ಬೆಂಗಳೂರು ರೈನೋಸ್‍ಗೆ ಚೊಚ್ಚಲ ಐಐಪಿಕೆಎಲ್ ಕಿರೀಟ

0

ಫೈನಲ್‍ನಲ್ಲಿ ಪುಣೆ ಪ್ರೈಡ್ ವಿರುದ್ಧ 42-38 ಅಂತರದ ಭರ್ಜರಿ ಗೆಲುವು

ಬೆಂಗಳೂರು, ಜೂನ್ 5: ಚೊಚ್ಚಲ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್‌ ಕಬಡ್ಡಿ ಲೀಗ್ ನಲ್ಲಿ ಚಾಂಪಿಯನ್ ಆದ ಬೆಂಗಳೂರು ರೈನೋಸ್ ತಂಡ 1 ಕೋಟಿ 25 ಲಕ್ಷ ಮೊತ್ತ ವನ್ನು ಬಾಚಿ ಕೊಂಡಿತು. ಇನ್ನೂ ಕೇವಲ 4 ಅಂಕಗಳಿಂದ ಚಾಂಪಿಯನ್ ಸ್ಥಾನ ತಪ್ಪಿಸಿಕೊಂಡ ಪುಣೆ ಪ್ರೈಡ್ 75 ಲಕ್ಷ ಹಾಗೂ ಡೆಲ್ಲಿ ವಿರುದ್ಧ ರೋಚಕ ಜಯ ಸಾಧಿಸಿ 3 ನೇ ಸ್ಥಾನ ಗಿಟ್ಟಿಸಿಕೊಂಡ ಚೆನ್ನೈ 50 ಲಕ್ಷ ಗಳಿಸಿದವು.

ಪಂದ್ಯದುದ್ದಕ್ಕೂ ನಡೆದ ರೋಚಕ ಹಣಾಹಣಿಯಲ್ಲಿ ಆತಿಥೇಯ ಬೆಂಗಳೂರು ರೈನೋಸ್, ಪುಣೆ ಪ್ರೈಡ್ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚೊಚ್ಚಲ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ  ಬೆಂಗಳೂರು ರೈನೋಸ್, ಪುಣೆ ಎದುರು 42-38 ಅಂಕಗಳಿಂದ ಜಯಭೇರಿ ಬಾರಿಸಿತು.

ಪಂದ್ಯದ ಆರಂಭದಿಂದಲೇ ಎರಡೂ ತಂಡಗಳ ಆಟಗಾರರಿಂದ ಜಿದ್ದಾಜಿದ್ದಿನ ಕಾದಾಟ ನಡೆಯಿತು. ಮೊದಲ ರೇಡಿಂಗ್‍ನಲ್ಲಿ ಬೆಂಗಳೂರು ಅಂಕಗಳಿಸುವಲ್ಲಿ ವಿಫಲವಾಯಿತು. ಆದರೆ ಪುಣೆ ಮೊದಲ ರೇಡಿಂಗ್‍ನಲ್ಲಿ ಅಂಕಗಳಿಸಿ, ಆರಂಭದಲ್ಲೇ ಆತಿಥೇಯ ತಂಡಕ್ಕೆ ಟಕ್ಕರ್ ನೀಡಿತು. 3ನೇ ರೇಡಿಂಗ್‍ನಲ್ಲಿ ಪುಣೆ ತಂಡದ ವಿಶಾಲ್‍ರನ್ನು ಯಶಸ್ವಿ ಟ್ಯಾಕಲ್ ಮಾಡಿದ ಬೆಂಗಳೂರು ಅಂಕದ ಖಾತೆ ತೆರೆಯಿತು. ಕೆಲ ಹೊತ್ತಿನ ಬಳಿಕ ಅಮರ್‍ಜಿತ್ ಸಿಂಗ್‍ರನ್ನು ಟ್ಯಾಕಲ್ ಮಾಡುವ ಮೂಲಕ ಬೆಂಗಳೂರು 4-4 ಹಾಗೂ 5-5 ರಿಂದ ಸಮಬಲ ಸಾಧಿಸಿತು. ಈ ಸಮಬಲ ಹೆಚ್ಚು ಹೊತ್ತು ಉಳಿಯಲಿಲ್ಲ. ಪುಣೆ ಆಟಗಾರರು ರೇಡಿಂಗ್‍ನಲ್ಲಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಅಂಕಗಳಿಕೆಯಲ್ಲಿ ಏರಿಕೆ ಕಂಡರು. ಮೊದಲ ಕ್ವಾರ್ಟರ್ ಅಂತ್ಯಕ್ಕೆ ಬೆಂಗಳೂರು 7-9 ರಿಂದ ಹಿನ್ನಡೆಯಿತು.

