ರಣಜಿ ಟ್ರೋಫಿ: ರೋನಿತ್ ದಾಳಿಗೆ ಕುಸಿದ ಮುಂಬೈ, ಫಾಲೋ ಆನ್ ಹೇರದ ಕರ್ನಾಟಕ

0
Ronit More. PC: Facebook

ಬೆಳಗಾವಿ, ನವೆಂಬರ್ 22: ಲೋಕಲ್ ಎಕ್ಸ್ ಪ್ರೆಸ್ ರೋನಿತ್ ಮೋರೆ (5/52) ಅವರ ಮಾರಕ ಬೌಲಿಂಗ್ ದಾಳಿಯ ಬಲದಿಂದ 41 ಬಾರಿಯ ಚಾಂಪಿಯನ್ಸ್ ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳ ಭಾರೀ ಮುನ್ನಡೆ ಪಡೆದ ಕರ್ನಾಟಕ ಪಂದ್ಯದಲ್ಲಿ ಕನಿಷ್ಠ 3 ಅಂಕಗಳನ್ನು ಖಚಿತ ಪಡಿಸಿಕೊಂಡಿದೆ.

ಇಲ್ಲಿನ ಕೆಎಸ್ ಸಿಎ ಮೈದಾನದಲ್ಲಿ ನಡೆಯುತ್ತಿರುವ ಎಲೈಟ್ ‘ಎ’ ಗುಂಪಿನ ಪಂದ್ಯದ 3ನೇ ದಿನ ಬೆಳಗಾವಿ ಎಕ್ಸ್ ಪ್ರೆಸ್ ರೋನಿತ್ ಮೋರೆ ಭರ್ಜರಿ ದಾಳಿ ಸಂಘಟಿಸಿ ಮುಂಬೈ ತಂಡವನ್ನು ಬೆಚ್ಚಿ ಬೀಳಿಸಿದರು. 2 ವಿಕೆಟ್ ಗೆ 99 ರನ್ ಗಳಿಂದ ತನ್ನ ಪ್ರಥಮ ಇನ್ನಿಂಗ್ಸ್ ಮುಂದುವರಿಸಿದ ಮುಂಬೈ ರೋನಿತ್ ದಾಳಿಗೆ ತತ್ತರಿಸಿ 205 ರನ್ ಗಳಿಗೆ ಆಲೌಟಾಯಿತು. ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಜೇ ಬಿಸ್ಟಾ (70) ಹೊರತು ಪಡಿಸಿದರೆ, ಬೇರೆ ಯಾವ ಬ್ಯಾಟ್ಸ್ ಮನ್ ಕೂಡ 50ರ ಗಡಿ ಮುಟ್ಟಲಿಲ್ಲ. ಪ್ರಸಕ್ತ ಸಾಲಿನಲ್ಲಿ ಮೊದಲ ಪಂದ್ಯವಾಡಿದ ಬಲಗೈ ವೇಗಿ ರೋನಿತ್ ಮೋರೆ 52 ರನ್ನಿತ್ತು ಮುಂಬೈನ ಪ್ರಮುಖ 5 ವಿಕೆಟ್ ಉರುಳಿಸಿದರು. ಯುವ ವೇಗಿ ಎಂ.ಪ್ರಸಿದ್ಧ್ ಕೃಷ್ಣ (2/33) ಮತ್ತು ಹಂಗಾಮಿ ನಾಯಕ ಶ್ರೇಯಸ್ ಗೋಪಾಲ್ (2/31) ತಲಾ ಎರಡು ವಿಕೆಟ್ ಪಡೆದರೆ, ಅನುಭವಿ ವೇಗಿ ಅಭಿಮನ್ಯು ಮಿಥುನ್ (1/49) ಒಂದು ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್ ನಲ್ಲಿ 195 ರನ್ ಗಳ ದೊಡ್ಡ ಮುನ್ನಡೆ ಪಡೆದ ಕರ್ನಾಟಕ, ಎದುರಾಳಿಗೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ಫಾಲೋ ಆನ್ ಹೇರಲಿಲ್ಲ. ವೇಗದ ಬೌಲರ್ ಗಳ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂಬೈಗೆ ಫಾಲೋ ಆನ್ ಹೇರದೆ 2ನೇ ಇನ್ನಿಂಗ್ಸ್ ಆರಂಭಿಸಿತು. ದ್ವಿತೀಯ ಇನ್ನಿಂಗ್ಸ್ ನಲ್ಲೂ ಆರಂಭಿಕರಾದ ಡಿ.ನಿಶ್ಚಲ್ (11) ಮತ್ತು ಶಿಶಿರ್ ಭವಾನೆ (5) ಅಲ್ಪ ಮೊತ್ತಕ್ಕ ಔಟಾದರೆ, ಪ್ರಥಮ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದ ಮಿರ್ ಕೌನೇನ್ ಅಬ್ಬಾಸ್ 25 ರನ್ ಗಳಿಸಿ ಔಟಾದರು. ಆದರೆ ಮೊದಲ ಇನ್ನಿಂಗ್ಸ್ ನ ಶತಕವೀರ ಕೆ.ವಿ ಸಿದ್ದಾರ್ಥ್ ಮತ್ತೊಮ್ಮೆ ಜವಾಬ್ದಾರಿ ಪ್ರದರ್ಶಿಸಿ ಅಜೇಯ 30 ರನ್ ಗಳಿಸಿದ್ದು, ಅವರೊಂದಿಗೆ ಅನುಭವಿ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ (ಅಜೇಯ 2 ರನ್) 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಅಂತಿಮ ದಿನದಾಟದ ಮೊದಲ ಅವಧಿಯಲ್ಲಿ ಕರ್ನಾಟಕ ತಂಡ ತನ್ನ ಮೊತ್ತಕ್ಕೆ ಕನಿಷ್ಠ 100 ರನ್ ಸೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿದೆ.

Brief scores Karnataka (I innings): 400 & II innings: 81/3 in 34 overs (Kaunian Abbas 25, KV Siddharth 30 batting, Stuart Binny 2 batting) vs Mumbai (I innings, O/n 99/2): 205 all out in 85.5 overs (Jay Bista 70, Ashay Saradesai 23, Shams Mulani 34, Ronit More 5/52, Prasidh Krishna 2/33, Abhimanyu Mithun 1/49 ). Karnataka lead by 276 runs.

LEAVE A REPLY

Please enter your comment!
Please enter your name here

13 − 12 =