ವಿಜಯ್ ಹಜಾರೆ: ಮಹಾರಾಷ್ಟ್ರಕ್ಕೆ ಮಣಿದ ಹಾಲಿ ಚಾಂಪಿಯನ್ಸ್ ಕರ್ನಾಟಕ

0
PC: Facebook

ಬೆಂಗಳೂರು, ಸೆಪ್ಟೆಂಬರ್ 20: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕರ್ನಾಟಕದ ತಂಡದ ಅಭಿಯಾನ ಸೋಲಿನೊಂದಿಗೆ ಆರಂಭವಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಎಲೈಟ್ ‘ಎ’ ಗ್ರೂಪ್‌ನ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ, ಮಹಾರಾಷ್ಟ್ರ ವಿರುದ್ಧ ವಿ.ಜಯದೇವನ್(ವಿಜೆಡಿ) ನಿಯಮದನ್ವಯ 57 ರನ್‌ಗಳ ಸೋಲು ಕಂಡಿದೆ. ಬೌಲರ್‌ಗಳು ಅಮೋಘ ಪ್ರದರ್ಶನ ತೋರಿದರೂ, ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕರ್ನಾಟಕಕ್ಕೆ ಮುಳುವಾಯಿತು.
ತವರು ನೆಲದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಆರ್.ವಿನಯ್ ಕುಮಾರ್ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್‌ಗೆ ಇಳಿದ ಮಹಾರಾಷ್ಟ್ರ ಅಂಕಿತ್ ಬಾವ್ನೆ(104*) ಅವರ ಶತಕ ಮತ್ತು ನಾಯಕ ರಾಹುಲ್ ತ್ರಿಪಾಠಿ(70) ಅವರ ಉತ್ತಮ ಆಟದ ನೆರವಿನಿಂದ ಒಂದು ಹಂತದಲ್ಲಿ 205 ರನ್ನಿಗೆ 3 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತ್ತು.
ಆದರೆ ಕರ್ನಾಟಕದ ಬೌಲರ್‌ಗಳು ನೀಡಿದ ತಿರುಗೇಟಿನಿಂದಾಗಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಷ್ಟಕರವಲ್ಲದ ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಸೋಲಿನ ಸುಳಿಗೆ ಸಿಲುಕಿತು. 22.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದಾಗ ಮಳೆ ಸುರಿದಿದ್ದರಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಜೆಡಿ ನಿಯಮದನ್ವಯ ಮಹಾರಾಷ್ಟ್ರ 57 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಕರ್ನಾಟಕ ಪರ ರನ್ ಮಷಿನ್ ಮಯಾಂಕ್ ಅಗರ್ವಾಲ್(12), ಆರ್.ಸಮರ್ಥ್(17), ಉಪನಾಯಕ ಕರುಣ್ ನಾಯರ್(4), ಸ್ಟುವರ್ಟ್ ಬಿನ್ನಿ(0) ವಿಫಲವಾಗಿದ್ದು ಕರ್ನಾಟಕಕ್ಕೆ ಹೊಡೆತ ನೀಡಿತು. ವಿಕೆಟ್ ಕೀಪರ್ ಸಿ.ಎಂ ಗೌತಮ್(29) ಮತ್ತು ಪವನ್ ದೇಶಪಾಂಡೆ(31) ಅಲ್ಪ ಹೋರಾಟ ನಡೆಸಿದರು.
ಶುಕ್ರವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ, ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ ಅವರಿಂದ ಕೂಡಿರುವ ಮುಂಬೈ ತಂಡ ತನ್ನ ಮೊದಲ ಪಂದ್ಯದಲ್ಲಿ ಬರೋಡ ವಿರುದ್ಧ 9 ವಿಕೆಟ್‌ಗಳ ಜಯ ದಾಖಲಿಸಿದೆ.

Brief scores
Maharashtra: 245/8 in 50 overs (Ankit Bawne 104 not out, Rahul Tripati 70, Rututaj Gaikwad 32; R Vinay Kumar 2/33, M Prasidh Krishna 2/56, A Mithun 2/30, K Gowtham 2/67).
Karnataka: 107/6 in 22.4 overs (Mayank Agarwal 12, R Samarth 12, CM Gautam 29, Pavan Deshpande 31; Satyajeet Bachhav 2/19, Anupam Sanklecha 1/27, Samad Fallah 1/19).
Maharashtra won by 57 runs (VJD method)

LEAVE A REPLY

Please enter your comment!
Please enter your name here

3 × 4 =