ರಣಜಿ ಟ್ರೋಫಿ: ನಿಶ್ಚಲ್ ಶತಕ, ರೈಲ್ವೇಸ್ ವಿರುದ್ಧ ಜಯದತ್ತ ಕರ್ನಾಟಕ

0

ಶಿವಮೊಗ್ಗ, ಡಿಸೆಂಬರ್ 24: ಆತಿಥೇಯ ಕರ್ನಾಟಕ ತಂಡದ ರೈಲ್ವೇಸ್ ವಿರುದ್ಧ ಶಿವಮೊಗ್ಗದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಎಲೈಟ್ ‘ಎ’ ಗುಂಪಿನ ತನ್ನ 6ನೇ ಲೀಗ್ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಯುವ ಓಪನರ್ ಡಿ.ನಿಶ್ಚಲ್(101) ಅವರ ಶತಕ ಮತ್ತು ಕೆ.ವಿ ಸಿದ್ಧಾರ್ಥ್(ಅಜೇಯ 84) ಅವರ ಸತತ 2ನೇ ಅರ್ಧಶತಕದ ನೆರವಿನಿಂದ ಆತಿಥೇಯ ತಂಡ 6 ಪೂರ್ಣ ಅಂಕ ಗಳಿಸುವ ಹಾದಿಯಲ್ಲಿದೆ.
ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಂದ 3ನೇ ದಿನದಾಟ ಮುಂದುವರಿಸಿದ ಕರ್ನಾಟಕ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. 2ನೇ ದಿನದಂತ್ಯಕ್ಕೆ ಅಜೇಯ 11 ರನ್ ಗಳಿಸಿದ್ದ ದೇವದತ್ ಪಡಿಕಲ್ ಮತ್ತು ಅಜೇಯ 25 ರನ್ ಗಳಿಸಿದ್ದ ಡಿ.ನಿಶ್ಚಲ್ 3ನೇ ದಿನ ಆಟ ಮುಂದುವರಿಸಿ ಪ್ರಥಮ ವಿಕೆಟ್ ಗೆ 150 ರನ್ ಗಳ ಅಮೋಘ ಜೊತೆಯಾಟವಾಡಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನವಿತ್ತ ಎಡಗೈ ಓಪನರ್ ದೇವದತ್ 159 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 75 ರನ್ನಿಗೆ ಔಟಾಗುವ ಮೂಲಕ ಮತ್ತೊಮ್ಮೆ ಶತಕ ವಂಚಿತರಾದರು. 19 ವರ್ಷದ ಪಡಿಕಲ್ ಪ್ರಸಕ್ತ ರಣಜಿ ಟ್ರೋಫಿಯಲ್ಲಿ 70ರ ಆಸುಪಾಸಿನಲ್ಲಿ ಔಟಾಗುತ್ತಿರುವುದು ಇದು ಮೂರನೇ ಬಾರಿ.
ಮತ್ತೊಂದೆಡೆ ತಾಳ್ಮೆಯ ಆಟವಾಡಿದ ಬಲಗೈ ಬ್ಯಾಟ್ಸ್ ಮನ್ ನಿಶ್ಚಲ್ ರಣಜಿ ವೃತ್ತಿಜೀವನದ 3ನೇ ಶತಕದೊಂದಿಗೆ ಮಿಂಚಿದರು. 232 ಎಸೆತಗಳನ್ನೆದುರಿಸಿದ ನಿಶ್ಚಲ್ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಶತಕ ಗಳಿಸಿದ ಬೆನ್ನಲ್ಲೇ ಔಟಾದರು. ಆದರೆ ಔಟಾಗುವ ಮುನ್ನ ಸಿದ್ಧಾರ್ಥ್ ಜೊತೆ 2ನೇ ವಿಕೆಟ್ ಗೆ 94 ರನ್ ಸೇರಿಸಿದರು.
ಪ್ರಥಮ ಇನ್ನಿಂಗ್ಸ್ ನಲ್ಲಿ ಅತ್ಯಮೂಲ್ಯ 69 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ಸಿದ್ಧಾರ್ಥ್ ಮತ್ತೊಮ್ಮೆ ಜವಾಬ್ದಾರಿ ಪ್ರದರ್ಶಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ್ದ ಸಿದ್ಧಾರ್ಥ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಅವಶ್ಯಕತೆಗೆ ತಕ್ಕಂತೆ ಬಿರುಸಿನ ಆಟವಾಡಿ 86 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಅಮೋಘ ಸಿಕ್ಸರ್ಸ್ ನೆರವಿನಿಂದ 84 ರನ್ ಗಳಿಸಿ ಅಜೇಯರಾಗುಳಿದರು. ಕರ್ನಾಟಕ ತಂಡ ಇನ್ನಿಂಗ್ಸ್ ಘೋಷಿಸಿದ್ದರಿಂದ ರಣಜಿ ವೃತ್ತಿಜೀವನದ 2ನೇ ಶತಕದಿಂದ ಸಿದ್ಧಾರ್ಥ್ ವಂಚಿತರಾದರು.
ನಂತರ 391 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ರೈಲ್ವೇಸ್ 3ನೇ ದಿನದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿದ್ದು, ಗೆಲುವಿನಾಗಿ ಅಂತಿಮ ದಿನ ಉಳಿದಿರುವ 9 ವಿಕೆಟ್ ಗಳ ಇನ್ನೂ 318 ರನ್ ಗಳಿಸಬೇಕಿದೆ. ಆದರೆ ಇದು ಅಸಾಧ್ಯವಾಗಿರುವ ಕಾರಣ ಕರ್ನಾಟಕದ ಗೆಲುವು ಖಚಿತವಾಗಿದೆ.

Brief scores
Karnataka: 214 & 290/2 declared in 84 overs (Devdutt Padikkal 75, D Nischal 101, KV SIddharth 84 not out, Manish Pandey 18 not out; Harsh Tyagi 2/78) Vs Railways: 143 & 44/1 in 16 overs (Saurabh Wakaskar 20, Nithin Bhille 16 not out; M Prasidh Krishna 1/4).

LEAVE A REPLY

Please enter your comment!
Please enter your name here

five × 2 =