ಐಸಿಸಿ ವಿಶ್ವಕಪ್ 2019: ಕಪ್ ಗೆಲ್ಲುವಷ್ಟು ಸ್ಟ್ರಾಂಗ್ ಇದ್ಯಾ ಟೀಮ್ ಇಂಡಿಯಾ..?

0
PC: BCCI

ಮುಂಬೈ, ಏಪ್ರಿಲ್ 15: ಮೇ 30ರಂದು ಇಂಗ್ಲೆಂಡ್ ನಲ್ಲಿ ಆರಂಭವಾಗಲಿರುವ ಐಸಿಸಿ ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ನಾಯಕತ್ವದ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಏಕೈಕ ಆಟಗಾರನಾಗಿ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬೈನ ಬಿಸಿಸಿಐ ಕಛೇರಿಯಲ್ಲಿ ಆಯ್ಕೆ ಸಮಿತಿಯ ಸಭೆ ಸೋಮವಾರ ನಡೆಯಿತು. ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಸಹಿತ ಸಮಿತಿಯ ಸದಸ್ಯರು ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಭೆಯಲ್ಲಿ ಭಾಗವಹಿಸಿದ್ದರು.

PC: BCCI

ಮೀಸಲು ಆರಂಭಿಕನಾಗಿ ರಾಹುಲ್ ಅವಕಾಶ ಪಡೆದಿದ್ದರೆ, ಮೀಸಲು ವಿಕೆಟ್ ಕೀಪರ್ ಆಗಿ ತಮಿಳುನಾಡಿನ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ದೆಹಲಿಯ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಗೆ ಅವಕಾಶ ತಪ್ಪಿದೆ. ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಬದಲು ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಅವಕಾಶ ಪಡೆದಿದ್ದಾರೆ.

ಐಸಿಸಿ ವಿಶ್ವಕಪ್ 2019: ಭಾರತ ತಂಡ ಹೀಗಿದೆ

1. ಶಿಖರ್ ಧವನ್ (ಓಪನರ್)

PC: Shikhar/Twitter

ಭಾರತದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇಂಗ್ಲೆಂಡ್ ನಲ್ಲಿ ಉತ್ತಮ ದಾಖಲೆ ಹೊಂದಿರುವ ಶಿಖರ್ ಭಾರತದ ಫಸ್ಟ್ ಚಾಯ್ಸ್ ಓಪನರ್. ಐಸಿಸಿ ಟೂರ್ನಿಗಳಲ್ಲಿ ಶಿಖರ್ ಧವನ್ ಉತ್ತಮ ಪ್ರದರ್ಶನ ತೋರಿದ್ದಾರೆ. 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ನಡೆದ ಐಸಿಸಿ ವಿಶ್ವಕಪ್ ನಲ್ಲಿ ಶಿಖರ್ ಧವನ್ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಅಲ್ಲದೆ 2017ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಪರ ಗರಿಷ್ಠ ರನ್ ಸರದಾರನಾಗಿದ್ದರು. 

2. ರೋಹಿತ್ ಶರ್ಮಾ (ಉಪನಾಯಕ, ಓಪನರ್)

PC: Rohit/Twitter

ಶಿಖರ್ ಧವನ್ ಅವರೊಂದಿಗೆ ಉಪನಾಯಕ ರೋಹಿತ್ ಶರ್ಮಾ ಭಾರತ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಭಾರತ ತಂಡದ ಮತ್ತೊಬ್ಬ ಫಸ್ಟ್ ಚಾಯ್ಸ್ ಓಪನರ್. ಕಳೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ರೋಹಿತ್ ಅದ್ಭುತ ಆಟಗಾರ. ಕಳೆದ ಕೆಲ ವರ್ಷಗಳಿಂದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಅತ್ಯುತ್ತಮ ಜೊತೆಯಾಟಗಳನ್ನಾಡಿದೆ.

