ವಿಜಯ್ ಹಜಾರೆ: ಕರ್ನಾಟಕಕ್ಕೆ ಮೊದಲ ಜಯ ತಂದ ಬೌಲರ್‌ಗಳು

0
PC: Shreyas Gopal/Facebook

ಆಲೂರು(ಬೆಂಗಳೂರು), ಸೆಪ್ಟೆಂಬರ್ 30: ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿ ಸಂಘಟಿತ ಆಟವಾಡಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ. ಇದು ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕ ಮೊದಲ ಗೆಲುವು.
ಇಲ್ಲಿನ ಕೆಎಸ್‌ಸಿಎ ಆಲೂರು(2) ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎಲೈಟ್ ಎ ಗುಂಪಿನ ತನ್ನ 5ನೇ ಲೀಗ್ ಪಂದ್ಯದಲ್ಲಿ ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ, ರಣಜಿ ಚಾಂಪಿಯನ್ ವಿದ‘ರ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ 4 ಅಂಕ ಸಂಪಾದಿಸಿತು. ಮೊದಲ ನಾಲ್ಕು ಪಂದ್ಯಗಳಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ, ಮುಂಬೈ ಮತ್ತು ಬರೋಡ ವಿರುದ್ಧ ಸೋಲುಂಡಿತ್ತು. ಗೋವಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
ವಿನಯ್ ಕುಮಾರ್ ಬದಲು ತಂಡದ ನಾಯಕತ್ವ ವಹಿಸಿದ ಮನೀಶ್ ಪಾಂಡೆ, ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯನ್ನು ಮುಗಿಸಿ ಶನಿವಾರ ಬೆಂಗಳೂರಿಗೆ ವಾಪಸ್ಸಾಗಿದ್ದರು. ಭಾನುವಾರ ತಂಡವನ್ನು ಸೇರಿಕೊಂಡ ಪಾಂಡೆ ತಮ್ಮ ಮೊದಲ ಪಂದ್ಯದಲ್ಲೇ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವಿದರ್ಭ ಕರ್ನಾಟಕದ ಮಧ್ಯಮ ವೇಗಿಗಳು ಮತ್ತು ಸ್ಪಿನ್ನರ್‌ಗಳ ಸಂಘಟಿತ ದಾಳಿಗೆ ಬೆದರಿ 36.2 ಓವರ್‌ಗಳಲ್ಲಿ 125 ರನ್‌ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಯಾಜ್ ಜಲ್ ಅನುಪಸ್ಥಿತಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿದ ಕನ್ನಡಿಗ ಗಣೇಶ್ ಸತೀಶ್ ಮಾತ್ರ ಹೋರಾಟ ಪ್ರದರ್ಶಿಸಿ 68 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದರು.
ಕರ್ನಾಟಕದ ಪರ ಬಿಗು ದಾಳಿ ಸಂಘಟಿಸಿದ ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್(3/13) ಮತ್ತು ಕೆ.ಗೌತಮ್(3/34) ತಲಾ 3 ವಿಕೆಟ್ ಉರುಳಿಸಿದರು. ಮಾಜಿ ನಾಯಕ ವಿನಯ್ 20 ರನ್ನಿತ್ತು 2 ವಿಕೆಟ್ ಪಡೆದರೆ, ಮಿಥುನ್ ಮತ್ತು ನವೀಮ್ ಎಂ.ಜಿ ತಲಾ ಒಂದು ವಿಕೆಟ್ ಕಬಳಿಸಿದರು. ವಿನಯ್ ಮತ್ತು ಮಿಥುನ್ ತಮ್ಮ ಆರಂಭಿಕ ಸ್ಪೆಲ್‌ಗಳಲ್ಲಿ ವಿದರ್ಭ ಓಪನರ್‌ಗಳನ್ನು ಪೆವಿಲಿಯನ್‌ಗಟ್ಟಿ ಕರ್ನಾಟಕಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ನೆಲೆಯೂರಲು ಅವಕಾಶ ಮಾಡಿಕೊಡದ ಗೌತಮ್ ಮತ್ತು ಶ್ರೇಯಸ್, ರಣಜಿ ಚಾಂಪಿಯನ್ನರನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಂತರ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ 32.3 ಓವರ್‌ಗಳಲ್ಲಿ 4 ವಿಕೆಟ್‌ಗೆ 129 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಜಯದ ಸವಿಯುಂಡಿತು. ಕರ್ನಾಟಕ 61 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಾಗ ಜೊತೆಗೂಡಿದ ಮಿರ್ ಕೌನೇನ್ ಅಬ್ಬಾಸ್(35*) ಮತ್ತು ಶ್ರೇಯಸ್ ಗೋಪಾಲ್(34*) ತಂಡವನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಿದರು.
ಗುರುವಾರ ನಡೆಯಲಿರುವ ತನ್ನ ಆರನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್ ತಂಡವನ್ನು ಎದುರಿಸಲಿದೆ.

Brief scores
Vidarbha: 125 all out in 36.2 overs (Ganesh Satish 50, Atharva Taide 32; Shreyal Gopal 3/13, K Gowtham 3/34, R Vinay Kumar 2/20, A Mithun 1/24, Naveen MG 1/31) lost to Karnataka: 129/4 in 32.3 overs (Naveen MG 23, Kaunain Abbas 35 not out, Shreyas Gopal 34 not out; Ravi Thakur 3/22) by six wickets.

LEAVE A REPLY

Please enter your comment!
Please enter your name here

one × 1 =