ಕರ್ನಾಟಕ ತಂಡದಲ್ಲಿದ್ದಾಗ ಸೂಕ್ತ ಅವಕಾಶ ನೀಡಲಿಲ್ಲ, ಅಭದ್ರತೆಯ ಭಯ ಕಾಡಿತ್ತು..!

0

ಕರ್ನಾಟಕ ತಂಡದ ಮಾಜಿ ಆಟಗಾರ ಗಣೇಶ್ ಸತೀಶ್ ಈಗ ವಿದರ್ಭ ತಂಡದ ಮ್ಯಾಚ್ ವಿನ್ನರ್. 2013-14ನೇ ಸಾಲಿನಲ್ಲಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ಸದಸ್ಯರಾಗಿದ್ದ ಗಣೇಶ್ ಸತೀಶ್, 2017-18 ಹಾಗೂ 2018-19ನೇ ಸಾಲಿನಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಗೆದ್ದ ವಿದರ್ಭ ತಂಡದ ಸದಸ್ಯರಾಗಿದ್ದಾರೆ.

ಇತ್ತೀಚೆಗೆ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಸೋಲಿಸಿ ಸತತ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ದ ವಿದರ್ಭ, ರೆಸ್ಟ್ ಆಫ್ ಇಂಡಿಯಾ ತಂಡವನ್ನು ಮಣಿಸಿ ಸತತ 2ನೇ ಬಾರಿ ಇರಾನಿ ಕಪ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು.

ಕರ್ನಾಟಕ ತಂಡ ತೊರೆದ ನಂತರ ತಮ್ಮ ಸಾಧನೆಯ ಬಗ್ಗೆ ಸ್ಪೋರ್ಟ್ಸ್ ಸೀಮ್.ಕಾಮ್ ಜೊತೆ ಮಾತನಾಡಿರುವ ಗಣೇಶ್ ಸತೀಶ್ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಪರ ಆರು ವರ್ಷ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ್ದೆ. ಅಂಡರ-12 ನಂತರ ಅಂಡರ್-14, ಅಂಡರ್-16, ಅಂಡರ್-19 ಹಾಗೂ ಕರ್ನಾಟಕ ಹಿರಿಯರ ತಂಡಗಳ ಪರ ಆಡಿದ್ದೆ. ಕರ್ನಾಟಕ ತಂಡದ ನಾಯಕತ್ವವನ್ನೂ ವಹಿಸಿದ್ದೆ. 2013-14ನೇ ಸಾಲಿನ ರಣಜಿ ಫೈನಲ್ ನಲ್ಲಿ ಶತಕ ಬಾರಿಸಿದ್ದೆ. ಕರ್ನಾಟಕ ಪರ ಅದೇ ನನ್ನ ಕೊನೆಯ ಪಂದ್ಯವಾಯಿತು. ಪ್ರಾಮಾಣಿಕವಾಗಿ ಹೇಳುವುದಾದರೆ ಕರ್ನಾಟಕ ತಂಡದಲ್ಲಿದ್ದಾಗ ಅಭದ್ರತೆಯ ಭಯ ಕಾಡುತ್ತಿತ್ತು. ನನಗೆ ಸೂಕ್ತ ಅವಕಾಶವನ್ನೂ ನೀಡಲಿಲ್ಲ.
– ಗಣೇಶ್ ಸತೀಶ್, ವಿದರ್ಭ ತಂಡದ ಆಟಗಾರ.

2013-14ನೇ ಸಾಲಿನ ನಂತರ ಕರ್ನಾಟಕವನ್ನು ತೊರೆದಿದ್ದ ಗಣೇಶ್ ಸತೀಶ್ ಕಳೆದ 5 ವರ್ಷಗಳಿಂದ ವಿದರ್ಭ ಪರ ಆಡುತ್ತಿದ್ದಾರೆ. ಅಲ್ಲದೆ ತಂಡದ ಯಶಸ್ಸಿಗೂ ಕಾರಣರಾಗಿದ್ದಾರೆ.