2ನೇ ಕ್ವಾರ್ಟರ್‍ನಲ್ಲಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋದ ಬೆಂಗಳೂರು, ಪುಣೆ ಆಟಗಾರರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಅದ್ಭುತ ಪ್ರದರ್ಶನ ತೋರಿದ ಬೆಂಗಳೂರು ಪುಣೆ ತಂಡವನ್ನು ಎರಡಂಕಿ ಮೊತ್ತ ದಾಟಲು ಅವಕಾಶವೇ ಕಲ್ಪಿಸಲಿಲ್ಲ. ರೇಡಿಂಗ್ ಹಾಗೂ ಟ್ಯಾಕಲ್‍ನಲ್ಲಿ ಪ್ರಾಬಲ್ಯ ಸಾಧಿಸಿದ ಬೆಂಗಳೂರು 14-6 ರಿಂದ ಪುಣೆಯನ್ನು ಹಿಂದಿಕ್ಕಿತು.

ಇನ್ನೂ 3ನೇ ಕ್ವಾರ್ಟರ್‍ನಲ್ಲಿ ಎರಡೂ ತಂಡಗಳು ಉತ್ತಮ ಹೋರಾಟ ನಡೆಸಿದವು. ಚೊಚ್ಚಲ ಚಾಂಪಿಯನ್ ಆಗುವ ಉತ್ಸಾಹದಲ್ಲಿ ಎರಡೂ ತಂಡಗಳು ಸಮಬಲ ಕಾದಾಟದಿಂದ ನೆರೆದಿದ್ದ ಪ್ರೇಕ್ಷಕರ ಗಮನಸೆಳೆದವು. ರೋಚಕ ಹೋರಾಟ ಕಂಡು ಬಂದ ಪಂದ್ಯದಲ್ಲಿ ಉಭಯ ತಂಡಗಳ ಹೋರಾಟ 10-10 ರಿಂದ ಸಮಬಲ ಸಾಧಿಸಿದವು. 3 ಕ್ವಾರ್ಟರ್‍ಗಳ ಅಂತ್ಯದ ವೇಳೆಗೆ ಬೆಂಗಳೂರು 31-25 ಅಂಕಗಳಿಂದ ಮುನ್ನಡೆ ಸಾಧಿಸಿತ್ತು.

ಕೊನೆಯ ಕ್ವಾರ್ಟರ್ ಆರಂಭಕ್ಕೂ ಮುನ್ನ ಉತ್ತಮ ಮುನ್ನಡೆ ಸಾಧಿಸಿದ್ದ ಬೆಂಗಳೂರು, ಪುಣೆ ಆಟಗಾರರ ಎಲ್ಲಾ ತಂತ್ರಗಳನ್ನು ಉಲ್ಟಾ ಮಾಡುವಲ್ಲಿ ಯಶಸ್ವಿಯಾಯಿತು. ಆದರೂ ಪುಣೆ 13-11 ಅಂಕಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಬೆಂಗಳೂರು 4 ಅಂಕಗಳ ಅಂತರದಲ್ಲಿ ಪುಣೆ ತಂಡವನ್ನು ಬಗ್ಗು ಬಡಿದು ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಗರಿ ಸಿಕ್ಕಿಸಿಕೊಂಡಿತು.

