ಹೊಸ ಇನ್ನಿಂಗ್ಸ್‌ಗೆ ಮೈಸೂರು ಹುಡುಗ ಸುಚಿತ್ ಸಿದ್ಧ

0
PC: Facebook

ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದ ಎಡಗೈ ಸ್ಪಿನ್ನರ್, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಯುವ ಆಲ್‌ರೌಂಡರ್, ಮೈಸೂರು ಹುಡುಗ ಜೆ.ಸುಚಿತ್ ತಮ್ಮ ವೃತ್ತಿಜೀವನನದಲ್ಲಿ ಹೊಸ ಇನ್ನಿಂಗ್ಸ್‌ಗೆ ಸಜ್ಜಾಗಿದ್ದಾರೆ.
2015ರಲ್ಲಿ ಪ್ರಥಮದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 8 ಪಂದ್ಯಗಳಿಂದ 21 ವಿಕೆಟ್‌ಗಳನ್ನು ಪಡೆದಿರುವ ಸುಚಿತ್, ಈಗ ಕರ್ನಾಟಕ ರಣಜಿ ತಂಡದ ಖಾಯಂ ಸದಸ್ಯನಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಸತತ 2 ವರ್ಷ ಅಮೋಘ ಪ್ರದರ್ಶನವಿತ್ತರೂ, ನಂತರ ಐಪಿಎಲ್‌ನಲ್ಲೂ ಅವಕಾಶ ವಂಚಿತ. ಬರೋಡದ ಎಡಗೈ ಸ್ಪಿನ್-ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರ ಆಗಮನದೊಂದಿಗೆ ಮುಂಬೈ ಇಂಡಿಯನ್ಸ್‌ನಲ್ಲಿ ಸುಚಿತ್‌ಗೆ ಅವಕಾಶಗಳು ಕೈ ತಪ್ಪಿದವು. ಈ ಎಲ್ಲಾ ಹಿನ್ನಡೆಗಳನ್ನು ಮೆಟ್ಟಿ ನಿಲ್ಲಲು ಪಣ ತೊಟ್ಟಿರುವ 24 ವರ್ಷದ ಸುಚಿತ್, ರಣಜಿ ಟ್ರೋಫಿ ಹಾಗೂ ಐಪಿಎಲ್‌ನಲ್ಲಿ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಸ್ಪೋರ್ಟ್ಸ್ ಸೀಮ್.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಸುಚಿತ್ ಹೇಳಿದ್ದಾರೆ.
‘‘ಎರಡು ವರ್ಷ ಮುಂಬೈ ಇಂಡಿಯನ್ಸ್ ಪರ ಆಡಿದ ನಂತರ ನನಗೆ ಐಪಿಎಲ್ ಒಪ್ಪಂದ ಸಿಕ್ಕಿಲ್ಲ. ಕಳೆದ ಕೆಲ ವರ್ಷಗಳು ನನ್ನ ಪಾಲಿಗೆ ನಿಜಕ್ಕೂ ಅತ್ಯಂತ ಕಠಿಣವಾಗಿದ್ದವು. ಆ ಭಾವನಾತ್ಮಕ ಹಂತವನ್ನು ದಾಟುವುದು ಸುಲಭವಾಗಿರಲಿಲ್ಲ. ಆದರೆ ಅಂತಹ ಕಠಿಣ ಸನ್ನಿವೇಶಗಳಿಂದಲೇ ಕ್ರಿಕೆಟಿಗರ ವ್ಯಕ್ತಿತ್ವ ಪರೀಕ್ಷೆಗೊಳಪಡುತ್ತದೆ. ಇದೊಂದು ತಾಳ್ಮೆಯ ಪರೀಕ್ಷೆ ,’’ ಎಂದರು ಸುಚಿತ್.
2015ರಲ್ಲಿ ಮೊದಲ ಬಾರಿ ಮುಂಬೈ ಇಂಡಿಯನ್ಸ್ ಪರ ಒಪ್ಪಂದ ಮಾಡಿಕೊಂಡಿದ್ದ ಸುಚಿತ್, 10 ವಿಕೆಟ್‌ಗಳನ್ನು ಪಡೆದಿದ್ದರು. ಅಲ್ಲದೆ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಸುಚಿತ್ ಬತ್ತಳಿಕೆಯಲ್ಲಿ ಕೇರಂ ಬಾಲ್!
ಹೊಸ ಅವಕಾಶಗಳನ್ನು ಎದುರು ನೋಡುತ್ತಿರುವ ಸುಚಿತ್, ಅದಕ್ಕೆ ಬೇಕಾದಂತೆ ಬೌಲಿಂಗ್‌ನಲ್ಲಿ ವೈವಿಧ್ಯತೆಗಳನ್ನೂ ತಂದುಕೊಂಡಿದ್ದಾರೆ. ‘‘ಈ ಹಿಂದಿನಿಂದ ಅತ್ಯುತ್ತಮ ಆಟಗಾರನಾಗುವ ಹಾದಿಯಲ್ಲಿ ಪ್ರತಿ ದಿನ ಪರಿಶ್ರಮ ಪಟ್ಟಿದ್ದೇನೆ. ಬೌಲಿಂಗ್ ಶೈಲಿಯ ಬಗ್ಗೆಯೂ ಸಾಕಷ್ಟು ಕೆಲಸ ಮಾಡಿದ್ದೇನೆ. ಬೌಲಿಂಗ್‌ನಲ್ಲಿ ವೈವಿಧ್ಯತೆ ತಂದುಕೊಂಡಿದ್ದೇನೆ. ಆರ್ಮ್ ಬಾಲ್ ಮತ್ತು ಕೇರಂ ಬಾಲ್‌ಗಳನ್ನು ಎಸೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ,’’ ಎಂದು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಿರುವ ಸುಚಿತ್ ಹೇಳಿದರು.

