ಸಿಡ್ನಿ ಟೆಸ್ಟ್ ಗೆ ರಾಹುಲ್-ಮಯಾಂಕ್ ಅಗರ್ವಾಲ್ ಓಪನರ್ಸ್..?

0

ಸಿಡ್ನಿ, ಜನವರಿ 2: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಾಳೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
4ನೇ ಟೆಸ್ಟ್ ಪಂದ್ಯಕ್ಕೆ ಭಾರತ ತನ್ನ ಅಂತಿಮ 13ರ ಬಳಗವನ್ನು ಮಂಗಳವಾರ ಪ್ರಕಟಿಸಿದ್ದು, ರಾಹುಲ್ ಹಾಗೂ ಮಯಾಂಕ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಒಂದು ವೇಳೆ ಮಯಾಂಕ್ ಮತ್ತು ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕದ ಮೊದಲ ಜೋಡಿ ಎಂಬ ದಾಖಲೆಗೆ ಪಾತ್ರವಾಗಲಿದೆ.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಎದುರಿಸಿದ್ದ ರಾಹುಲ್ ಅವರನ್ನು 3ನೇ ಟೆಸ್ಟ್ ಗೆ ಆಡುವ ಬಳಗದಿಂದ ಕೈಬಿಡಲಾಗಿತ್ತು. ರಾಹುಲ್ ಬದಲು ಸ್ಥಾನ ಪಡೆದಿದ್ದ ಮಯಾಂಕ್ ಅಗರ್ವಾಲ್ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿ ಮಿಂಚಿ ಒಟ್ಟು 118 ರನ್ (76, 42) ಗಳಿಸಿದ್ದರು. ಆದರೆ 3ನೇ ಟೆಸ್ಟ್ ನಲ್ಲಿ ಮಯಾಂಕ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಹನುಮ ವಿಹಾರಿ ಎರಡೂ ಇನ್ನಿಂಗ್ಸ್(8, 13) ವಿಫಲರಾಗಿರುವುದರಿಂದ ಮತ್ತೆ ರಾಹುಲ್ ಅವರಿಗೆ ಮಣೆ ಹಾಕುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಈ ಪಂದ್ಯದಿಂದ ಹೊರಗುಳಿದಿರುವ ಕಾರಣ ಹನುಮ ವಿಹಾರಿ ಮತ್ತೆ ಮಧ್ಯಮ ಕ್ರಮಾಂಕಕ್ಕೆ ಮರಳುವ ಸಾಧ್ಯತೆಯಿದೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-1ರಲ್ಲಿ ಮುನ್ನಡೆ ಸಾಧಿಸಿದ್ದು, ಆಸ್ಟ್ರೇಲಿಯಾದಲ್ಲಿ ಪ್ರಪ್ರಥಮ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಭಾರತದ ಮುಂದಿದೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಭಾರತದ ಅಂತಿಮ 13ರ ತಂಡ: ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ(ಉಪನಾಯಕ), ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.

LEAVE A REPLY

Please enter your comment!
Please enter your name here

two × 3 =