ಮಹಿಳಾ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ಭಾರತದ ವನಿತೆಯರು

0

ಭಾರತದ ಮಹಿಳಾ ಕ್ರಿಕೆಟ್ ತಂಡ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಗೆದ್ದುಕೊಂಡಿದೆ. ಅಲ್ಲದೆ 2017ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಅಲ್ಲದೆ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಈ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡ ಮಿಥಾಲಿ ಬಳಗ, ಸತತ 2ನೇ ಏಕದಿನ ಸರಣಿ ಗೆಲುವು ದಾಖಲಿಸಿದ ಹಿರಿಮೆಗೆ ಪಾತ್ರವಾಯಿತು. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲೂ ಭಾರತದ ವನಿತೆಯರು ಏಕದಿನ ಸರಣಿ ಗೆದ್ದಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 43.3 ಓವರ್ ಗಳಲ್ಲಿ 161 ರನ್ ಗಳಿಗೆ ಆಲೌಟಾಯಿತು. ನೆಥಾಲಿ ಶಿವರ್ 85 ರನ್ ಗಳಿಸಿ ಮಿಂಚಿದರೆ, ಭಾರತ ಪರ ಮಧ್ಯಮ ವೇಗಿಗಳಾದ ಜೂಲನ್ ಗೋಸ್ವಾಮಿ(4/30) ಮತ್ತು ಶಿಖಾ ಪಾಂಡೆ(4/18) ತಲಾ 4 ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್(2/28) ಎರಡು ವಿಕೆಟ್ ಉರುಳಿಸಿದರು.

ನಂತರ ಗುರಿ ಬೆನ್ನಟ್ಟಿದ ಭಾರತ 2ನೇ ಓವರ್ ನಲ್ಲೇ ಜೆಮಿಮಾ ರಾಡ್ರಿಗ್ಸ್(0) ಅವರನ್ನು ಕಳೆದುಕೊಂಡಿತು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜವಾಬ್ದಾರಿಯುತ ಆಟವಾಡಿ ಏಕದಿನ ಕ್ರಿಕೆಟ್ ನಲ್ಲಿ 15ನೇ ಅರ್ಧಶತಕದೊಂದಿದೆ ತಂಡಕ್ಕೆ ಆಸರೆಯಾದರು. 74 ಎಸೆತಗಳನ್ನು ಎದುರಿಸಿದ ಮಂಧಾನ 7 ಬೌಂಡರಿಗಳು ಮತ್ತು 1 ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಪೂನಂ ರಾವತ್ 32 ರನ್ ಗಳಿಸಿದರೆ, ನಾಯಕಿ ಮಿಥಾಲಿ 69 ಎಸೆತಗಳಲ್ಲಿ ಅಜೇಯ 47 ರನನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. 41.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿದ ಭಾರತ ವಿಶ್ವಚಾಂಪಿಯನ್ನರಿಗೆ ಸೋಲುಣಿಸುವಲ್ಲಿ ಯಶಸ್ವಿಯಾಯಿತು.

LEAVE A REPLY

Please enter your comment!
Please enter your name here

twenty − 13 =