3. ವಿರಾಟ್ ಕೊಹ್ಲಿ (ನಾಯಕ, ಬ್ಯಾಟ್ಸ್‌ಮನ್)

PC: BCCI

ಕಪಿಲ್ ದೇವ್ ಮತ್ತು ಎಂ.ಎಸ್ ಧೋನಿ ಅವರ ನಂತರ ಐಸಿಸಿ ವಿಶ್ವಕಪ್ ಗೆದ್ದುಕೊಟ್ಟ ನಾಯಕನಾಗುವ ಅವಕಾಶ ವಿರಾಟ್ ಕೊಹ್ಲಿ ಅವರ ಮುಂದಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದ ನಂ.1 ಬ್ಯಾಟ್ಸ್ ಮನ್. ಅಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನೆಲಗಳಲ್ಲಿ ಭಾರತಕ್ಕೆ ಏಕದಿನ ಸರಣಿಗಳನ್ನೂ ಗೆದ್ದುಕೊಟ್ಟಿದ್ದಾರೆ.

ಇಂಗ್ಲೆಂಡ್ ನಲ್ಲಿ ವಿರಾಟ್ ಕೊಹ್ಲಿ ಎಂದಿನಂತೆ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರೆ ಭಾರತ 3ನೇ ಬಾರಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

4. ವಿಜಯ್ ಶಂಕರ್ (ಆಲ್ರೌಂಡರ್)

PC: Vijay Shankar/Twitter

ತಮಿಳುನಾಡಿನ ಯುವ ಆಲ್ರೌಂಡರ್ ವಿಜಯ್ ಶಂಕರ್, ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಅವರ ಸ್ಪರ್ಧೆಯನ್ನು ಹಿಮ್ಮೆಟ್ಟಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ವಿಜಯ್ ಶಂಕರ್ 4ನೇ ಕ್ರಮಾಂಕದಲ್ಲಿ ಆಡಿ ಗಮನ ಸೆಳೆದಿದ್ದರು. ಮಧ್ಯಮ ವೇಗದ ಬೌಲರ್ ಕೂಡ ಆಗಿರುವ ವಿಜಯ್ ಶಂಕರ್ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

5. ಎಂ.ಎಸ್ ಧೋನಿ (ವಿಕೆಟ್ ಕೀಪರ್)

PC: BCCI

2011ರಲ್ಲಿ ಭಾರತಕ್ಕೆ ಏಕದಿನ ವಿಶ್ವಕಪ್ ಹಾಗೂ 2007ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಮಾಜಿ ನಾಯಕ. ತಮ್ಮ 4ನೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಧೋನಿ ಭಾರತದ ಅವಿಭಾಜ್ಯ ಅಂಗ. ವಿಕೆಟ್ ಕೀಪಿಂಗ್ ನಲ್ಲಿ ಪಾದರಸದಂತಹ ವೇಗ ಹೊಂದಿರುವ ಧೋನಿ ಕೆಳ ಕ್ರಮಾಂಕದ ಬ್ಯಾಟಿಂಗ್ ನಲ್ಲಿ ತಂಡದ ಆಧಾರಸ್ಥಂಭ. ಅಷ್ಟೇ ಅಲ್ಲ, ಧೋನಿ ವಿಶ್ವದ ಬೆಸ್ಟ್ ಫಿನಿಷರ್ ಕೂಡ ಹೌದು.

ತಮ್ಮ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನ ಪಟ್ಟವರಿಗೆ ಧೋನಿ ಆಸ್ಟ್ರೇಲಿಯಾ ಪ್ರವಾಸ ಏಕದಿನ ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸುವ ಮೂಲಕ ಉತ್ತರ ಕೊಟ್ಟಿದ್ದರು. ಅಷ್ಟೇ ಅಲ್ಲದೆ, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ಸರಣಿಶ್ರೇಷ್ಠರಾಗಿ ಮೂಡಿ ಬಂದಿದ್ದರು. ಈ ಸರಣಿಯಲ್ಲಿ ಧೋನಿ 193.00 ಅದ್ಭುತ ಸರಾಸರಿಯಲ್ಲಿ ರನ್ ಗಳಿಸಿದ್ದರು.

