ಕೆಪಿಎಲ್ ಟ್ರೋಫಿ ಅನಾವರಣದಲ್ಲಿ ಚಂದ್ರ ಕಳೆ

0

ಬೆಂಗಳೂರು ಆಗಸ್ಟ್ 12: ಕರ್ನಾಟಕ ಪ್ರೀಮಿಯರ್ ಲೀಗ್ ನ ಎಂಟನೇ ಆವೃತ್ತಿಯ ಟ್ರೋಫಿಯನ್ನು ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಬಿ ಎಸ್ ಚಂದ್ರಶೇಖರ್, ಮಹಿಳಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ ಹಾಗೂ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚಾಸುದೀಪ್ ಅನಾವರಣಗೊಳಿಸಿದರು.

ಇದೆ ಸಂದರ್ಭದಲ್ಲಿ ಅಧ್ಯಕ್ಷ ಸಂಜಯ್ ದೇಸಾಯಿ ಅವರು ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ಕಾರ್ಯಕ್ರಮವನ್ನು ಪ್ರಕಟಿಸಿದರು. ಕೆಪಿಎಲ್ ವೇಳೆ ಮೂರು ಮಹಿಳಾ ಕ್ರಿಕೆಟ್ ತಂಡಗಳು ಆರು ಪಂದ್ಯಗಳನ್ನು ಆಡಲಿವೆ ಎಂದು ತಿಳಿಸಿದರು. ಪಂದ್ಯಗಳು ಆಗಸ್ಟ್ 18 , 19 , 20 , 22 , 23 , ಮತ್ತು 24  ರಂದು ನಡೆಯಲಿವೆ.

ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಉತ್ತೇಜನ ನೀಡುವ ಕುರಿತು ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್, “ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ನೀಡಲು ಮೂರು ಫ್ರಾಂಚೈಸಿಗಳು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮೂರು ತಂಡಗಳು ಪರಸ್ಪರ ಮೂರು ಪಂದ್ಯಗಳನ್ನಾಡಲಿವೆ. ಅದೇ ರೀತಿ ಮೈಸೂರಿನಲ್ಲಿ ಒಂದು ಪ್ರದರ್ಶನ ಪಂದ್ಯ ನಡೆಯಲಿದೆ.ಆ ಮೂರು ತಂಡಗಳಿಂದ ಪ್ರದರ್ಶನ ಪಂದ್ಯಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗವುದು  ” ಎಂದರು.

ಕೆಪಿಎಲ್ ಕುರಿತು ಮಾತನಾಡಿದ ಚಂದ್ರಶೇಖರ್ ಅವರು “ಎಂಟನೇ ಆವೃತ್ತಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಕೇವಲ ಏಳು ವರ್ಷಗಳಿಂದ ಈ ಟೂರ್ನಿಯನ್ನು ಅಯೋಜಿಸುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂಬುದು ಮುಖ್ಯ. ಪ್ರತಿಯೊಬ್ಬ ಆಟಗಾರರಿಗೂ ಶುಭ ಹಾರೈಸುವೆ. ಕೆಪಿಎಲ್ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಪ್ರತಿಭೆಗಳನ್ನು ನೀಡುವುದು ಮಾತ್ರವಲ್ಲ ರಾಷ್ಟ್ರೀಯ ತಂಡಕ್ಕೂ ಇಲ್ಲಿಯ ಆಟಗಾರರು ಆಯ್ಕೆ ಆಗಲಿ, ” ಎಂದರು.

