ಕ್ರೀಡಾ ಸ್ಫೂರ್ತಿ ದೊಡ್ಡದೋ…? ನಿಯಮ ದೊಡ್ಡದೋ..? ಅಶ್ವಿನ್ ಮಾಡಿದ್ದು ನಿಜಕ್ಕೂ ತಪ್ಪಾ..?

0
PC: twitter

ಜೈಪುರ, ಮಾರ್ಚ್ 25: ಐಪಿಎಲ್-12ರ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ವಿವಾದಕ್ಕೆ ಕಾರಣವಾಗಿದೆ. ರಾಯಲ್ಸ್ ಓಪನರ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ನಾಯಕ ರವಿಚಂದ್ರನ್ ಅಶ್ವಿನ್ ಔಟ್ ಮಾಡಿದ ರೀತಿಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಗೆಲ್ಲಲು 185 ರನ್ ಗಳ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್ ಗೆ ಇಂಗ್ಲೆಂಡ್ ನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಸ್ಫೋಟಕ ಆರಂಭ ಒದಗಿಸಿದ್ದರು. ನಾಯಕ ಅಜಿಂಕ್ಯ ರಹಾನೆ(27) ಅವರೊಂದಿಗೆ ಮೊದಲ ವಿಕೆಟ್ ಗೆ 49 ಎಸೆತಗಳಲ್ಲಿ 78 ರನ್ ಸೇರಿಸಿದ್ದ ಬಟ್ಲರ್ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ಸ್ ನೆರವಿನಿಂದ 69 ರನ್ ಗಳಿಸಿ ಆಡುತ್ತಿದ್ದರು. ಆದರೆ 12.5ನೇ ಓವರ್ ನಲ್ಲಿ ಅಶ್ವಿನ್ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದರಿಂದ ಬಟ್ಲರ್ ಔಟಾಗುವಂತಾಯಿತು.

ಅಶ್ವಿನ್ ಬೌಲಿಂಗ್ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಬಟ್ಲರ್, ಅಶ್ವಿನ್ ಚೆಂಡೆಸೆಯುವ ಮೊದಲೇ ಕ್ರೀಸ್ ಬಿಟ್ಟಿದ್ದರು. ಬೌಲಿಂಗ್ ಆಕ್ಷನ್ ಗೂ ಮುನ್ನವೇ ಬೇಲ್ಸ್ ಎಗರಿಸಿದ ಅಶ್ವಿನ್, ಔಟ್ ಗಾಗಿ ಮನವಿ ಸಲ್ಲಿಸಿದರು. ಕ್ರಿಕೆಟ್ ನಲ್ಲಿ ಈ ನಿಯಮವಿರುವುದರಿಂದ ಬಟ್ಲರ್ ಅವರಿಗೆ 3ನೇ ಅಂಪೈರ್ ಔಟ್ ತೀರ್ಪು ನೀಡಿದರು. ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ 14 ರನ್ ಗಳ ಗೆಲುವು ಸಾಧಿಸಿತು.

ಮಂಕಡ್ ಮೂಲಕ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದ ಅಶ್ವಿನ್ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಎಂದು ಮಾಜಿ ಕ್ರಿಕೆಟಿಗರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅಶ್ವಿನ್ ಅಭಿಮಾನಿಗಳು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅಭಿಮಾನಿಗಳು ಅಶ್ವಿನ್ ಕ್ರಿಕೆಟ್ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಶ್ವಿನ್ ವರ್ತನೆಯಿಂದ ತೀವ್ರ ಆಕ್ರೋಶಗೊಂಡಿದ್ದ ಜೋಸ್ ಬಟ್ಲರ್, ಪಂದ್ಯದ ನಂತರ ಅಶ್ವಿನ್ ಅವರ ಕೈಕುಲುಕಲು ನಿರಾಕರಿಸಿದರು. ಆ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೋಸ್ ಬಟ್ಲರ್ ಅವರ ವಿವಾದಾತ್ಮಕ ರನ್ ಔಟ್ ವೀಡಿಯೊ ಇಲ್ಲಿದೆ ನೋಡಿ.

ಅಶ್ವಿನ್ ಈ ರೀತಿ ಎದುರಾಳಿ ತಂಡದ ಆಟಗಾರನೊಬ್ಬನನ್ನು ಔಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲೂ ಅಶ್ವಿನ್ ಮಂಕಡ್ ಮೂಲಕ ಲಂಕಾ ಆಟಗಾರನನ್ನು ಔಟ್ ಮಾಡಿದ್ದರು. ಅದರ ವೀಡಿಯೊ ಇಲ್ಲಿದೆ ನೋಡಿ.

ಅಶ್ವಿನ್ ಅವರ ಈ ವರ್ತನೆ ಲಗಾನ್ ಸಿನಿಮಾದ ದೃಶ್ಯವನ್ನು ನೆನಪಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಕ್ರಿಕೆಟ್ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಲಗಾನ್ ಸಿನಿಮಾದ ಆ ದೃಶ್ಯ ಇಲ್ಲಿದೆ ನೋಡಿ.

ಅಶ್ವಿನ್ ಅವರ ಮಂಕಡ್ ವರ್ತನೆ ಬಗ್ಗೆ ಮಾಜಿ ಕ್ರಿಕೆಟಿಗರ, ಕ್ರಿಕೆಟ್ ಪ್ರಿಯರ ಕೆಲ ಅಭಿಪ್ರಾಯಗಳು ಇಲ್ಲಿವೆ ನೋಡಿ.

LEAVE A REPLY

Please enter your comment!
Please enter your name here

fourteen − 5 =