ಪ್ರೇಕ್ಷಕರ ತಪ್ಪಿಗೆ ಸ್ಟೀವನ್ ಸ್ಮಿತ್ ಕ್ಷಮೆ ಯಾಚಿಸಿದ ವಿರಾಟ್ ಕೊಹ್ಲಿ

0

ಲಂಡನ್, ಜೂನ್ 10: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್ ಮನ್ ಮಾತ್ರವಲ್ಲ. ಅವರಲ್ಲೊಬ್ಬ ಮಾನವೀಯ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿಯಿದ್ದಾನೆ. ಇದಕ್ಕೆ ಸಾಕ್ಷಿ ಲಂಡನ್ ನ ಓವಲ್ ಮೈದಾನದಲ್ಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯ.

ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಚೀಟರ್(ಮೋಸಗಾರ), ಚೀಟರ್ ಎಂದು ಹೀಯಾಳಿಸಿದ್ದ ಭಾರತ ತಂಡದ ಅಭಿಮಾನಿಗಳ ಪರವಾಗಿ ಕೊಹ್ಲಿ ಸ್ಮಿತ್ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಅಷ್ಟಕ್ಕೂ ನಡೆದದ್ದೇನೆಂದರೆ, ಭಾರತದ ಬ್ಯಾಟಿಂಗ್ ಸಂದರ್ಭದಲ್ಲಿ ಸ್ಟೀವನ್ ಸ್ಮಿತ್ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಭಾರತ ತಂಡದ ಅಭಿಮಾನಿಗಳು ಸ್ಮಿತ್ ಅವರನ್ನು ಮೋಸಗಾರ, ಮೋಸಗಾರ ಎಂದು ಹೀಯಾಳಿಸಿದರು. ಬ್ಯಾಟಿಂಗ್ ನಡೆಸುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ವರ್ತನೆಯಿಂದ ಸಿಡಿಮಿಡಿಗೊಂಡರು. ಅಷ್ಟೇ ಅಲ್ಲದೆ, ಸ್ಮಿತ್ ಅವರನ್ನು ಹೀಯಾಳಿಸಬೇಡಿ, ಚಪ್ಪಾಳೆಯ ಮೂಲಕ ಅವರನ್ನು ಬೆಂಬಲಿಸಿ ಎಂದು ಮೈದಾನದ ಮಧ್ಯದಿಂದಲೇ ಭಾರತೀಯ ಅಭಿಮಾನಿಗಳಿಗೆ ಮನವಿ ಮಾಡಿದರು. ಕೊಹ್ಲಿ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ನಂತರ ಸ್ಮಿತ್ ಅವರನ್ನು ಹೀಯಾಳಿಸಲಿಲ್ಲ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೇಪ್ಟೌನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ನಡೆಸಿದ ಆರೋಪಕ್ಕೆ ಗುರಿಯಾಗಿದ್ದರು. ನಂತರ ಇಬ್ಬರ ಮೇಲೂ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಶಿಕ್ಷೆ ಹೇರಿತ್ತು. ನಿಷೇಧ ಶಿಕ್ಷೆ ಮುಗಿಸಿರುವ ಸ್ಮಿತ್ ಮತ್ತು ವಾರ್ನರ್ ವಿಶ್ವಕಪ್ ಟೂರ್ನಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮರಳಿದ್ದಾರೆ. ಆದರೆ ಇಂಗ್ಲೆಂಡ್ ನಲ್ಲಿ ಪ್ರೇಕ್ಷಕರು ಸ್ಮಿತ್ ಅವರನ್ನು ಚೀಟರ್, ಚೀಟರ್ ಎಂದು ಹೀಯಾಳಿಸುತ್ತಿದ್ದಾರೆ.

ಮೈದಾನದಲ್ಲಿ ನಡೆದ ಘಟನೆಯ ಬಗ್ಗೆ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ‘’ಇಲ್ಲಿ ಭಾರತ ತಂಡದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುವುದು ನನಗೆ ಇಷ್ಟವಿಲ್ಲ. ನನ್ನ ಪ್ರಕಾರ ಹೀಯಾಳಿಸುವಂಥದ್ದೇನೂ ಸ್ಟೀವನ್ ಸ್ಮಿತ್ ಮಾಡಿಲ್ಲ. ಅವರು ಕ್ರಿಕೆಟ್ ಆಡುತ್ತಿದ್ದಾರೆ. ತಮ್ಮ ತಪ್ಪಿಗಾಗಿ ಅವರು ಕ್ಷಮೆ ಯಾಚಿಸಿದ್ದಾರೆ. ತಪ್ಪನ್ನು ಒಪ್ಪಿಕೊಂಡು ಮತ್ತೆ ಕ್ರಿಕೆಟ್ ಗೆ ಮರಳಿದ್ದಾರೆ. ಇಷ್ಟಾದ ಮೇಲೂ ಅವರನ್ನು ಹೀಯಾಳಿಸುವುದು ಸರಿಯಲ್ಲ’’ಎಂದಿದ್ದಾರೆ.

ಪ್ರೇಕ್ಷಕರ ವರ್ತನೆಗೆ ನಾನು ಮೈದಾನದಲ್ಲೇ ಸ್ಟೀವನ್ ಸ್ಮಿತ್ ಅವರಲ್ಲಿ ಕ್ಷಮೆ ಯಾಚಿಸಿದೆ. ಈ ಹಿಂದಿನ ಪಂದ್ಯಗಳಲ್ಲೂ ಸ್ಮಿತ್ ಅವರನ್ನು ಪ್ರೇಕ್ಷಕರು ಹೀಯಾಳಿಸಿದ್ದನ್ನು ನೋಡಿದ್ದೇನೆ. ಇದು ಸರಿಯಲ್ಲ. 

– ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

https://twitter.com/BCCI/status/1137814366084927488

https://twitter.com/cricketworldcup/status/1137806982235267073

LEAVE A REPLY

Please enter your comment!
Please enter your name here

1 × four =