ವಿಂಡೀಸ್ ಟೆಸ್ಟ್ ಸರಣಿಯಲ್ಲಿ ಮಯಾಂಕ್‌ಗೆ ಅವಕಾಶ ನೀಡಿ

0
PC: Mayank/Twitter

ಬೆಂಗಳೂರು, ಸೆಪ್ಟೆಂಬರ್ 27: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡದ ಆಯ್ಕೆ ಶೀಘ್ರದಲ್ಲೇ ನಡೆಯಲಿದ್ದು, ಕಳೆದೊಂದು ವರ್ಷದಲ್ಲಿ ರನ್ ಹೊಳೆಯನ್ನೇ ಹರಿಸಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ವಿಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಅಕ್ಟೋಬರ್ 4ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿದ್ದು, ಇದಕ್ಕೂ ಮುನ್ನ ಪ್ರವಾಸಿ ಪಡೆ ಶನಿವಾರ ಮತ್ತು ಭಾನುವಾರ ವಡೋದರಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಕರುಣ್ ನಾಯರ್ ನಾಯಕತ್ವದ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡದಲ್ಲಿ ಮಯಾಂಕ್ ಸ್ಥಾನ ಪಡೆದಿದ್ದು, ಟೀಮ್ ಇಂಡಿಯಾದಲ್ಲೂ ಮೊದಲ ಬಾರಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ಕಳೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದ ಡೆಲ್ಲಿ ಓಪನರ್ ಶಿಖರ್ ಧವನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟು ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಬೇಕೆಂಬ ಕೂಗು ಬಲವಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 8 ಇನ್ನಿಂಗ್ಸ್‌ಗಳಲ್ಲಿ ಶಿಖರ್ ಧವನ್, ಕೇವಲ 20.25ರ ಸರಾಸರಿಯಲ್ಲಿ 162 ರನ್ ಗಳಿಸಿದ್ದರು. 8 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಅರ್ಧಶತಕ ದಾಖಲಾಗಿರಲಿಲ್ಲ. ಹೀಗಾಗಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಶಿಖರ್ ಬದಲು ಮಯಾಂಕ್‌ಗೆ ಸ್ಥಾನ ನೀಡಬೇಕಿದೆ.

PC: Mayank Agarwal/Twitter

ವೃತ್ತಿಜೀವನದ ಅಮೋಘ ಫಾರ್ಮ್‌ನಲ್ಲಿರುವ 27 ವರ್ಷದ ಬಲಗೈ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ಕಳೆದ 11 ತಿಂಗಳಲ್ಲಿ ದೇಶೀಯ ಕ್ರಿಕೆಟ್, ಭಾರತ ‘ಎ’ ಹಾಗೂ ‘ಬಿ’ ತಂಡಗಳ ಪರ 13 ಶತಕಗಳ ಸಹಿತ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇಷ್ಟೊಂದು ರನ್‌ಗಳನ್ನು ಗಳಿಸಿದರೂ ಭಾರತ ತಂಡದಲ್ಲಿ ಮಯಾಂಕ್‌ಗೆ ಅವಕಾಶ ನೀಡದಿರುವುದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಮಧ್ಯದಲ್ಲಿ ಅನುಭವಿ ಮುರಳಿ ವಿಜಯ್ ಅವರನ್ನು ಕೈಬಿಟ್ಟು ಮುಂಬೈನ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಗೆ ಸ್ಥಾನ ನೀಡಲಾಗಿತ್ತು. ಆಗಲೂ ಮಯಾಂಕ್ ಅವಕಾಶ ವಂಚಿತರಾಗಿದ್ದರು. ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಾದರೂ ಮಯಾಂಕ್‌ಗೆ ಅವಕಾಶ ಸಿಗಲಿ ಎಂಬುದು ಕ್ರಿಕೆಟ್ ಪ್ರಿಯರ ಆಶಯವಾಗಿದೆ.

LEAVE A REPLY

Please enter your comment!
Please enter your name here

4 × 4 =