6. ಕೇದಾರ್ ಜಾಧವ್ (ಆಲ್ರೌಂಡರ್)

PC: Kedar/Twitter

ಕೆಳ ಕ್ರಮಾಂಕದಲ್ಲಿ ಫಿನಿಷರ್ ಜವಾಬ್ದಾರಿ ಹೊಂದಿರುವ ಕೇದಾರ್ ಜಾಧವ್ ಉಪಯುಕ್ತ ಬೌಲರ್ ಕೂಡ ಹೌದು. ಪಾರ್ಟರ್ ಷಿಪ್ ಬ್ರೇಕರ್ ಎಂದೇ ಕರೆಸಿಕೊಳ್ಳುವ ಜಾಧವ್ ತಮ್ಮ ಆಫ್ ಸ್ಪಿನ್ ದಾಳಿಯಿಂದ ತಂಡಕ್ಕೆ ನೆರವಾಗಬಲ್ಲರು. ನಿರ್ಣಾಯಕ ಹಂತಗಳಲ್ಲಿ ಎದುರಾಳಿಯ ಜೊತೆಯಾಟಗಳನ್ನು ಮುರಿಯುವ ಸಾಮರ್ಥ್ಯವಿರುವ ಜಾಧವ್ ಅವರನ್ನು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಟ್ರಂಪ್ ಕಾರ್ಡ್ ಅಂದರೂ ತಪ್ಪಿಲ್ಲ.

7. ಹಾರ್ದಿಕ್ ಪಾಂಡ್ಯ (ಆಲ್ರೌಂಡರ್)

PC: Hardik Pandya/Twitter

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಬಲ್ಲ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಸಮತೋಲವನ್ನು ತಂದುಕೊಟ್ಟಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಹೆಸರುವಾಸಿಯಾಗಿರುವ ಪಾಂಡ್ಯ ಕೂಡ ಅತ್ಯುತ್ತಮ ಫಿನಿಷರ್. ಕೆಲವೇ ಎಸೆತಗಳಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಸಾಮರ್ಥ್ಯವಿರುವ ವಿಧ್ವಂಸಕ ಆಟಗಾರ. ಜೊತೆಗೆ ಬೌಲಿಂಗ್ ನಲ್ಲೂ ಮಿಂಚಬಲ್ಲ ಸಾಮರ್ಥ್ಯವಿರುವ ಪಾಂಡ್ಯ ವಿಕೆಟ್ ಟೇಕರ್ ಕೂಡ ಹೌದು.

8. ಭುವನೇಶ್ವರ್ ಕುಮಾರ್ (ವೇಗದ ಬೌಲರ್)

PC: Bhuvneshwar Kumar/Twitter

ಭಾರತ ತಂಡದ ಸ್ವಿಂಗ್ ಸುಲ್ತಾನ್ ಆಗಿರುವ ಭುವನೇಶ್ವರ್ ಕುಮಾರ್ ಹೊಸ ಚೆಂಡಿನಲ್ಲಿ ಅತ್ಯಂತ ಪರಿಣಾಮಕಾರಿ ಬೌಲರ್. ಅಷ್ಟೇ ಅಲ್ಲದೆ, ಡೆತ್ ಓವರ್ ಸ್ಪೆಷಲಿಸ್ಟ್ ಕೂಡ ಹೌದು. ಇಂಗ್ಲೆಂಡ್ ನ ಸೀಮಿಂಗ್ ಕಂಡಿಷನ್ ಗೆ ಹೇಳಿ ಮಾಡಿಸಿದಂತಹ ಬೌಲರ್. ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅವಕಾಶ ವಂಚಿತರಾಗಿದ್ದ ಭುವಿ, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ 8 ಪಂದ್ಯಗಳಿಂದ 15 ವಿಕೆಟ್ ಪಡೆದು ಮಿಂಚಿದ್ದರು.

