ರಣಜಿ ಟ್ರೋಫಿ: ಕರ್ನಾಟಕಕ್ಕೆ ಶಾಕ್, ಬೇರೆ ರಾಜ್ಯಕ್ಕೆ ಹಾರಿದ ಸಿ.ಎಂ ಗೌತಮ್

0

ಬೆಂಗಳೂರು, ಜುಲೈ 17: ಕರ್ನಾಟಕದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಿಎಂ ಗೌತಮ್ ಮುಂಬರುವ ದೇಶೀಯ ಕ್ರಿಕೆಟ್ ಸಾಲಿನಲ್ಲಿ ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯದ ಪರ ಆಡಲಿದ್ದಾರೆ.

ಕರ್ನಾಟಕ ತಂಡದಲ್ಲಿ ಅವಕಾಶ ವಂಚಿತರಾಗಿರುವ ಸಿಎಂ ಗೌತಮ್ ಬೇರೆ ರಾಜ್ಯದ ತಂಡವನ್ನು ಪ್ರತಿನಿಧಿಸಲು ನಿರಾಕ್ಷೇಪಣ ಪತ್ರ (No Objection Certificate) ನೀಡುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಗೆ ಮನವಿ ಸಲ್ಲಿಸಿದರು. ಅದರಂತೆ ಸಿಎಂ ಗೌತಮ್ ಅವರಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಬುಧವಾರ ನಿರಾಕ್ಷೇಪಣಾ ಪತ್ರ ನೀಡಿದೆ. ಸಿಎಂ ಗೌತಮ್ ಯಾವ ರಾಜ್ಯದ ಪರ ಆಡಲಿದ್ದಾರೆ ಎಂಬುದು ಇನ್ನೂ ಖಚಿತ ಪಟ್ಟಿಲ್ಲ.

ಸಿ.ಎಂ ಗೌತಮ್ ಅವರಿಗೆ ರಾಜ್ಯ ಕ್ರಿಕೆಟ್ ಸಂಸ್ಥೆ ನೀಡಿರುವ ಎನ್ಒಸಿ

33 ವರ್ಷದ ಸಿಎಂ ಗೌತಮ್ 2008ರಲ್ಲಿ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ರಾಜ್ಯ ತಂಡದ ಆಧಾರಸ್ಥಂಭಗಳಲ್ಲಿ ಒಬ್ಬರಾಗಿದ್ದ ಗೌತಮ್ ತಂಡದ ನಾಯಕ ಮತ್ತು ಉಪನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ 2018-19ನೇ ಸಾಲಿನ ದೇಶೀಯ ಕ್ರಿಕೆಟ್ನಲ್ಲಿ ಸಿ.ಎಂ ಗೌತಮ್ ಅವರಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಯುವ ವಿಕೆಟ್ ಕೀಪರ್ಗಳಾದ ಬಿ.ಆರ್ ಶರತ್ ಮತ್ತು ಶರತ್ ಶ್ರೀನಿವಾಸ್ ಅವರಿಗೆ ಮಣೆ ಹಾಕಿದ್ದ ರಾಜ್ಯ ಹಿರಿಯರ ಆಯ್ಕೆ ಸಮಿತಿ ಸಿ.ಎಂ ಗೌತಮ್ ಅವರನ್ನು ಕಡೆಗಣಿಸಿತ್ತು. ಕನಿಷ್ಠ ಸೂಚನೆಯನ್ನೂ ಕೊಡದೆ ತಂಡದಿಂದ ಕೈಬಿಟ್ಟ ಬಗ್ಗೆ ಗೌತಮ್ ತೀವ್ರವಾಗಿ ನೊಂದುಕೊಂಡಿದ್ದರು.

ಬಲಗೈ ಬ್ಯಾಟ್ಸ್ಮನ್ ಸಿಎಂ ಗೌತಮ್ 2013-14 ಹಾಗೂ 2014-15ನೇ ಸಾಲಿನಲ್ಲಿ ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದರು. 2012ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಿಎಂ ಗೌತಮ್ ಎರಡು ಭರ್ಜರಿ ದ್ವಿಶತಕಗಳ ಸಹಿತ 900ಕ್ಕೂ ಹೆಚ್ಚು ರನ್ ಗಳಿಸಿ ಗಮನ ಸೆಳೆದಿದ್ದರು. ಅದೇ ವರ್ಷ ಭಾರತ ತಂಡದ ಪರ ಆಡುವ ಅವಕಾಶ ಸಿಕ್ಕಿತ್ತು. ಸಿ.ಎಂ ಗೌತಮ್ 94 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು 41.36ರ ಉತ್ತಮ ಸರಾಸರಿಯಲ್ಲಿ 10 ಶತಕ, 24 ಅರ್ಧಶತಕಗಳ ಸಹಿತ 4716 ರನ್ ಗಳಿಸಿದ್ದಾರೆ. ಅಲ್ಲದೆ 21 ಸ್ಟಂಪಿಂಗ್ ಮತ್ತು 296 ಕ್ಯಾಚ್ ಪಡೆದಿದ್ದಾರೆ. 51 ಲಿಸ್ಟ್ ಪಂದ್ಯಗಳನ್ನಾಡಿರುವ ಗೌತಮ್ 34.06ರ ಸರಾಸರಿಯಲ್ಲಿ 1056 ರನ್ ಮತ್ತು 48 ಟಿ20 ಪಂದ್ಯಗಳಿಂದ 511 ರನ್ ಕಲೆ ಹಾಕಿದ್ದಾರೆ. 

LEAVE A REPLY

Please enter your comment!
Please enter your name here

20 + 9 =