ರಣಜಿ ಟ್ರೋಫಿ: ವಿದರ್ಭ ವಿರುದ್ಧ ಕರ್ನಾಟಕದ ಭರ್ಜರಿ ಆರಂಭ

0
Karnataka skipper R. Vinay Kumar (left) receives a signed jersey from Raghuram Bhat in Nagpur on Monday. PC: APRAMEYAC/Twitter

ನಾಗ್ಪುರ, ನವೆಂಬರ್ 12: 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಹಾಲಿ ಚಾಂಪಿಯನ್ಸ್ ವಿದರ್ಭ ವಿರುದ್ಧ ಆರಂಭಗೊಂಡ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದೆ.

ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ(ವಿಸಿಎ) ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ವಿದರ್ಭ ತಂಡ ಮೊದಲ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿದರ್ಭ ತಂಡಕ್ಕೆ ಪೀಣ್ಯ ಎಕ್ಸ್ ಪ್ರೆಸ್ ಅಭಿಮನ್ಯು ಮಿಥುನ್ ಆರಂಭಿಕ ಆಘಾತ ನೀಡಿದರು. ವಿದರ್ಭ ನಾಯಕ ಫಯಾಜ್ ಫಜಲ್ ಮತ್ತು ಸಂಜಯ್ ರಾಮಸ್ವಾಮಿ 31 ರನ್ ಗಳಿಸುವಷ್ಟರಲ್ಲಿ ಮಿಥುನ್ ದಾಳಿಗೆ ಬಲಿಯಾದರು. ಈ ಎರಡೂ ಕ್ಯಾಚ್ ಗಳನ್ನು ಆರ್.ಸಮರ್ಥ್ ಪಡೆದರು.

3ನೇ ಕ್ರಮಾಂಕದಲ್ಲಿ ಕ್ರೀಸ್ ಗಳಿದು ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ ಅನುಭವಿ ವಸೀಂ ಜಾಫರ್ 41 ರನ್ ಗಳಿಸಿದ್ದಾಗ ಸ್ಟುವರ್ಟ್ ಬಿನ್ನಿ ದಾಳಿಯಲ್ಲಿ ಕ್ಲೀನ್ ಬೌಲ್ಡಾಗಿ ಪೆವಿಲಿಯನ್ ಸೇರಿಕೊಂಡರು.

ವಿದರ್ಭದ ಅಗ್ರ ಕ್ರಮಾಂಕದ ಮೇಲೆ ಮಿಥುನ್ ಮಾರಕವಾಗಿ ಎರಗಿದರೆ, ಮಧ್ಯಮ ಕ್ರಮಾಂಕ ಎಡಗೈ ಸ್ಪಿನ್ನರ್ ಜೆ.ಸುಚಿತ್ ದಾಳಿಗೆ ತತ್ತರಿಸಿತು. 2 ವರ್ಷಗಳ ನಂತರ ರಣಜಿ ಪಂದ್ಯವಾಡಿದ ಸುಚಿತ್, ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಗಣೇಶ್ ಸತೀಶ್ ಅವರ ವಿಕೆಟ್ ಕಬಳಿಸಿದರು. ಸುಚಿತ್ ಅವರಿಗೆ ವಿಕೆಟ್ ಒಪ್ಪಿಸುವ ಮುನ್ನ ಗಣೇಶ್ ಸತೀಶ್ ಆಕರ್ಷಕ 57 ರನ್ ಗಳಿಸಿದರು.

ನಂತರ ಅಕ್ಷಯ್ ವಾಡ್ಕರ್ ಮತ್ತು ಆದಿತ್ಯ ಸರ್ವಾಠೆ ವಿಕೆಟ್ ಪಡೆದ ಸುಚಿತ್ ಕರ್ನಾಟಕಕ್ಕೆ ಮೇಲುಗೈ ತಂದುಕೊಟ್ಟರು. ಮತ್ತೊಂದೆಡೆ ವೃತ್ತಿಜೀವನದ 100ನೇ ರಣಜಿ ಪಂದ್ಯವಾಡುತ್ತಿರುವ ನಾಯಕ ಆರ್.ವಿನಯ್ ಕುಮಾರ್, ಅಪೂರ್ವ ವಾಂಖೆಡೆ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ದಿನದಂತ್ಯಕ್ಕೆ 37 ರನ್ ಗಳಿಸಿರುವ ಶ್ರೀಕಾಂತ್ ವಾಗ್ ಅವರೊಂದಿಗೆ ಲಲಿತ್ ಯಾದವ್ ಅಜೇಯ 7 ರನ್ ಗಳಿಸಿ ಕ್ರೀಸ್ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ಪರ ವೇಗಿ ಮಿಥುನ್(3/32) ಮತ್ತು ಜೆ.ಸುಚಿತ್(3/25) ತಲಾ 3 ವಿಕೆಟ್ ಪಡೆದರೆ, ಆರ್.ವಿನಯ್ ಕುಮಾರ್(1/34) ಹಾಗೂ ಸ್ಟುವರ್ಟ್ ಬಿನ್ನಿ(1/38) ತಲಾ ಒಂದು ವಿಕೆಟ್ ಉರುಳಿಸಿದರು.

ವಿಕೆಟ್ ಕೀಪರ್ ಸಿ.ಎಂ ಗೌತಮ್ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಯುವ ವಿಕೆಟ್ ಕೀಪರ್ ಶರತ್ ಬಿ.ಆರ್ ಈ ಪಂದ್ಯದೊಂದಿಗೆ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು.

Brief scores: Vidharbha: 245/8 in 87 overs (Faiz Fazal 22, Wasim Jaffer 41, Ganesh Satish 57, Srikant Wagh 37 not out; Abhimanyu Mithun 3/32, J Suchit 3/25, R Vinay Kumar 1/34, Stuart Binny 1/38).

LEAVE A REPLY

Please enter your comment!
Please enter your name here

two + 2 =