9. ಮೊಹಮ್ಮದ್ ಶಮಿ (ವೇಗದ ಬೌಲರ್)

PC: Shami/Twitter

ಬಂಗಾಳದ ವೇಗಿ ಮೊಹಮ್ಮದ್ ಶಮಿ ವೇಗ ಹಾಗೂ ಸ್ವಿಂಗ್ ದಾಳಿಗೆ ಹೆಸರುವಾಸಿ. ಇಂಗ್ಲೆಂಡ್ ನೆಲದಲ್ಲಿ ಉತ್ತಮ ದಾಖಲೆ ಹೊಂದಿರುವ ಶಮಿ ಹೊಸ ಚೆಂಡಿನಲ್ಲಿ ಎಫೆಕ್ಟಿವ್ ಬೌಲರ್. 2015ರ ಐಸಿಸಿ ವಿಶ್ವಕಪ್ ನಲ್ಲಿ ಶಮಿ 16 ವಿಕೆಟ್ ಪಡೆದು ಮಿಂಚಿದ್ದರು. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಶಮಿ 9 ವಿಕೆಟ್ ಕಬಳಿಸಿದ್ದರು.

10. ಜಸ್ಪ್ರೀತ್ ಬುಮ್ರಾ (ವೇಗದ ಬೌಲರ್)

PC: Bumrah/Twitter

ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಭಾರತದ ಟ್ರಂಪ್ ಕಾರ್ಡ್ ಬೌಲರ್. ಅಲ್ಲದೆ ಮ್ಯಾಚ್ ವಿನ್ನರ್ ಕೂಡ ಹೌದು. ವಿಭಿನ್ನ ಬೌಲಿಂಗ್ ಶೈಲಿ ಹೊಂದಿರುವ  ಬುಮ್ರಾ ಕರಾರುವಾಕ್ ಬೌಲಿಂಗ್ ದಾಳಿಗೆ ಹೆಸರುವಾಸಿ. ಹೊಸ ಚೆಂಡಿನಲ್ಲಿ ಅಪಾಯಕಾರಿಯಾಗಿರುವ ಬುಮ್ರಾ, ಡೆತ್ ಓವರ್ ಗಳಲ್ಲೂ ಅತ್ಯಂತ ಪರಿಣಾಮಕಾರಿ ಬೌಲರ್. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ ಯಶಸ್ಸು ಗಳಿಸಿದರೆ ಭಾರತ ವಿಶ್ವಕಪ್ ಗೆಲ್ಲುವುದು ಕಷ್ಟವೇನಲ್ಲ.

11. ಕುಲ್ದೀಪ್ ಯಾದವ್ (ಸ್ಪಿನ್ನರ್)

PC: BCCI

ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಭಾರತದ ಸ್ಪಿನ್ ಬ್ರಹ್ಮಾಸ್ತ್ರ. 2017ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ನಂತರ ಕುಲ್ದೀಪ್ ಯಾದವ್ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಸಮಸ್ಯೆಯೊಡ್ಡುತ್ತಲೇ ಬಂದಿದ್ದಾರೆ. 39 ಏಕದಿನ ಪಂದ್ಯಗಳನ್ನಾಡಿರುವ ಕುಲ್ದೀಪ್ ಒಂದು ಬಾರಿ ಹ್ಯಾಟ್ರಿಕ್ ಸಹಿತ ಒಟ್ಟು 77 ವಿಕೆಟ್ಸ್ ಪಡೆದಿದ್ದಾರೆ. ತಮ್ಮ ರಿಸ್ಟ್ ಸ್ಪಿನ್ ಮೂಲಕ ಭಾರತಕ್ಕೆ ಪಂದ್ಯ ಗೆದ್ದುಕೊಡಬಲ್ಲ ಬೌಲರ್ ಕುಲ್ದೀಪ್ ಯಾದವ್.

