ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

0
ಬೆಂಗಳೂರು, ಅಕ್ಟೋಬರ್ 17: ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ಶಿವಮೊಗ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿನ್ನೆ ಮುಕ್ತಾಯಗೊಂಡ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ದಕ್ಷಿಣ ಕನ್ನಡ ಜಲ್ಲೆಯನ್ನು ಪ್ರತಿನಿಧಿಸಿದ ಮೂಡಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳು ಸತತ ೧೪ನೇ ಬಾರಿ ಅವಳಿ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.
 ೬೪ ಶೈಕ್ಷಣಿಕ ಜಿಲ್ಲೆಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕರು ಫೈನಲ್ಸ್‌ನಲ್ಲಿ ಎಸ್.ಯು.ಜೆ.ಎಂ ಕಾಲೇಜು ಹರಪನಹಳ್ಳಿ, ದಾವಣಗೆರೆ ತಂಡವನ್ನು ೩೫-೨೪, ೩೫-೨೧ ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಸೆಮಿಫೈನಲ್‌ನಲ್ಲಿ ಆಳ್ವಾಸ್ ಬಾಲಕರು ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಭುವನೇಂದ್ರ ಪದವಿಪೂರ್ವ ಕಾಲೇಜಿನ ತಂಡವನ್ನು ೩೫-೩೧, ೩೫-೨೬ ನೇರ ಸೆಟ್‌ಗಳಿಂದ ಸೋಲಿಸಿತು.
 ಬಾಲಕಿಯರ ವಿಭಾಗದ ಫೈನಲ್ಸ್‌ನಲ್ಲಿ ಆಳ್ವಾಸ್ ಬಾಲಕಿಯರ ತಂಡ ತುಮಕೂರಿನ ಎಮ್‌ಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜಿನ ತಂಡನವನ್ನು ೩೫-೧೪, ೩೫-೦೭ ನೇರ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಆಳ್ವಾಸ್ ಬಾಲಕಿಯರ ತಂಡ ಹಾಸನ ಜಿಲ್ಲೆಯ ಸರಕಾರಿ ಪದವಿಪೂರ್ವ ಕಾಲೇಜು ತಂಡವನ್ನು ೩೫-೧೬, ೩೫-೧೬ ನೇರ ಸೆಟ್‌ಗಳಿಂದ ಸೋಲಿಸಿತು. ತುಮಕೂರು ಜಿಲ್ಲೆಯ ಎಮ್‌ಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜು ಸೆಮಿಫೈನಲ್‌ನಲ್ಲಿ ಸರ್ಕಾರಿ ಜೂನಿಯರ್ ಪದವಿಪೂರ್ವ ಕಾಲೇಜು ಕೆ.ಆರ್.ಪೇಟೆ ತಂಡವನ್ನು ೩೫-೩೧, ೩೨-೩೫, ೩೫-೨೯ ಅಂಕಗಳಿಂದ ಸೋಲಿಸಿ ಫೈನಲ್ ಹಂತಕ್ಕೆ ಧಾವಿಸಿತು. ಈ ಮೂಲಕ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ತಂಡ ಆಂಧ್ರಪ್ರದೇಶದ ನೆಲ್ಲೂರುನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಶಾಲಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here

eight − one =