60 ಮತ್ತು 70 ರ ದಶಕಗಳಲ್ಲಿ ಚಂದ್ರಶೇಖರ್ ಭಾರತ ಕಂಡ ಅದ್ಭುತ ಸ್ಪಿನ್ ಮಾಂತ್ರಿಕ ಎನಿಸಿದ್ದರು. ಎರಾಪಳ್ಳಿ ಪ್ರಸನ್ನ, ಶ್ರೀನಿವಾಸ್ ವೆಂಕಟರಾಘವನ್ ಮತ್ತು ಬಿಷನ್ ಸಿಂಗ್ ಬೇಡಿ ಕೂಡ ಚಂದ್ರಶೇಖರ್ ಅವರ ಸ್ಪಿನ್ ಮಂತ್ರಕ್ಕೆ ಮರುಳಾಗಿದ್ದರು. ಈ ಸ್ಪಿನ್ ಮಾಂತ್ರಿಕರು 231  ಟೆಸ್ಟ್ ಪಂದ್ಯಗಳನ್ನಾಡಿ 853  ವಿಕೆಟ್ ಗಳಿಸಿದ್ದರು.

ಚಂದ್ರಶೇಖರ್ 58  ಟೆಸ್ಟ್ ಪಂದ್ಯಗಳನ್ನಾಡಿ 29 .74  ಸರಾಸರಿಯಲ್ಲಿ 242 ವಿಕೆಟ್ ಗಳಿಸಿದ್ದರು. 15  ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 2 .70  ಎಕಾನಮಿ ಹೊಂದಿರುವುದು ಅವರ ಬೌಲಿಂಗ್ ಸಾಧನೆಯಾಗಿತ್ತು. ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಚಂದಶೇಖರ್ ಹಲವಾರು ಜವಾಬ್ಧಾರಿಗಳನ್ನು ನಿಭಾಯಿಸಿದ್ದರು. 74  ವರ್ಷದ ಮೈಸೂರು ಸಂಜಾತ ಚಂದ್ರಶೇಖರ್ ಹುಬ್ಬಳ್ಳಿ, ಬೆಳಗಾವಿ, ಮೈಸೂರು ಹಾಗೂ ಶಿವಮೊಗ್ಗದಲ್ಲಿ ನಿರಾಶ್ರಿತ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡಲು ಶ್ರಮಿಸಿದ್ದರು.

ಯುವ ಕ್ರಿಕೆಟರಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರೋತ್ಸಹ ನೀಡುವುದನ್ನು ಗುಣಗಾನ ಮಾಡಿದ ಸುದೀಪ್, “ಕೆಪಿಎಲ್ ನಲ್ಲಿ ನಮಗೆ ಆಡಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ, (ಸೆಲೆಬ್ರಿಟಿ ಗಳಿಂದ ಕೂಡಿದ ರಾಕ್ ಸ್ಟಾರ್ಸ್ ತಂಡವನ್ನು ಸುದೀಪ್ ಮೂರು ವರ್ಷಗಳ ಕಾಲ ಮುನ್ನಡಿಸಿದ್ದರು), ನಮ್ಮ ಬದುಕಿನಲ್ಲಿ ಅಂತ ಕ್ರಿಕೆಟಿಗರ ಜೊತೆ ಆಡುತ್ತೇವೆಂದು ಊಹಿಸಿರಲಿಲ್ಲ. ಅಪರಿಚಿತ ಕ್ರಿಕೆಟಿಗರು ಕೆಪಿಎಲ್ ಮೂಲಕ ಹೊಸ ತಾರೆಗಳಾಗುವ ಅವಕಾಶ ಪಡೆಯುತ್ತಾರೆ,” ಎಂದರು.

2009 ರಿಂದ ಆರಂಭಗೊಂಡ ಕೆಪಿಎಲ್ ಈ ಬಾರಿ ಆಗಸ್ಟ್ 16 ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಆಗಸ್ಟ್ 31 ರಂದು ಮೈಸೂರಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆಗುಸ್ಟ್ 23 ರಂದು ಬೆಂಗಳೂರಿನ ಸುತ್ತು ಮುಕ್ತಾಯಗೊಂಡು, ಒಂದು ದಿನ ವಿರಾಮದ ನಂತರ ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ.

LEAVE A REPLY

Please enter your comment!
Please enter your name here

4 × two =