12. ಯುಜ್ವೇಂದ್ರ ಚಹಾಲ್ (ಸ್ಪಿನ್ನರ್)

PC: Chahal/Twitter

ಹರ್ಯಾಣದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಭಾರತದ ಮತ್ತೊಂದು ಸ್ಪಿನ್ ಬ್ರಹ್ಮಾಸ್ತ್ರ. ಗೂಗ್ಲಿಗಳನ್ನು ಪರಿಣಾಮಕಾರಿಯಾಗಿ ಎಸೆಯುವ ಚಹಾಲ್, ಇತ್ತೀಚಿನ ವರ್ಷಗಳಲ್ಲಿ ಕುಲ್ದೀಪ್ ಯಾದವ್ ಜೊತೆ ಅತ್ಯುತ್ತಮ ಬೌಲಿಂಗ್ ಜೊತೆಯಾಟವಾಡುತ್ತಾ ತಂಡದ ಯಶಸ್ಸಿಗೆ ಕಾರಣರಾಗುತ್ತಿದ್ದಾರೆ. ಇಲ್ಲಿಯವರೆಗೆ 40 ಏಕದಿನ ಪಂದ್ಯಗಳನ್ನಾಡಿರುವ ಚಹಾಲ್ 71 ವಿಕೆಟ್ಸ್ ಪಡೆದಿದ್ದಾರೆ.

ಹರ್ಯಾಣದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಭಾರತದ ಮತ್ತೊಂದು ಸ್ಪಿನ್ ಬ್ರಹ್ಮಾಸ್ತ್ರ. ಗೂಗ್ಲಿಗಳನ್ನು ಪರಿಣಾಮಕಾರಿಯಾಗಿ ಎಸೆಯುವ ಚಹಾಲ್, ಇತ್ತೀಚಿನ ವರ್ಷಗಳಲ್ಲಿ ಕುಲ್ದೀಪ್ ಯಾದವ್ ಜೊತೆ ಅತ್ಯುತ್ತಮ ಬೌಲಿಂಗ್ ಜೊತೆಯಾಟವಾಡುತ್ತಾ ತಂಡದ ಯಶಸ್ಸಿಗೆ ಕಾರಣರಾಗುತ್ತಿದ್ದಾರೆ. ಇಲ್ಲಿಯವರೆಗೆ 40 ಏಕದಿನ ಪಂದ್ಯಗಳನ್ನಾಡಿರುವ ಚಹಾಲ್ 71 ವಿಕೆಟ್ಸ್ ಪಡೆದಿದ್ದಾರೆ.

13. ಕೆ.ಎಲ್ ರಾಹುಲ್ (ಓಪನರ್)

ಕರ್ನಾಟಕದ ಓಪನ್ ಕೆ.ಎಲ್ ರಾಹುಲ್ ಭಾರತದ 3ನೇ ಆರಂಭಿಕನಾಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ವಿಫಲಗೊಂಡರೂ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ರಾಹುಲ್ ಉತ್ತಮ ಫಾರ್ಮ್ ನಲ್ಲೇ ಇದ್ದಾರೆ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ರಾಹುಲ್, ಕಾಯಂ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರಿಗೆ ಬ್ಯಾಕಪ್ ಬ್ಯಾಟ್ಸ್ ಮನ್.

14. ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)

PC: DK/Twitter

ತಮಿಳುನಾಡಿನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಮೀಸಲು ವಿಕೆಟ್ ಕೀಪರ್ ಆಗಿ ವಿಶ್ವಕಪ್ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಅವಕಾಶ ಕೈತಪ್ಪಿದೆ. ವಿಕೆಟ್ ಕೀಪಿಂಗ್ ಅಷ್ಟೇ ಅಲ್ಲದೆ, ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಆಟವಾಡುವ ಸಾಮರ್ಥ್ಯ ದಿನೇಶ್ ಕಾರ್ತಿಕ್ ಅವರಲ್ಲಿದೆ. ಅಗತ್ಯ ಬಿದ್ದರೆ 4ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯಬಹುದು.

15. ರವೀಂದ್ರ ಜಡೇಜ (ಆಲ್ರೌಂಡರ್)

PC: Jadeja/Twitter

3ನೇ ಸ್ಪಿನ್ನರ್ ಹಾಗೂ ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚುವ ಜಡೇಜ ವಿಶ್ವದ ಶ್ರೇಷ್ಠ ಫೀಲ್ಡರ್ ಕೂಡ ಹೌದು. ಕ್ಷೇತ್ರರಕ್ಷಣೆಯಲ್ಲಿ 10-15 ರನ್ ಗಳನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here

2 − one =