ಪಂದ್ಯ ಮುಕ್ತಾಯಕ್ಕೆ ಕೆಲವೇ ಸೆಕೆಂಡ್‍ಗಳು ಬಾಕಿ ಇದ್ದಾಗ ಅದ್ಭುತ ಆಟವಾಡಿದ ಸುನೀಲ್ ಕುಮಾರ್ ಚೆನ್ನೈ ತಂಡಕ್ಕೆ ಜಯ ತಂದಿತ್ತರು.

ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚೊಚ್ಚಲ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಟೂರ್ನಿಯ 3 ಹಾಗೂ 4ನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಆತಿಥೇಯ ಚೆನ್ನೈ ಚಾಲೆಂಜರ್ಸ್, ದಿಲೇರ್ ಡೆಲ್ಲಿ ವಿರುದ್ಧ 37-36 ಅಂಕಗಳಿಂದ ಗೆಲುವು ಪಡೆಯಿತು.

ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳಿಂದ 7ರಲ್ಲಿ ಗೆದ್ದು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೆಮೀಸ್‍ಗೇರಿದ್ದ ದಿಲೇರ್ ಡೆಲ್ಲಿ, ಸೆಮಿಫೈನಲ್‍ನಲ್ಲಿ ಬೆಂಗಳೂರು ವಿರುದ್ಧ ಸೋತು ಫೈನಲ್‍ಗೇರುವ ಅವಕಾಶದಿಂದ ವಂಚಿತವಾಗಿತ್ತು. 3ನೇ ಸ್ಥಾನಕ್ಕಾಗಿ ನಡೆದ ಕಾದಾಟದಲ್ಲಿ ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆರಂಭದ 8ನೇ ರೇಡಿಂಗ್ ವರೆಗೂ ಡೆಲ್ಲಿ ಖಾತೆ ತೆರೆಯದಂತೆ ಚೆನ್ನೈ ಆಟಗಾರರು ನೋಡಿಕೊಂಡಿದ್ದರು. ಇದರ ಪರಿಣಾಮವಾಗಿ ಮೊದಲ ಕ್ವಾರ್ಟರ್‍ನಲ್ಲಿ ಚೆನ್ನೈ ಚಾಲೆಂಜರ್ಸ್ 10-6 ಅಂಕಗಳಿಂದ ಡೆಲ್ಲಿ ತಂಡದ ವಿರುದ್ಧ ಮುನ್ನಡೆ ಸಾಧಿಸಿತು.

2ನೇ ಕ್ವಾರ್ಟರ್‍ನಲ್ಲಿ ಡೆಲ್ಲಿ ತಂಡ, ಚೆನ್ನೈಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು. ರೇಡಿಂಗ್ ಹಾಗೂ ಟ್ಯಾಕಲ್‍ನಲ್ಲಿ ಪ್ರಾಬಲ್ಯ ಸಾಧಿಸಿದ ಡೆಲ್ಲಿ ತಂಡ 10-7 ಅಂಕಗಳಿಂದ ಚೆನ್ನೈ ತಂಡವನ್ನು ಹಿಮ್ಮೆಟ್ಟಿಸುವಲ್ಲಿ ಸಫಲವಾಯಿತು. ಆರಂಭದ ಎರಡು ಕ್ವಾರ್ಟರ್ ಅಂತ್ಯಕ್ಕೆ ಚೆನ್ನೈ 17-16 ಅಂಕಗಳಿಂದ ಡೆಲ್ಲಿ ಎದುರು ಅಲ್ಪ ಮುನ್ನಡೆ ಪಡೆಯಿತು.

