ಹಿಸ್ಟ್ರಿ ರಿಪೀಟ್ಸ್: ಕನ್ನಡಿಗನ ಮುಂದೆ ನಡೆಯಲ್ಲ ಸೂಪರ್‌ಮ್ಯಾನ್ ಆಟ..!

0
PC: IPL/Twitter

ಜೈಪುರ, ಏಪ್ರಿಲ್ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿ’ವಿಲಿಯರ್ಸ್ ಕ್ರಿಕೆಟ್ ಜಗತ್ತಿನಲ್ಲಿ ಬ್ಯಾಟಿಂಗ್ ಸೂಪರ್ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ಕ್ರೀಡಾಂಗಣದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಬಾರಿಸುವ ಎಬಿಡಿ ಅವರನ್ನು ಮಿಸ್ಟರ್ 360 ಡಿಗ್ರಿ ಎಂದೂ ಕರೆಯುತ್ತಾರೆ.

ಆದರೆ ಐಪಿಎಲ್ ನಲ್ಲಿ ಕರ್ನಾಟಕದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮುಂದೆ ಎಬಿಡಿ ಆಟ ನಡೆಯುವುದಿಲ್ಲ. ಐಪಿಎಲ್ ನಲ್ಲಿ ಶ್ರೇಯಸ್ ಗೋಪಾಲ್ ಮತ್ತು ಎಬಿ ಡಿ’ವಿಲಿಯರ್ಸ್ ಇಲ್ಲಿಯವರೆಗೆ 3 ಬಾರಿ ಮುಖಾಮುಖಿಯಾಗಿದ್ದಾರೆ. ಈ ಮೂರು ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್ ಅವರ 27 ಎಸೆತಗಳಲ್ಲಿ ಎಬಿಡಿ 21 ರನ್ ಮಾತ್ರ ಗಳಿಸಿದ್ದಾರೆ. ಅಷ್ಟೇ ಅಲ್ಲ, 3 ಬಾರಿ ಕನ್ನಡಿಗನಿಗೆ ವಿಕೆಟ್ ಒಪ್ಪಿಸಿದ್ದಾರೆ. ಕಳೆದ ವರ್ಷದ ಐಪಿಎಲ್ ನ ಎರಡೂ ಪಂದ್ಯಗಳಲ್ಲಿ ಶ್ರೇಯಸ್ ಗೋಪಾಲ್, ಎಬಿ ಡಿ’ವಿಲಿಯರ್ಸ್ ಅವರ ವಿಕೆಟ್ ಪಡೆದಿದ್ದರು. ಅಲ್ಲದೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿಡಿ ಜೊತೆ ವಿರಾಟ್ ಕೊಹ್ಲಿ ಅವರ ವಿಕೆಟ್ ಕೂಡ ಪಡೆದಿದ್ದರು.

ವಿಶೇಷ ಎಂದರೆ ಈ ಬಾರಿಯ ಐಪಿಎಲ್ ನಲ್ಲೂ ಶ್ರೇಯಸ್ ಗೋಪಾಲ್, ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ’ವಿಲಿಯರ್ಸ್ ವಿಕೆಟ್ ಪಡೆದಿದ್ದಾರೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ 12 ರನ್ನಿತ್ತು 3 ವಿಕೆಟ್ ಪಡೆದು ಮಿಂಚಿದ್ದಾರೆ. ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಸೂಪರ್‌ಮ್ಯಾನ್ ಎಬಿ ಡಿ’ವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್‌ನ ಬಿಗ್‌ಹಿಟ್ಟರ್ ಶಿಮ್ರಾನ್ ಹೆಟ್ಮಾಯರ್ ವಿಕೆಟ್ ಪಡೆದ ಶ್ರೇಯಸ್ ಗೋಪಾಲ್ ಆರ್‌ಸಿಬಿ ಬ್ಯಾಟಿಂಗ್ ಕ್ರಮಾಂಕವನ್ನು ಧ್ವಂಸ ಮಾಡಿದರು. ವಿರಾಟ್ ಕೊಹ್ಲಿ ಅವರನ್ನು ಗೂಗ್ಲಿ ಮೂಲಕ ಕ್ಲೀನ್ ಬೌಲ್ಡ್ ಮಾಡಿದ ಶ್ರೇಯಸ್, ಡಿ’ವಿಲಿಯರ್ಸ್ ಅವರನ್ನು ಕಾಟ್ and ಬೌಲ್ಡ್ ಮೂಲಕ ಪೆವಿಲಿಯನ್‌ಗಟ್ಟಿದರು.

LEAVE A REPLY

Please enter your comment!
Please enter your name here

5 + fifteen =