ಇಡೀ ಟೂರ್ನಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯದಿಂದ ಆಡುವ ಹಾಗೂ ಆಯ್ಕೆಯ ಬಗ್ಗೆ ಯಾವುದೇ ಅಭದ್ರತೆ ಕಾಡದಿರುವ ನಿಟ್ಟಿನಲ್ಲಿ ನಾನೊಂದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಕರ್ನಾಟಕ ಪರ ಆಡುತ್ತಿದ್ದಾಗ ನನ್ನ ಸ್ಥಾನದ ಮೇಲೆ ಸಾಕಷ್ಟು ಒತ್ತಡವಿತ್ತು. ಹೀಗಾಗಿ ನನ್ನತನವನ್ನು ಹೊರ ಹಾಕಲು ಸಾಧ್ಯವಾಗುತ್ತಿರಲಿಲ್ಲ.
– ಗಣೇಶ್ ಸತೀಶ್, ವಿದರ್ಭ ತಂಡದ ಆಟಗಾರ.

ವಿದರ್ಭ ತಂಡದ ಬಗ್ಗೆ ಮಾತನಾಡಿರುವ ಗಣೇಶ್ ಸತೀಶ್ ”ಕಳೆದೆರಡು ಸಾಲಿನ ರಣಜಿ ಟ್ರೋಫಿ ಟೂರ್ನಿಗಳಲ್ಲಿ ನಾವು ಅಜೇಯ ಸಾಧನೆ ಮಾಡಿದ್ದೇವೆ. ಗೆಲ್ಲಲೇಬೇಕೆಂಬುದು ನಮ್ಮ ಯೋಜನೆ. ಗೆಲುವು ಹೊರತು ಪಡಿಸಿ ಬೇರೆ ಯಾವುದಕ್ಕೂ ನಾವು ಪ್ಲಾನ್ ಮಾಡುವುದಿಲ್ಲ. ತಂಡದಲ್ಲೂ ಆರೋಗ್ಯಕರ ಸ್ಪರ್ಧೆಯಿದೆ” ಎಂದಿದ್ದಾರೆ.

ಇರಾನಿ ಕಪ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ವಿರುದ್ಧದ ಎರಡು ಇನ್ನಿಂಗ್ಸ್ ಗಳಲ್ಲಿ ಗಣೇಶ್ ಸತೀಶ್ 48 ಹಾಗೂ 87 ರನ್ ಗಳಿಸಿದ್ದರು.

2ನೇ ಇನ್ನಿಂಗ್ಸ್ ನಲ್ಲಿ ಗಳಿಸಿದ 87 ರನ್ ನನ್ನ  ವೃತ್ತಿಜೀವನದ ಟಾಪ್ ಇನ್ನಿಂಗ್ಸ್ ಗಳಲ್ಲಿ ಒಂದು. ಅದು ಪಂದ್ಯವನ್ನು ನಮ್ಮ ಕಡೆ ಎಳೆದು ತಂದಿತು. ಕರ್ನಾಟಕ ಪರ ರಣಜಿ ಫೈನಲ್ ಪಂದ್ಯದಲ್ಲಿ ಗಳಿಸಿದ ಶತಕ ನನಗೆ ಇದುವರೆಗೆ ಸಾಕಷ್ಟು ತೃಪ್ತಿ ಕೊಟ್ಟ ಇನ್ನಿಂಗ್ಸ್. ಏಕೆಂದರೆ ಅದು ನಮಗೆ ಟ್ರೋಫಿ ಗೆದ್ದು ಕೊಟ್ಟಿತ್ತು. ಈಗ ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಗಳಿಸಿದ 87 ರನ್ ಕೂಡ ತೃಪ್ತಿ ನೀಡಿದೆ.
— ಗಣೇಶ್ ಸತೀಶ್, ವಿದರ್ಭ ತಂಡದ ಆಟಗಾರ.

ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವ ಹೊಂದಿದ್ದರೂ 30 ವರ್ಷದ ಗಣೇಶ್ ಸತೀಶ್ ಅವರಿಗೆ ಒಮ್ಮೆಯೂ ಐಪಿಎಲ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ”ಅವಕಾಶ ಸಿಕ್ಕಿದರೆ ಐಪಿಎಲ್ ಟೂರ್ನಿಯಲ್ಲಿ ಖುಷಿಯಿಂದ ಆಡುತ್ತೇನೆ. ಆದರೆ ನನ್ನ ಜೀವನದ ದೊಡ್ಡ ಕನಸೆಂದರೆ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು. ಆ ಕನಸು ಇನ್ನೂ ಹಾಗೆಯೇ ಇದೆ” ಎಂದು ಗಣೇಶ್ ಸತೀಶ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

6 + 2 =