್ ಕುಮಾರ್ ಬಳಗ ಗೆಲುವನ್ನು ಎದುರು ನೋಡುತ್ತಿದೆ.

ಅನುಭವಿ ಬ್ಯಾಟ್ಸ್ ಮನ್ ಗಳಾದ ಆರ್.ಸಮರ್ಥ್ ಮತ್ತು ಕರುಣ್ ನಾಯರ್ ನ್ಯೂಜಿಲೆಂಡ್ ‘ಎ’ ವಿರುದ್ಧದ ಟೆಸ್ಟ್ ಸರಣಿಗಾಗಿ ಕಿವೀಸ್ ನಾಡಿಗೆ ಪ್ರಯಾಣ ಬೆಳೆಸಿದ್ದು, ಈ ಪಂದ್ಯಕ್ಕೆ ಇಬ್ಬರೂ ಅಲಭ್ಯರಾಗಿದ್ದಾರೆ. ಇವರ ಬದಲು ಮಿರ್ ಕೌನೇನ್ ಅಬ್ಬಾಸ್ ಮತ್ತು ಲಿಯಾನ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೊದಲ ಪಂದ್ಯಕ್ಕೆ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ ಮತ್ತು ಆಲ್ರೌಂಡರ್ ಕೆ.ಗೌತಮ್ ಅಲಭ್ಯರಾಗಿದ್ದು, ಈಗ ಕರುಣ್ ಮತ್ತು ಸಮರ್ಥ್ ಸೇವೆಯೂ ತಂಡಕ್ಕೆ ಲಭ್ಯವಿಲ್ಲ. ಹೀಗಾಗಿ ಅನುಭವಿಗಳ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.

ವಿದರ್ಭ ವಿರುದ್ಧ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆ.ವಿ ಸಿದ್ದಾರ್ಥ್, ವಿದರ್ಭ ವಿರುದ್ಧ ಭರ್ಜರಿ ಶತಕಗಳನ್ನು ದಾಖಲಿಸಿದ್ದ ವಿಕೆಟ್ ಕೀಪರ್ ಬಿ.ಆರ್ ಶರತ್, ಡಿ.ನಿಶ್ಚಲ್, ಪವನ್ ದೇಶಪಾಂಡೆ, ಅಬ್ಬಾಸ್, ಅನುಭವಿ ಆಲ್ರೌಂಡರ್ ಗಳಾದ ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ನಾಯಕ ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ವಿದರ್ಭ ವಿರುದ್ಧ 9 ವಿಕೆಟ್ ಪಡೆದಿದ್ದ ಎಡಗೈ ಸ್ಪಿನ್ನರ್ ಜೆ.ಸುಚಿತ್ ತಂಡಕ್ಕೆ ನೆರವಾಗಲಿದ್ದಾರೆ.

ಮತ್ತೊಂದೆಡೆ ಮುಂಬೈ ತಂಡವೂ ಪ್ರಮುಖ ಆಟಗಾರರ ಸೇವೆಯಿಂದ ವಂಚಿತವಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ‘ಎ’ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನಾಡಿ ಆಸ್ಟ್ರೇಲಿಯಾಗೆ ತೆರಳಿರುವ ಪೃಥ್ವಿ ಶಾ, ಅಜಿಂಕ್ಯ ರಹಾನೆ ಅವರ ಬಲವಿಲ್ಲದೆ ಕರ್ನಾಟಕ ವಿರುದ್ಧ ಮುಂಬೈ ಕಣಕ್ಕಿಳಿಯಬೇಕಿದೆ.

ತಂಡಗಳ ವಿವರ:

ಕರ್ನಾಟಕ: ಆರ್.ವಿನಯ್ ಕುಮಾರ್ (ನಾಯಕ), ಡಿ.ನಿಶ್ಚಲ್, ಮಿರ್ ಕೌನೇನ್ ಅಬ್ಬಾಸ್, ಕೆ.ವಿ ಸಿದ್ದಾರ್ಥ್, ಪವನ್ ದೇಶಪಾಂಡೆ, ಸ್ಟುವರ್ಟ್ ಬಿನ್ನಿ, ಬಿ.ಆರ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಜೆ.ಸುಚಿತ್, ಅಭಿಮನ್ಯು ಮಿಥುನ್, ಎಂ.ಪ್ರಸಿದ್ಧ್ ಕೃಷ್ಣ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶಿಶಿರ್ ಭವಾನೆ, ಲಿಯಾನ್ ಖಾನ್, ರೋನಿತ್ ಮೋರೆ.

ಮುಂಬೈ: ಧವಳ್ ಕುಲಕರ್ಣಿ (ನಾಯಕ), ಅಖಿಲ್ ಹೆರ್ವಾಡ್ಕರ್, ಜೈ ಬಿಸ್ಟಾ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಆದಿತ್ಯ ತಾರೆ (ವಿಕೆಟ್ ಕೀಪರ್), ಶಿವಂ ದುಬೆ, ರಾಯ್ಸ್ ಟನ್ ಡಯಾಸ್, ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ, ಯಶಸ್ವಿ ಜೈಸ್ವಾಲ್, ಎಕ್ನಾಥ್ ಕೇರ್ಕರ್, ಕರ್ಷ್ ಕೊಠಾರಿ, ಆಕಾಶ್ ಪಾರ್ಕರ್, ಆಶಯ್ ಸರ್ದೇಸಾಯಿ.

LEAVE A REPLY

Please enter your comment!
Please enter your name here

6 − two =