ಮೂರನೇ ಕ್ವಾರ್ಟರ್‍ನಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದ ಚೆನ್ನೈ, ಡೆಲ್ಲಿ ತಂಡಕ್ಕೆ ಹೆಚ್ಚಿನ ಅಂಕಗಳಿಸುವ ಅವಕಾಶವನ್ನು ತಪ್ಪಿಸಿತು. ಇದರಿಂದಾಗಿ ಚೆನ್ನೈ, ಡೆಲ್ಲಿ ವಿರುದ್ಧ 11-8 ಅಂಕಗಳಿಂದ ಮುನ್ನಡೆಯಿತು.

ಕೊನೆಯ ಹಾಗೂ 4ನೇ ಕ್ವಾರ್ಟರ್‍ನಲ್ಲಿ ರೋಚಕ ಕಾದಾಟಕ್ಕೆ ಪಂದ್ಯ ಸಾಕ್ಷಿಯಾಯಿತು. ಎರಡೂ ತಂಡಗಳ ಆಟಗಾರರು ಸಮಬಲದ ಹೋರಾಟ ನಡೆಸಿದರು. ಕೊನೆಯಲ್ಲಿ ಡೆಲ್ಲಿ ವಿರುದ್ಧ 3 ಅಂಕಗಳಿಸಿ ಮುನ್ನಡೆ ಸಾಧಿಸಿದ ಚೆನ್ನೈ ಪಂದ್ಯ ಗೆದ್ದಿತು.

ಕಬಡ್ಡಿಗೆ ಪ್ರಧಾನಿ ಪ್ರೋತ್ಸಾಹ ದೊರೆಯಲಿ: ವಜುಭಾಯಿ ವಾಲಾ

ದೇಶದ ಗ್ರಾಮೀಣ ಕ್ರೀಡೆ ಕಬಡ್ಡಿ ಬಗ್ಗೆ ಹೆಚ್ಚು ಆಕರ್ಷಿತರಾಗಿರುವ ಪ್ರಧಾನಿ ನರೇಂದ್ರ ಮೊದಿ ಮತ್ತು ಸಚಿವ ರಾಜನಾಥ್ ಸಿಂಗ್ ಅವರು ಕಬಡ್ಡಿ ಕ್ರೀಡೆಯನ್ನು ಇನ್ನಷ್ಟು ಎತ್ತರಕ್ಕೇರಿಸಲು ನೆರವಾಗಬೇಕಿದೆ ಎಂದು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಚೊಚ್ಚಲ ಆವೃತ್ತಿಯ ಇಂಡೋ-ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿಲೀಗ್‍ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಪಾಲರು, ದೇಶದಲ್ಲಿ ಕಬಡ್ಡಿ ಕ್ರೀಡಾಪಟುಗಳು ಹೆಚ್ಚಾಗಿದ್ದಾರೆ. ಹೀಗಾಗಿ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಪ್ರಧಾನಿ ಹಾಗೂ ರಾಜನಾಥ್ ಸಿಂಗ್ ಸಹ ಕಬಡ್ಡಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಇದರ ಬೆಳವಣಿಗೆಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯವಿದೆ. ರಾಷ್ಟ್ರದ ನರ-ನಾಡಿಯಲ್ಲೂ ಕಬಡ್ಡಿ ಕ್ರೀಡೆ ವ್ಯಾಪಿಸಿದ್ದು, ದೇಶದ ಗ್ರಾಮೀಣ ಕ್ರೀಡೆಯನ್ನು ಅಂ.ರಾ. ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ನ್ಯೂ ಕಬಡ್ಡಿ ಫೆಡರೇಷನ್ ಕಾರ್ಯದರ್ಶಿ ಪ್ರಸಾದ್ ಬಾಬು ನೇತೃತ್ವದಲ್ಲಿ ಐಐಪಿಕೆಎಲ್ ಅನ್ನು ಉತ್ತಮವಾಗಿ ಸಂಘಟಿಸಲಾಗಿದ್ದು, ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಬಿಜೆಪಿ ಮುಖಂಡರಾದ ಆರ್. ಅಶೋಕ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

8 − seven =