ಬಿಸಿಸಿಐ ಅಧ್ಯಕ್ಷ ಪಟ್ಟ ಬ್ರಿಜೇಶ್ ಪಟೇಲ್ ಕೈತಪ್ಪಲು ಇದೇ ಕಾರಣ..!

0

ಮುಂಬೈ, ಅಕ್ಟೋಬರ್ 15: ಎಲ್ಲವೂ ಅಂದುಕೊಂಡಂತೆಯೇ ಆಗಿದ್ದಿದ್ದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಇಷ್ಟು ಹೊತ್ತಿಗೆ ಬಿಸಿಸಿಐ ಅಧ್ಯಕ್ಷರಾಗಬೇಕಿತ್ತು. ಆದರೆ ಆ ಪಟ್ಟ ಬ್ರಿಜೇಶ್ ಕೈತಪ್ಪಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ ಪಾಲಾಗಿದೆ.

ಭಾನುವಾರ ಸಂಜೆಯವರೆಗೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದದ್ದು ಬ್ರಿಜೇಶ್ ಪಟೇಲ್ ಅವರ ಹೆಸರು ಮಾತ್ರ. ಇದರಿಂದ ಕೆಎಸ್ಸಿಎ ಪದಾಧಿಕಾರಿಗಳೂ ಕೂಡ ಸಹಜವಾಗಿಯೇ ಸಂಭ್ರಮದಲ್ಲಿದ್ದರು. ಆದರೆ ಭಾನುವಾರ ತಡರಾತ್ರಿ ನಡೆದ ಬೆಳವಣಿಗೆಗಳು ಎಲ್ಲಾ ಲೆಕ್ಕಾಚಾರಗಳನ್ನು ಬದಲಿಸಿ ಬಿಟ್ಟವು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೆಸರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಂತಿಮಗೊಳಿಸಲಾಯಿತು. ಇದರೊಂದಿಗೆ ಅಧ್ಯಕ್ಷರಾಗುವ ಬ್ರಿಜೇಶ್ ಪಟೇಲ್ ಕನಸು ಭಗ್ನಗೊಂಡಿತು.

ಬ್ರಿಜೇಶ್ ಪಟೇಲ್ ಅವರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ಕೈತಪ್ಪಲು ಹಲವಾರು ಕಾರಣಗಳಿವೆ. ಬ್ರಿಜೇಶ್ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಇದು ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ವಿರೋಧಕ್ಕೆ ಕಾರಣವಾಗಿತ್ತು. ಶ್ರೀನಿವಾಸನ್ ಕಾರಣಕ್ಕೆ ಕೆಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಬ್ರಿಜೇಶ್ ಪಟೇಲ್ ಅವರ ಆಯ್ಕೆಯನ್ನು ವಿರೋಧಿಸಿದ್ದವು. ಸೌರವ್ ಗಂಗೂಲಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದಾದರೆ ಅವಿರೋಧವಾಗಿ ಆಯ್ಕೆ ಮಾಡಲು ನೆರವು ನೀಡಲು ಸಿದ್ಧ ಎಂಬ ಸಂದೇಶವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಅದರಲ್ಲೂ ಮುಖ್ಯವಾಗಿ ನಾರ್ಥ್ ಈಸ್ಟ್ ಭಾಗಕ್ಕೆ ಸೇರಿದ ಕ್ರಿಕೆಟ್ ಸಂಸ್ಥೆಗಳು ರವಾನಿಸಿದವು. ಹೀಗಾಗಿ ಬ್ರಿಜೇಶ್ ಪಟೇಲ್ ಅವರಿಗೆ ನಿರಾಸೆಯಾಗಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬ್ರಿಜೇಶ್ ಪಟೇಲ್ ಅವರಿಗೆ ಐಪಿಎಲ್ ಮುಖ್ಯಸ್ಥರ ಹುದ್ದೆ ನೀಡಲಾಗಿದೆ. ಆದರೆ 10 ತಿಂಗಳ ನಂತರ ಬ್ರಿಜೇಶ್ ಬಿಸಿಸಿಐ ಅಧ್ಯಕ್ಷರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಈಗ ಅಧ್ಯಕ್ಷ ಪಟ್ಟಕ್ಕೇರಲಿರುವ ಸೌರವ್ ಗಂಗೂಲಿ 10 ತಿಂಗಳು ಮಾತ್ರ ಅಧಿಕಾರದಲ್ಲಿರಲಿದ್ದಾರೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಗಂಗೂಲಿ ಅವರು ಕೂಲಿಂಗ್ ಆಫ್ಅವಧಿ ನಿಯಮದನ್ವಯ 10 ತಿಂಗಳಲ್ಲಿ ಹುದ್ದ ಬಿಡಬೇಕಿದೆ. ಆ ಸಂದರ್ಭದಲ್ಲಿ ಬಿಸಿಸಿಐ ಬಾಸ್ ಪಟ್ಟ ಬ್ರಿಜೇಶ್ ಪಟೇಲ್ ಅವರಿಗೆ ಒಲಿಯುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here

6 + ten =