ಶತಕ ಬಾರಿಸಿ ಆಯ್ಕೆಗಾರರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ ಮಯಾಂಕ್, ಭಾರತ ‘ಎ’ ವಿರುದ್ಧ ಭಾರತ ‘ಬಿ’ ತಂಡಕ್ಕೆ ಜಯ ತಂದ ಕನ್ನಡಿಗ

0

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿರುವ ಬಿಸಿಸಿಐ ಆಯ್ಕೆ ಸಮಿತಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಬಾರಿಸಿ ಬ್ಯಾಟ್‌ನಿಂದಲೇ ಉತ್ತರಿಸಿದ್ದಾರೆ. ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಭಾರತ ‘ಎ’ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ 124 ರನ್ ಬಾರಿಸುವ ಮೂಲಕ ಮಯಾಂಕ್, ಭಾರತ ‘ಬಿ’ ತಂಡಕ್ಕೆ 7 ವಿಕೆಟ್‌ಗಳ ಜಯ ತಂದುಕೊಟ್ಟಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ‘ಎ’ ತಂಡ ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ (4/50) ಅವರ ಬೌಲಿಂಗ್ ದಾಳಿಗೆ ಕುಸಿದು 49 ಓವರ್‌ಗಳಲ್ಲಿ 217 ರನ್‌ಗಳಿಗೆ ಆಲೌಟಾಯಿತು. ನಂತರ ಸುಲಭ ಟಾರ್ಗೆಟ್ ಚೇಸ್ ಮಾಡಿದ ಭಾರತ ‘ಬಿ’ ತಂಡ 41.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿ ಜಯ ಪಡೆಯಿತು.
2017-18ನೇ ಸಾಲಿನ ದೇಶೀಯ ಕ್ರಿಕೆಟ್‌ನಲ್ಲಿ 8 ಶತಕಗಳ ಸಹಿತ ದಾಖಲೆಯ 2141 ರನ್ ಗಳಿಸಿದ್ದ ಮಯಾಂಕ್ ಅಗರ್ವಾಲ್, ಭಾರತ ‘ಎ’ ಪರ ತಮ್ಮ ಅದ್ಭುತ ಆಟವನ್ನು ಮುಂದುವರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ‘ಎ’ ಪರ ಮೂರು ಶತಕಗಳನ್ನು ಬಾರಿಸಿದ್ದ ಮಯಾಂಕ್ (151*, 112, 112), ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ (220) ಬಾರಿಸಿದ್ದರು. ಇದೀಗ ಮತ್ತೊಂದು ಶತಕದೊಂದಿಗೆ ಮಯಾಂಕ್ ಅಗರ್ವಾಲ್ ಅಬ್ಬರಿಸಿದ್ದು, ಭಾರತ ತಂಡದ ಆಯ್ಕೆಯ ವೇಳೆ ತಮ್ಮನ್ನು ಪದೇ ಪದೇ ಕಡೆಗಣಿಸುತ್ತಿರುವ ಆಯ್ಕೆಗಾರರಿಗೆ ಆಟದಿಂದಲೇ ಉತ್ತರ ನೀಡುತ್ತಿದ್ದಾರೆ.
ಕಳೆದ ಒಂದೂವರೆ ತಿಂಗಳಲ್ಲಿ ಮಯಾಂಕ್ ಅಗರ್ವಾಲ್ ಭಾರತ ‘ಎ’ ಮತ್ತು ಭಾರತ ‘ಬಿ’ ತಂಡಗಳ ಪರ ಒಂದು ದ್ವಿಶತಕ ಸಹಿತ ಒಟ್ಟು 5 ಶತಕಗಳನ್ನು ಬಾರಿಸಿದ್ದು, 11 ಪಂದ್ಯಗಳಿಂದ 886 ರನ್‌ಗಳನ್ನು ಕಲೆ ಹಾಕಿದ್ದಾರೆ.

Brief score
India A : 217 all out in 49 overs (Ambati Rayudu 48, K Gowtham 35, Sanju Samson 32; M Prasidh Krishna 4/50, Shreyas Gopal 2/38)
India B: 218/3 in 41.1 overs (Mayank Agarwal 124, Ishan Kishan 25, Shubman Gill 42, Manish Pandey 21 not out; Khaleel Ahmed 2/33, Deepak Chahar 1/38).

LEAVE A REPLY

Please enter your comment!
Please enter your name here

4 × 1 =