100ನೇ ರಣಜಿ ಪಂದ್ಯವಾಡಿದ ಆರ್.ವಿನಯ್ ಕುಮಾರ್

0
R. Vinay Kumar (right) with bowling coach S. Arvind.

ನಾಗ್ಪುರ, ನವೆಂಬರ್ 12: ದಾವಣಗೆರೆ ಎಕ್ಸ್ ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಆರ್.ವಿನಯ್ ಕುಮಾರ್ ತಮ್ಮ ವೃತ್ತಿಜೀವನದಲ್ಲಿ ಅತಿ ದೊಡ್ಡ ಮೈಲುಗಲ್ಲು ನೆಟ್ಟಿದ್ದು, 100ನೇ ರಣಜಿ ಪಂದ್ಯವಾಡಿದ್ದಾರೆ.

ವಿದರ್ಭ ವಿರುದ್ಧ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ(ವಿಸಿಎ) ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಎಲೈಟ್ ‘ಎ’ ಗುಂಪಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿನಯ್ ವೃತ್ತಿಜೀವನದ 100ನೇ ರಣಜಿ ಪಂದ್ಯವಾಡಿದರು.

34 ವರ್ಷದ ವಿನಯ್ ಕುಮಾರ್ 2004ರಲ್ಲಿ ಕಲ್ಕತ್ತಾದ ಜಾಧವ್ ಪುರ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ನಡೆದ ಬಂಗಾಳ ವಿರುದ್ಧದ ಪಂದ್ಯದೊಂದಿಗೆ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಇದೀಗ 100ನೇ ಪಂದ್ಯವಾಡುವ ಮೂಲಕ ಈ ಸಾಧನೆ ಮಾಡಿದ ಕರ್ನಾಟಕದ 3ನೇ ಆಟಗಾರನೆಂಬ ಹೆಗ್ಗಳಿಕೆಗೆ ವಿನಯ್ ಪಾತ್ರರಾಗಿದ್ದಾರೆ. ವಿನಯ್ ಕುಮಾರ್ ಅವರಿಗೂ ಮುನ್ನ ಕರ್ನಾಟಕದ ಮಾಜಿ ನಾಯಕರಾದ ಬ್ರಿಜೇಶ್ ಪಟೇಲ್ ಮತ್ತು ಸುನೀಲ್ ಜೋಶಿ 100 ರಣಜಿ ಪಂದ್ಯಗಳನ್ನಾಡಿದ್ದರು.

100 ರಣಜಿ ಪಂದ್ಯಗಳಿಂದ ವಿನಯ್ 2175 ರನ್ ಹಾಗೂ 384 ವಿಕೆಟ್ಸ್ ಪಡೆದಿದ್ದಾರೆ. ರಣಜಿ ಟ್ರೋಫಿಯಲ್ಲಿ 2 ಶತಕ ಹಾಗೂ 9 ಅರ್ಧಶತಕಗಳನ್ನು ಬಾರಿಸಿರುವ ವಿನಯ್, ಇನ್ನಿಂಗ್ಸ್ ಒಂದರಲ್ಲಿ 20 ಬಾರಿ 5 ವಿಕೆಟ್ಸ್ ಹಾಗೂ ಪಂದ್ಯವೊಂದರಲ್ಲಿ 3 ಬಾರಿ 10 ವಿಕೆಟ್ಸ್ ಕಬಳಿಸಿದ್ದಾರೆ.

2004/05ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವಿರುದ್ಧದ ರಣಜಿ ಪಂದ್ಯದಲ್ಲಿ ವಿನಯ್ ಮೊದಲ ಬಾರಿ 5 ವಿಕೆಟ್ಸ್ ಸಾಧನೆ ಮಾಡಿದ್ದರು. 2007/08ರಲ್ಲಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದ ಆತಿಥೇಯ ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲ ಬಾರಿ 10 ವಿಕೆಟ್ಸ್ ಸಾಧನೆ ಮಾಡಿದ್ದರು.

ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ಸ್ ಪಡೆದ ಆಟಗಾರರ ಪೈಕಿ ಒಟ್ಟಾರೆ 10ನೇ ಸ್ಥಾನದಲ್ಲಿರುವ ವಿನಯ್, ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಏಕೈಕ ವೇಗದ ಬೌಲರ್ ಎಂಬ ಹಿರಿಮೆ ಹೊಂದಿದ್ದಾರೆ. ಈ ಮೂಲಕ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್ ಎಂಬ ದಾಖಲೆ ವಿನಯ್ ಹೆಸರಲ್ಲಿದೆ.

ಅಂಕಿ ಅಂಶ ನೆರವು: ಚನ್ನಗಿರಿ ಕೇಶವಮೂರ್ತಿ

LEAVE A REPLY

Please enter your comment!
Please enter your name here

ten − 8 =