ಕೆಎಸ್‌ಸಿಎ ಲೀಗ್‌ನಲ್ಲಿ 42 ವಿಕೆಟ್ಸ್
ಪ್ರಸಕ್ತ ಸಾಲಿನ ಕೆಎಸ್‌ಸಿಎ ಗ್ರೂಪ್-1, 1ನೇ ಡಿವಿಜನ್ ಟೂರ್ನಿಯಲ್ಲಿ ಚಾಂಪಿಯನ್ಸ್ ವಲ್ಚರ್ಸ್ ಕ್ರಿಕೆಟ್ ಕ್ಲಬ್ ಪರ ಸುಚಿತ್ 11 ಪಂದ್ಯಗಳಿಂದ ಟೂರ್ನಿಯಲ್ಲೇ ಗರಿಷ್ಠ 42 ವಿಕೆಟ್‌ಗಳನ್ನು ಪಡೆದಿದ್ದರು. ‘‘ಲೀಗ್‌ನಲ್ಲಿ 250 ಓವರ್‌ಗಳನ್ನು ಎಸೆದಿದ್ದೆ. ನನ್ನ ಬೌಲಿಂಗ್ ಉತ್ತಮವಾಗುವ ನಿಟ್ಟಿನಲ್ಲಿ ರಘುರಾಮ್ ಭಟ್ ಸರ್ ನೆರವು ನೀಡಿದರು. ಬೌಲಿಂಗ್‌ನಲ್ಲಿನ ಮೂಲಭೂತ ಅಂಶಗಳನ್ನು ಬಲಿಷ್ಠಗೊಳಿಸಿ, ಡಾ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಬೌಲಿಂಗ್ ವೈವಿಧ್ಯತೆಗಳನ್ನು ಬಳಕೆಗೆ ತಂದಿದ್ದೇನೆ,’’ ಎಂದರು.

ಕೆಪಿಎಲ್‌ನ ಅತ್ಯಂತ ಕಿರಿಯ ನಾಯಕ
ಮೈಸೂರು ಹುಡುಗ ಸುಚಿತ್ ಪಾಲಿಗೆ ಈ ವರ್ಷ ನಿಧಾನವಾಗಿ ಅದೃಷ್ಠ ತರುವಂತೆ ಕಾಣುತ್ತಿದೆ. 7ನೇ ಆವೃತ್ತಿಯ ಕೆಪಿಎಲ್‌ನಲ್ಲಿ ಮೈಸೂರು ವಾರಿಯರ್ಸ್ ತಂಡದ ನಾಯಕತ್ವ ವಹಿಸಿದ್ದ 24 ವರ್ಷದ ಸುಚಿತ್, ಕೆಪಿಎಲ್‌ನ ಅತ್ಯಂತ ಕಿರಿಯ ನಾಯಕ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
ಕರ್ನಾಟಕ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ಮತ್ತು ಮುಂಬೈ ವಿರುದ್ಧ ಸತತ ಎರಡು ಸೋಲುಗಳನ್ನು ಅನುಭವಿಸಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸುಚಿತ್ ಅವರ ಸೇರ್ಪಡೆ ತಂಡಕ್ಕೆ ಬಲ ತುಂಬಲಿದೆ. ‘‘ಒಬ್ಬ ಸ್ಪಿನ್ನರ್ ಆಗಿ ವಿಕಸನಗೊಂಡಿದ್ದು, ಕ್ರಿಕೆಟ್ ಎಲ್ಲಾ ಮಾದರಿಯಲ್ಲಿ ಆಡಿ, ಒತ್ತಡದ ಸನ್ನಿವೇಶಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಬುದ್ಧನಾಗಿದ್ದೇನೆ. ಕಳೆದ ವರ್ಷ ತಂಡದಲ್ಲಿದ್ದೆ. ಆದರೆ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದು ನನ್ನಲ್ಲಿ ಮತ್ತಷ್ಟು ಸಹನೆಯನ್ನು ತುಂಬಿತು. ಅವಕಾಶ ಸಿಕ್ಕಾಗ 5 ವಿಕೆಟ್‌ಗಳನ್ನು ಪಡೆದಿದ್ದೆ,’’ ಎಂದು ಒಡಿಶಾ ವಿರುದ್ಧದ 5 ವಿಕೆಟ್‌ಗಳ ಸಾ‘ನೆ(5/34)ಯನ್ನು ಸುಚಿತ್ ನೆನಪಿಸಿಕೊಂಡರು.

