ವಿಶ್ವಕಪ್ 2019: ಗಬ್ಬರ್ ಔಟ್, ಟೀಮ್ ಇಂಡಿಯಾಗೆ ಬಿಗ್ ಶಾಕ್

0

ಲಂಡನ್, ಜೂನ್ 19: ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಟೀಮ್ ಇಂಡಿಯಾ ಬಿಗ್ ಶಾಕ್ ಎದುರಾಗಿದೆ.

ಎಡಗೈ ಹೆಬ್ಬೆರಳ ಗಾಯಕ್ಕೊಳಗಾಗಿರುವ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಜೂನ್ 9ರಂದು ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಶಿಖರ್ ಧವನ್ ಹೆಬ್ಬೆರಳ ಗಾಯಕ್ಕೊಳಗಾಗಿದ್ದರು. ಆ ಪಂದ್ಯದಲ್ಲಿ ಶತಕ ಬಾರಿಸಿದ್ದ ಧವನ್, ನಂತರದ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಗಾಯದ ಪ್ರಮಾಣ ಗಂಭೀರವಾಗಿರುವುದರಿಂದ ಟೂರ್ನಿಯ ಉಳಿದ ಪಂದ್ಯಗಳಿಗೂ ಶಿಖರ್ ಧವನ್ ಅಲಭ್ಯರಾಗಿದ್ದಾರೆ.

ಶಿಖರ್ ಧವನ್ ಅವರ ಸ್ಥಾನದಲ್ಲಿ ರಿಷಭ್ ಪಂತ್ ಟೀಮ್ ಇಂಡಿಯಾದ ಅಂತಿಮ 15ರ ಬಳಗ ಸೇರಿಕೊಂಡಿದ್ದಾರೆ.

ಐಸಿಸಿ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾ, ಈಗಾಗಲೇ ದಕ್ಷಿಣ ಆಫ್ರಿಕಾ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಮೋಘ ಗೆಲುವು ದಾಖಲಿಸಿ ಒಟ್ಟು ಆರು ಅಂಕ ಸಂಪಾದಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದೆ. ಜೂನ್ 22ರಂದು ಸೌಥಾಂಪ್ಟನ್ನಲ್ಲಿ ನಡೆಯಲಿರುವ ತನ್ನ 5ನೇ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ, ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಉಪನಾಯಕ ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್ ಆಕರ್ಷಕ 57 ರನ್ ಗಳಿಸಿದ್ದರು. ಅಲ್ಲದೆ ಮೊದಲ ವಿಕೆಟ್’ಗೆ 136 ರನ್’ಗಳ ಜೊತೆಯಾಟವಾಡಿದ್ದರು.

LEAVE A REPLY

Please enter your comment!
Please enter your name here

16 + 6 =