ಜಿಮ್ನಾಸ್ಟಿಕ್ ಕಲಿಕೆಯಿಂದ ಬೆಸ್ಟ್ ಫೀಲ್ಡರ್
ಕರಾರುವಾಕ್ ಬೌಲಿಂಗ್, ಸ್ಫೋಟಕ ಬ್ಯಾಟಿಂಗ್‌ನ ಜೊತೆಗೆ ಸುಚಿತ್ ಅದ್ಭುತ ಫೀಲ್ಡರ್. ತಾವು ಉತ್ತಮ ಫೀಲ್ಡರ್ ಆಗಲು ಬಾಲ್ಯದಲ್ಲಿ ಜಿಮ್ನಾಸ್ಟಿಕ್ ಕಲಿತದ್ದು ನೆರವಾಗಿದೆ ಎನ್ನುತ್ತಾರೆ ಸುಚಿತ್. ‘‘ಬಾಲ್ಯದಲ್ಲಿ ತಂದೆ ನನ್ನನ್ನು ಜಿಮ್ನಾಸ್ಟಿಕ್‌ಗೆ ಸೇರಿಸಿದ್ದರು. ಅದರ ಲ ಈಗ ಸಿಗುತ್ತಿದೆ. ನಾನೀಗ ತುಂಬಾ ಅಥ್ಲೆಟಿಕ್ ಆಗಿದ್ದೇನೆ. ಕ್ರಿಕೆಟ್‌ನ ಯಾವುದೇ ಮಾದರಿಯಲ್ಲಿ ಉತ್ತಮ ಫೀಲ್ಡರ್ ಒಬ್ಬ ತಂಡಕ್ಕೆ ಸಾಕಷ್ಟು ವೌಲ್ಯಗಳನ್ನು ತಂದುಕೊಡಬಲ್ಲ,’’ ಎಂದು ಸುಚಿತ್ ನುಡಿದರು.

ಕನ್ನಡ ಚಲನಚಿತ್ರ ಕಪ್(ಕೆಸಿಸಿ) 2ನೇ ಆವೃತ್ತಿಯ ಟೂರ್ನಿಯಲ್ಲಿ ಗಂಗಾ ವಾರಿಯರ್ಸ್ ತಂಡದ ಪರ ಆಡಿರುವ ಸುಚಿತ್, ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್‌ಗಳಾದ ಸುದೀಪ್, ಪುನೀತ್ ರಾಜ್‌ಕುಮಾರ್ ಮತ್ತು ಗಣೇಶ್ ಅವರ ಅಭಿಮಾನಿಯೂ ಹೌದು. ‘‘ಕೆಸಿಸಿ ಟೂರ್ನಿ ಅನಾವರಣಗೊಂಡ ಕ್ಷಣದಿಂದಲೂ ಕೆಸಿಸಿಯಲ್ಲಿ ಆಡಬೇಕೆಂದು ಬಯಸಿದ್ದೆ. ಇದು ಕ್ರಿಕೆಟ್‌ಗೆ ಮಾತ್ರವಲ್ಲ, ಸಿನಿ ತಾರೆಗಳೊಂದಿಗೆ ಸಮಯ ಕಳೆಯಲು ಸಿಕ್ಕಿರುವ ಅತ್ಯಂತ ನಿಭಿನ್ನ ವೇದಿಕೆ. ನಾವು ಅವರನ್ನು ಪರದೆಯ ಮೇಲೆ ಮಾತ್ರ ನೋಡುತ್ತಿದ್ದೆವು. ಇದೀಗ ಅವರೊಂದಿಗೆ ಆಡುತ್ತಿರುವುದು ವಿಶೇಷ ಅನುಭವ,’’ ಎಂದು ಮಾತು ಮುಗಿಸಿದರು ಸುಚಿತ್.

LEAVE A REPLY

Please enter your comment!
Please enter your name here

12 − 10 =